
ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನ ಮತ್ತು ಗಾಂಧಿ ಸಾಗರ ವನ್ಯಜೀವಿ ಅಭಯಾರಣ್ಯ ಬಳಿಕ ಮಧ್ಯಪ್ರದೇಶದಲ್ಲಿ ಚೀತಾಗೆ ಮತ್ತೊಂದು ಅವಾಸಸ್ಥಾನ ವಿಸ್ತರಣೆಯಾಗಿದೆ. ಸಾಗರ್ ಜಿಲ್ಲೆಯ ವೀರಾಂಗಣ ದುರ್ಗಾವತಿ ಹುಲಿ ಸಂರಕ್ಷಿತ ಪ್ರದೇಶವನ್ನು 3ನೇಯ ಆವಾಸಸ್ಥಾನವಾಗಿ ವಿಸ್ತರಣೆ ಮಾಡಲಾಗಿದೆ. ಬುಧವಾರ ಮುಖ್ಯಮಂತ್ರಿ ಮೋಹನ್ ಯಾದವ್ 3ನೇ ಆವಾಸಸ್ಥಾನಕ್ಕೆ ವ್ಯೋಮ್ ಮತ್ತು ನೀರಾ ಎಂಬ ಎರಡು ಚೀತಾಗಳನ್ನು ಬಿಡುಗಡೆಗೊಳಿಸಿದರು. ಈ ಹುಲಿ ಸಂರಕ್ಷಿತ ಪ್ರದೇಶವು 2339 ಚದರ ಕಿ.ಮೀ ವ್ಯಾಪ್ತಿ ಹೊಂದಿದೆ. 1993ರಲ್ಲಿ ಸ್ಥಾಪನೆಯಾದ ಪ್ರದೇಶವು 2023ರಲ್ಲಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆಯಾಗಿತ್ತು.
ಶಿಯೋಪುರ್ ಜಿಲ್ಲೆಯ 'ಕುನೋ ರಾಷ್ಟ್ರೀಯ ಉದ್ಯಾನವನ' ಹಾಗೂ ಮಂದ್‌ಸೌರ್‌ನ 'ಗಾಂಧಿ ಸಾಗರ ವನ್ಯಜೀವಿ ಅಭಯಾರಣ್ಯ'ಗಳ ನಂತರ, ಬುಂದೇಲ್‌ಖಂಡ್ ಪ್ರದೇಶದ ಈ ವೀರಾಂಗಣ ದುರ್ಗಾವತಿ ಹುಲಿ ಸಂರಕ್ಷಿತ ಪ್ರದೇಶವು ಚೀತಾಗಳ 3ನೇ ಪ್ರಮುಖ ನೆಲೆಯಾಗಿ ಹೊರಹೊಮ್ಮಿದೆ.
2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಆರಂಭಗೊಂಡ 'ಭಾರತದ ಚೀತಾ ಯೋಜನೆ' ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ದೇಶದಲ್ಲಿ ಚೀತಾಗಳ ಒಟ್ಟು ಸಂಖ್ಯೆ 60ಕ್ಕೆ ತಲುಪಿದೆ. ಮುಂದಿನ ತಿಂಗಳು ವೀರಾಂಗಣ ದುರ್ಗಾವತಿ ಹುಲಿ ಸಂರಕ್ಷಿತ ಪ್ರದೇಶಗೆ ಇನ್ನೆರಡು ಚೀತಾಗಳನ್ನು ತರಲಾಗುತ್ತದೆ. ಈ ನಾಲ್ಕು ಚೀತಾಗಳು ಈ ವಲಯದಲ್ಲಿ ತಮ್ಮ ಸಂತತಿಯನ್ನು ಮತ್ತಷ್ಟು ವಿಸ್ತರಿಸಲಿವೆ.
ಮಾನವ ಮತ್ತು ವನ್ಯಜೀವಿ ಸಂಘರ್ಷ ರಹಿತ: ಚೀತಾಗಳು ಎಂದಿಗೂ ಮನುಷ್ಯರ ಮೇಲೆ ಆಕ್ರಮಣ ಮಾಡುವುದಿಲ್ಲ, ಅವು ಹೊಂದಾಣಿಕೆಯಿಂದ ಜೀವಿಸುತ್ತವೆ. ಸ್ಥಳೀಯರು ಇವುಗಳೊಂದಿಗೆ ಸಾಮರಸ್ಯದಿಂದ ಬಾಳಲಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಸಂರಕ್ಷಿತ ಅರಣ್ಯದ ಸುತ್ತಮುತ್ತಲಿನ ಗ್ರಾಮಸ್ಥರ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಪ್ರಕಟಿಸಿದೆ. ವೀರಾಂಗಣ ದುರ್ಗಾವತಿ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದಲ್ಲಿರುವ ಗ್ರಾಮಸ್ಥರು ಪ್ರವಾಸೋದ್ಯಮಕ್ಕೆ ಪೂರಕವಾಗಿ ಹೋಂಸ್ಟೇ ನಿರ್ಮಿಸಲು ₹2 ಲಕ್ಷದಿಂದ ₹3 ಲಕ್ಷದವರೆಗೆ ಸರ್ಕಾರದಿಂದ ನೇರ ಧನಸಹಾಯ ನೀಡಲಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಅಭಯಾರಣ್ಯಗಳ ಮೂಲಕ ಸಂಗ್ರಹವಾದ ₹80 ಕೋಟಿ ಆದಾಯದಲ್ಲಿ ₹20 ಕೋಟಿಯನ್ನು ಸುತ್ತಮುತ್ತಲಿನ ಗ್ರಾಮಸ್ಥರ ಕಲ್ಯಾಣಕ್ಕಾಗಿ ವಿತರಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಬುಂದೇಲ್‌ಖಂಡಿ ಭಾಷೆಯಲ್ಲಿ ಸಿದ್ಧಪಡಿಸಲಾದ 'ರಣಹದ್ದು ಜನಸಂಖ್ಯಾ ಅಂದಾಜು 2026' ವರದಿ ಮತ್ತು 'ವೀರಾಂಗಣ ದುರ್ಗಾವತಿ ಹುಲಿ ಮೀಸಲು' ವಿಶೇಷ ಪುಸ್ತಕವನ್ನು ಅನಾವರಣಗೊಳಿಸಿದರು.
ಈ ಮೊದಲು 'ನೌರಾದೇಹಿ ಅಭಯಾರಣ್ಯ' ಎಂದೇ ಪ್ರಸಿದ್ಧವಾಗಿದ್ದ ವಿಡಿಟಿಆರ್, ಸಾಗರ, ದಾಮೋಹ್ ಮತ್ತು ನರಸಿಂಗಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರೋಬ್ಬರಿ 2,339 ಚದರ ಕಿಲೋಮೀಟರ್ ಪ್ರದೇಶದಲ್ಲಿದೆ. ಇದು ಮಧ್ಯಪ್ರದೇಶದ ಅತಿದೊಡ್ಡ ಹುಲಿ ಸಂರಕ್ಷಿತ ಪ್ರದೇಶವಾಗಿದೆ.
1997ರಲ್ಲಿ ಸ್ಥಾಪನೆಯಾಗಿದ್ದ ಈ ಪ್ರದೇಶವನ್ನು ನೌರಾದೇಹಿ ವನ್ಯಜೀವಿ ಅಭಯಾರಣ್ಯದೊಂದಿಗೆ ಸಂಯೋಜಿಸಿ, ಸೆಪ್ಟೆಂಬರ್ 20, 2023 ರಂದು ಅಧಿಕೃತವಾಗಿ 'ಹುಲಿ ಸಂರಕ್ಷಿತ ಪ್ರದೇಶ'ವೆಂದು ಘೋಷಿಸಲಾಯಿತು. ಚೀತಾಗಳ ಸುರಕ್ಷಿತ ರಕ್ಷಣೆ ಮತ್ತು ನೈಸರ್ಗಿಕ ವಾತಾವರಣಕ್ಕೆ ಹೊಂದಿಕೊಳ್ಳಲು 439 ಹೆಕ್ಟೇರ್ ಪ್ರದೇಶದಲ್ಲಿ ಆಧುನಿಕ ಆವರಣಗಳು ಹಾಗೂ ವಿಶೇಷ ಸೌಲಭ್ಯಗಳನ್ನು ಅರಣ್ಯ ಇಲಾಖೆ ನಿರ್ಮಿಸಿದೆ.
ಹುಲಿ, ಚಿರತೆ, ಸಾಂಬಾರ್, ನೀಲ್‌ಗೈ, ಕರಡಿ ಹಾಗೂ ಅಳಿವಿನಂಚಿನಲ್ಲಿರುವ ಭಾರತೀಯ ರಣಹದ್ದುಗಳಿಗೆ ಸುದೀರ್ಘ ಆಸರೆಯಾಗಿರುವ ಈ ಅಭಯಾರಣ್ಯದಲ್ಲಿ ಈಗ ಚೀತಾಗಳ ಸೇರ್ಪಡೆಯಾಗಿರುವುದು, ಬುಂದೇಲ್‌ಖಂಡ್ ಪ್ರದೇಶದ ಪರಿಸರ ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಗೆ ಭಾರಿ ಚೈತನ್ಯ ತರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ