
ನವದೆಹಲಿ : ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಹಿನ್ನೆಲೆ ಕರ್ನಾಟಕ ಸೇರಿ ದೇಶಾದ್ಯಂತ ಹೋಟೆಲ್, ರೆಸ್ಟೋರೆಂಟ್, ಬೇಕರಿ ಮಾಲೀಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಪ.ಬಂಗಾಳ, ಒಡಿಶಾ, ದೆಹಲಿ ಸೇರಿದಂತೆ ಹಲವು ರಾಜ್ಯಗಳ ಹೋಟೆಲ್ ಸಂಘ-ಸಂಸ್ಥೆಗಳು, ‘ಸಮಸ್ಯೆ ತೀವ್ರಗತಿಯಲ್ಲಿರುವ ಕಾರಣ ಬೇಗ ಬಹೆಹರಿಸಬೇಕು. ಇಲ್ಲದಿದ್ದರೆ ಹೋಟೆಲ್ ಮುಚ್ಚುವ ಸ್ಥಿತಿ ಬಂದೀತು’ ಎಂದು ಸರ್ಕಾರಕ್ಕೆ ಎಚ್ಚರಿಸಿವೆ.
ಅನೇಕ ರಾಜ್ಯಗಳಲ್ಲಿ ಹೋಟೆಲ್‌ಗಳ ಸೇವೆ ಬಾಧಿತವಾಗಿದೆ. ವಿಶೇಷವಾಗಿ ಪಾಂಡಿಚೇರಿಯಲ್ಲಿ ಎಲ್‌ಪಿಜಿ ಅಭಾವದಿಂದ ಟೀ, ಕಾಫಿ ಮಾರಾಟವನ್ನೇ ಬಂದ್ ಮಾಡಲು ನಿರ್ಧರಿಸಿದ್ದಾರೆ. ತಮಿಳುನಾಡು ಹೋಟೆಲ್‌ಗಳಲ್ಲಿನ ಮೆನು ಕಡಿತಗೊಳಿಸಲಾಗಿದೆ.
ನೆರೆ ರಾಜ್ಯ ತಮಿಳುನಾಡಿನಲ್ಲಿಯೂ ಎಲ್‌ಪಿಜಿ ಅಭಾವ ಸೃಷ್ಟಿಯಾಗಿದೆ. ಇನ್ನು 1-2 ದಿನಗಳಿಗಾವಷ್ಟು ದಾಸ್ತಾನು ಮಾತ್ರವೇ ಉಳಿದಿದೆ. ಇಲ್ಲಿನ ಹಲವು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಸಿಲಿಂಡರ್ ಉಳಿಸುವ ಸಲುವಾಗಿ ದೋಸೆ, ಚಹಾ, ಕಾಫಿ ಅಂತಹ ಮೆನುಗಳನ್ನು ಕಡಿತಗೊಳಿಸಿ, ಸೀಮಿತ ಸಂಖ್ಯೆಯ ಆಹಾರವನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ.
ಪಾಂಡಿಚೇರಿಯಲ್ಲಿಯೂ ಕಡಿಮೆ ಗ್ಯಾಸ್ ಖರ್ಚಾಗುವ ಆಹಾರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೆಲವು ಹೋಟೆಲ್‌ಗಳಲ್ಲಿ ಇಂಧನ ಉಳಿಸುವ ಸಲುವಾಗಿ ಸಂಜೆ ಸಮಯದಲ್ಲಿ ಟೀ, ಕಾಫಿ ಬದಲು ಗ್ರಾಹಕರಿಗೆ ಜ್ಯೂಸ್ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಹೊಸದಾಗಿ ಹೋಟೆಲ್ ರೂಂಗಳನ್ನು ಬುಕ್ ಮಾಡುವವರಿಗೆ ಮುಂಚಿತವಾಗಿಯೇ ಎಲ್‌ಪಿಜಿ ಅಭಾವದ ಬಗ್ಗೆ ಮಾಲೀಕರು ತಿಳಿಸುತ್ತಿದ್ದಾರೆ.
ಪುರಿ ಮಧ್ಯಪ್ರವೇಶಕ್ಕೆ ಆಗ್ರಹ:
ಒಡಿಶಾ, ಪ.ಬಂಗಾಳ, ದೆಹಲಿ, ಮಹಾರಾಷ್ಟ್ರ ಇದೇ ಪರಿಸ್ಥಿತಿ ಸೃಷ್ಟಿಯಾಗಿದೆ. ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿನ ಕಳವಳ ಬಗ್ಗೆ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘ ಮಂಗಳವಾರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದು, ‘ಶೇ.40ರಷ್ಟು ಹೋಟೆಲ್‌ಗಳು ಎಲ್‌ಪಿಜಿ ಸಮಸ್ಯೆಯಿಂದ ಬಾಧಿತವಾಗಿವೆ. ಸುಗಮವಾಗಿ ಗ್ಯಾಸ್ ಪೂರೈಸಿ’ ಎಂದು ಆಗ್ರಹಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ