
ಭುವನೇಶ್ವರ (ಮಾ.3): ಒಡಿಯಾದಲ್ಲಿ ವಿದೇಶೀ ಮಹಿಳೆಯೊಬ್ಬರ ತೊಡೆಯ ಮೇಲೆ ಶ್ರೀ ಜಗನ್ನಾಥನ ಟ್ಯಾಟೂ ರಚಿಸಿದ್ದು ಭಾರೀ ವಿವಾದ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭುವನೇಶ್ವರದ ಟ್ಯಾಟೂ ಪಾರ್ಲರ್‌ನಲ್ಲಿ ಈ ಟ್ಯಾಟೂ ಹಾಕಿಸಿಕೊಂಡ ಮಹಿಳೆಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ ನಂತರ ಜಗನ್ನಾಥ ಭಕ್ತರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮಹಿಳೆ ಎನ್‌ಜಿಒ (ಸರಕಾರೇತರ ಸಂಸ್ಥೆ) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಭಾನುವಾರ ಜಗನ್ನಾಥ ಭಕ್ತರು ಸಹಿದ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಮಹಿಳೆ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 299 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಸೆಕ್ಷನ್ ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅಪಮಾನ ಮಾಡುವ ಉದ್ದೇಶದಿಂದ ಕೃತ್ಯ ಎಸಗಿದರೆ ದಂಡಾತ್ಮಕ ಕ್ರಮ ಕೈಗೊಳ್ಳಲು ಅವಕಾಶ ನೀಡುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ದೂರು ಸಲ್ಲಿಸಿದ ಸುಬ್ರತ್ ಮೋಹಾನಿ, "ಶ್ರೀ ಜಗನ್ನಾಥನ ಟ್ಯಾಟೂ ಅನ್ನು ಅಸಭ್ಯ ಸ್ಥಳದಲ್ಲಿ ಹಾಕಿಸಿಕೊಂಡಿರುವ ಕಾರಣ ನಮ್ಮ ಧಾರ್ಮಿಕ ಭಾವನೆಗಳಿಗೆ ಹಾನಿ ತಂದಿದೆ. ಇದು ಎಲ್ಲ ಜಗನ್ನಾಥ ಭಕ್ತರು ಹಾಗೂ ಹಿಂದೂ ಸಮಾಜದ ಮೇಲೆ ಮಾಡಿರುವ ಅಪಮಾನ. ಈ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾವು ಎಫ್‌ಐಆರ್ ದಾಖಲಿಸಿದ್ದೇವೆ," ಎಂದು ಹೇಳಿದ್ದಾರೆ. ವಿವಾದ ಉಲ್ಬಣಗೊಂಡ ನಂತರ, ವಿದೇಶೀ ಮಹಿಳೆ ಮತ್ತು ಟ್ಯಾಟೂ ಪಾರ್ಲರ್ ಮಾಲೀಕರು ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.
"ನಾನು ಶ್ರೀ ಜಗನ್ನಾಥನನ್ನು ಅವಮಾನಿಸಲು ಇಚ್ಛಿಸಿದಲ್ಲ. ನಾನು ನಿಜವಾದ ಜಗನ್ನಾಥ ಭಕ್ತೆ ಮತ್ತು ಪ್ರತಿದಿನ ದೇವಾಲಯಕ್ಕೆ ಹೋಗುತ್ತೇನೆ. ನಾನು ತಪ್ಪು ಮಾಡಿದ್ದೇನೆ ಮತ್ತು ಇದಕ್ಕಾಗಿ ವಿಷಾದವಿದೆ. ನಾನು ಟ್ಯಾಟೂ ಕಲಾವಿದನಿಗೆ ಒಂದು ಗುಪ್ತ ಸ್ಥಳದಲ್ಲಿ ಟ್ಯಾಟೂ ಹಾಕಿ ಎಂದು ಮಾತ್ರ ಕೇಳಿದೆ. ಆದರೆ ಇದರಿಂದ ಈ ಮಟ್ಟದ ವಿವಾದ ಸೃಷ್ಟಿಯಾಗುತ್ತದೆ ಎಂದು ನಾನು ಊಹಿಸಲಿಲ್ಲ. ನನ್ನ ತಪ್ಪಿಗೆ ಕ್ಷಮಿಸಿ. ಶೀಘ್ರದಲ್ಲಿಯೇ ಈ ಟ್ಯಾಟೂ ತೆಗೆಸಿಕೊಳ್ಳುತ್ತೇನೆ' ಎಂದು ಮಹಿಳೆ ಹೇಳಿದ್ದಾರೆ.
ಪತ್ನಿಯ ಸೇವೆ ಮಾಡೋದ್ರಿಂದ ನೀವಾಗ್ತೀರಿ ಕೋಟ್ಯಾಧಿಪತಿ… ಪುರಿ ಜಗನ್ನಾಥನ ಕಥೆ ಕೇಳಿ…
"ಅಂದು ಮಹಿಳೆ ನನ್ನ ಶಾಪ್‌ಗೆ ಬಂದು ಜಗನ್ನಾಥನ ಟ್ಯಾಟೂ ಹಾಕಿಕೊಳ್ಳಬೇಕು ಎಂದಿದ್ದರು. ನಮ್ಮ ಸಿಬ್ಬಂದಿಗಳು ತೊಡೆಯ ಮೇಲೆ ಹಾಕೋದು ಬೇಡ, ಕೈ ಮೇಲೆ ಹಾಕಿ ಎಂದು ಸಲಹೆ ನೀಡಿದ್ದರು. ಆದರೆ ಅವರು ತಮ್ಮ ತೊಡೆಯ ಮೇಲೆಯೇ ಟ್ಯಾಟೂ ಹಾಕಿಸಿಕೊಳ್ಳಬೇಕೆಂದು ಹಠ ಮಾಡಿದರು. ಈ ಘಟನೆಯ ಬಗ್ಗೆ ನನಗೆ ತುಂಬಾ ಬೇಸರವಾಗಿದೆ. ನಾನು ಅಂದು ಶಾಪ್‌ನಲ್ಲಿ ಇರಲಿಲ್ಲ. ಟ್ಯಾಟೂ ಆರ್ಟಿಸ್ಟ್ 25 ದಿನಗಳ ನಂತರ ಇದನ್ನು ಅಳಿಸಲಿದ್ದಾರೆ, ಈಗಲೇ ತೆಗೆದರೆ ಅದು ಇನ್ಫೆಕ್ಷನ್ ಆಗುವ ಸಾಧ್ಯತೆ ಇದೆ' ಎಂದಿದ್ದಾರೆ.
ತಿರುಪತಿಯಷ್ಟೇ ಫೇಮಸ್ ಈ 7 ದೇವಾಲಯಗಳ GI ಟ್ಯಾಗ್- 5 ಸ್ಟಾರ್ ರೇಟಿಂಗ್ ಪ್ರಸಾದ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ