ಭೋಪಾಲ್: ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಸಿನಿಮಾ ನಟರ ಪೋಸ್ಟರ್‌ಗಳಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ಜೈಲಿನಿಂದ ಬಿಡುಗಡೆಯಾದ ಕೊಲೆ ಯತ್ನ ಆರೋಪಿಗೆ ಆತನ ಹಿಂಬಾಲಕರು ಹಾಲಿನ ಅಭಿಷೇಕ ಮಾಡಿ ಸ್ವಾಗತಿಸಿದ್ದಾರೆ. ಕೇವಲ ಹಾಲಿನ ಅಭಿಷೇಕ ಮಾತ್ರವಲ್ಲ, ಪುಷ್ಪವೃಷ್ಟಿಗೆರೆದು ಊರಿನ ತುಂಬಾ ಆತನ ಮೆರವಣಿಗೆ ನಡೆಸಿ, ಹೂ ಹಾರ ಹಾಕಿ ಒಲಿಂಪಿಕ್‌ನಲ್ಲಿ ಸಾಧನೆ ಮಾಡಿದ ಕ್ರೀಡಾಳುವನ್ನು ಸ್ವಾಗತಿಸುವಂತೆ ಸ್ವಾಗತಿಸಿದ್ದಾರೆ. ಕೊಲೆ ಯತ್ನ ಆರೋಪಿಗೆ ಸಿಕ್ಕ ಈ ಭರ್ಜರಿ ಸ್ವಾಗತದ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಹೀಗೆ ತನ್ನ ಚೇಲಾಗಳಿಂದ ಭರ್ಜರಿಯಾಗಿ ಸ್ವಾಗತಿಸಲ್ಪಟ್ಟ ವ್ಯಕ್ತಿ, ಓರ್ವ ಕಾಂಗ್ರೆಸ್ ಕಾರ್ಪೋರೇಟರ್ ರಾಜು ಭದೊರಿಯಾ, ಈತನಿಗೆ ಬುಧವಾರ (ಆಗಸ್ಟ್ 24) ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕಿತ್ತು. ಜಾಮೀನು ಸಿಕ್ಕುತ್ತಿದ್ದಂತೆ ಜೈಲಿನತ್ತ ಬಂದ ಈತನ ಅಭಿಮಾನಿಗಳು ಅಲ್ಲಿಯೇ ಈತನಿಗೆ ಹೂ ಹಾರ ಹಾಕಿ ಪುಷ್ಟವೃಷ್ಟಿ ಮಾಡಿ ಮೆರವಣಿಗೆ ಮೂಲಕ ಕರೆದೊಯ್ದಿದ್ದಾರೆ. ಮೆರವಣಿಗೆಯುದ್ಧಕ್ಕೂ ಸಂಗೀತಾ ಹಾಗೂ ಬ್ಯಾಂಡ್ ವಾದ್ಯಗಳೊಂದಿಗೆ ಗಣಪತಿಯನ್ನು ಕರೆದೊಯ್ದಂತೆ ಈತನನ್ನು ಅಭಿಮಾನಿಗಳು ಕರೆದೊಯ್ದಿದ್ದಾರೆ. ಇಷ್ಟು ಸಾಲದೆಂಬಂತೆ ಆತನಿಗೆ ಹಾಲಿನ ಅಭಿಷೇಕವನ್ನು ಕೂಡ ಈತನ ಆಪ್ತರು ಮಾಡಿದ್ದಾರೆ. ಕೊಲೆ ಯತ್ನ ಆರೋಪಿಯೋರ್ವನಿಗೆ ಸಿಕ್ಕ ಈ ಅತೀಯಾದ ಮರ್ಯಾದೆ ನೋಡಿ ಜನ ದಂಗಾಗಿದ್ದಾರೆ.
ಇತ್ತ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಇಂದೋರ್‌ನ ಕಾಂಗ್ರೆಸ್ ಎಂಎಲ್‌ಎ ಸಂಜಯ್ ಶುಕ್ಲಾ, ಈ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕೌನ್ಸಿಲರ್ ರಾಜು ಬದೋರಿಯಾ ಅವರಿಗೆ ಜೈಲಿನಿಂದ ಜಾಮೀನು ಸಿಕ್ಕಿದೆ. ನಾನು ಅವರನ್ನು ಸ್ವಾಗತಿಸುತ್ತೇನೆ. ಅವರ ಗೌರವಾರ್ಥವಾಗಿ ಆಯೋಜಿಸಿದ್ದ ಜಾಥಾದಲ್ಲಿ ಭಾಗವಹಿಸಿದ್ದೆ. ಈ ಸಂದರ್ಭದಲ್ಲಿ ನನ್ನ ಜೊತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅನೇಕ ಜನರೂ ಭಾಗವಹಿಸಿದ್ದರು ಎಂದು ಸಂಜಯ್ ಶುಕ್ಲಾ ಬರೆದುಕೊಂಡಿದ್ದಾರೆ.
ಆದರೆ ಈ ಘಟನೆಯನ್ನು ಆಡಳಿತರೂಢ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಮಾತನಾಡಿದ ಮಧ್ಯಪ್ರದೇಶ ಬಿಜೆಪಿ ವಕ್ತಾರ ಉಮೇಶ್ ಶರ್ಮಾ, ಕೊಲೆ ಪ್ರಕರಣವೊಂದರ ಆರೋಪಿಯನ್ನು ಹೀಗೆ ವೈಭವೀಕರಿಸುವುದು ಹಾಗೂ ಸ್ವಾಗತಿಸಿರುವುದು ಗಂಭೀರ ವಿಚಾರ, ಕಾಂಗ್ರೆಸ್ ರಾಜಕೀಯದೊಂದಿಗೆ ಅಪರಾಧವನ್ನು ಸೇರಿಸುತ್ತಿದೆ ಎಂದು ಹೇಳಿದರು.
ಪೊಲೀಸರು ಹೇಳುವಂತೆ, ಜುಲೈ ರಂದು ಇಂದೋರ್ ಸ್ಥಳೀಯ ಚುನಾವಣೆ ಸಂದರ್ಭದಲ್ಲಿ ತನ್ನ ವಿರೋಧಿ, ಬಿಜೆಪಿ ಚುನಾವಣಾ ಅಭ್ಯರ್ಥಿ ಚಂದುರಾವ್ ಶಿಂಧೆ ಅವರನ್ನು ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ರಾಜು ಭಡೋರಿಯಾನನ್ನು ಜುಲೈನಲ್ಲಿ ರಾಜಸ್ಥಾನದ ಕೋಟಾದಲ್ಲಿ ಪೊಲೀಸರು ಬಂಧಿಸಿದ್ದರು. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ರ (ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಲಾಗಿತ್ತು. ಆದಾಗ್ಯೂ ಬುಧವಾರ ಆತನಿಗೆ ಕೋರ್ಟ್ ಜಾಮೀನು ನೀಡಿದೆ. ಈ ಪ್ರಕರಣದಲ್ಲಿ ಭಡೋರಿಯಾ ಪತ್ನಿಯನ್ನು ಕೂಡ ಬಂಧಿಸಲಾಗಿತ್ತು. ಆದರೆ ಈ ಕೊಲೆಯತ್ನ ಪ್ರಕರಣ ನಡೆದ ಸಂದರ್ಭದಲ್ಲಿ ಭದೋರಿಯಾ ಆ ಸ್ಥಳದಲ್ಲಿ ಇರಲಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ