ಕುಂಭ ಮೇಳ ಹರಿವ ನೀರಲ್ಲಿ ನಡೆಯುತ್ತೆ, ಕೊರೋನಾ ಬರಲ್ಲ| ಗಂಗಾಮಾತೆಯ ಆಶೀರ್ವಾದವೂ ಇದೆ| ಉತ್ತರಾಖಂಡ ಮುಖ್ಯಮಂತ್ರಿ ರಾವತ್ ‘ಸ್ಪಷ್ಟನೆ’
ಹರಿದ್ವಾರ(ಏ.15): ಹಾಸ್ಯಾಸ್ಪದ ಹೇಳಿಕೆಗಳಿಂದ ಇತ್ತೀಚೆಗೆ ತೀವ್ರ ಟೀಕೆಗೆ ಗುರಿಯಾಗಿದ್ದ ಉತ್ತರಾಖಂಡ ಮುಖ್ಯಮಂತ್ರಿ ತೀರ್ಥಸಿಂಗ್ ರಾವತ್, ‘ಕುಂಭಮೇಳ ಹರಿವ ನದಿಯಲ್ಲಿ ನಡೆಯುವಂಥದ್ದು. ಇಲ್ಲಿ ಕೊರೋನಾ ಬರುವುದಿಲ್ಲ’ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಈ ಬಗ್ಗೆ ಬುಧವಾರ ಹೇಳಿಕೆ ನೀಡಿದ ರಾವತ್, ‘ತಬ್ಲೀಘಿ ಜಮಾತ್ ಕಳೆದ ವರ್ಷ ದಿಲ್ಲಿಯಲ್ಲಿ ನಡೆಸಿದ ಧರ್ಮಸಭೆ ಒಳಾಂಗಣದಲ್ಲಿ ನಡೆದಿದ್ದು. ಒಂದೇ ಹಾಲ್‌ನಲ್ಲಿ ಜನರು ಅಕ್ಕಪಕ್ಕ ಮಲಗಿದರು. ಹೊದಿಕೆಗಳನ್ನು ಹಂಚಿಕೊಂಡರು. ಆದರೆ ಕುಂಭ ಹಾಗಲ್ಲ. ಹರಿದ್ವಾರದಿಂದ ಹೃಷಿಕೇಶ, ನೀಲಕಂಠದವರೆಗೆ 16 ಘಾಟ್ (ತೀರ)ಗಳಲ್ಲಿ ನಡೆಯುತ್ತಿದೆ. ಜನರು ಒಂದು ಕಡೆ ಸೇರದೆ ವಿವಿಧೆಡೆ ಸ್ನಾನ ಮಾಡುತ್ತಾರೆ. ಮೇಲಾಗಿ, ಇಲ್ಲಿನ ನೀರಿನ ಹರಿವಿನಲ್ಲಿ ಗಂಗಾಮಾತೆಯ ಆಶೀರ್ವಾದವಿದೆ. ಇಲ್ಲಿ ಕೊರೋನಾ ಬರಲ್ಲ’ ಎಂದಿದ್ದಾರೆ.
ಕೊರೋನಾ ತಾರಕಕ್ಕೇರುವ ಸಂದರ್ಭದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಉತ್ತರಾಖಂಡದ ಹರಿದ್ವಾರ, ಹೃಷಿಕೇಶ ಮೊದಲಾದ ಕಡೆ ಕುಂಭಮೇಳ ನಡೆಸುತ್ತಿರುವುದಕ್ಕೆ ವ್ಯಾಪಕ ಟೀಕೆಗಳು ಕೇಳಿಬಂದಿವೆ. 1000ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳೂ ಕುಂಭದಲ್ಲಿ ದಾಖಲಾಗಿವೆ.