ಆಂಜನೇಯ ಹುಟ್ಟಿದ್ದು ತಿರುಮಲದಲ್ಲಂತೆ!

Published : Apr 10, 2021, 07:54 AM ISTUpdated : Apr 10, 2021, 08:10 AM IST
ಆಂಜನೇಯ ಹುಟ್ಟಿದ್ದು ತಿರುಮಲದಲ್ಲಂತೆ!

ಸಾರಾಂಶ

ಆಂಜನೇಯ ಹುಟ್ಟಿದ್ದು ತಿರುಮಲದಲ್ಲಂತೆ| ಯುಗಾದಿ ದಿನ ಸಾಕ್ಷ್ಯ ಬಿಡುಗಡೆ ಮಾಡಲು ಟಿಟಿಡಿ ಸಜ್ಜು| ಕೊಪ್ಪಳದ ಅಂಜನಾದ್ರಿ ಪರ್ವತ ಎಂಬ ನಂಬಿಕೆ ಕಡೆಗಣನೆ

ತಿರುಮಲ(ಏ.10): ಕರ್ನಾಟಕದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಪರ್ವತದಲ್ಲಿರುವ ಕಿಷ್ಕಿಂಧೆಯಲ್ಲಿ 17 ಲಕ್ಷ ವರ್ಷಗಳ ಹಿಂದೆ ಆಂಜನೇಯ ಹುಟ್ಟಿದ ಎಂಬ ನಂಬಿಕೆಯಿದೆ. ಆದರೆ, ಆಂಜನೇಯ ಹುಟ್ಟಿದ್ದು ಆಂಧ್ರಪ್ರದೇಶದ ತಿರುಮಲದಲ್ಲಿ ಎಂದು ಸಾಬೀತುಪಡಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್‌ ಮುಂದಾಗಿದೆ. ಏ.13ರ ಯುಗಾದಿಯಂದು ಈ ಕುರಿತು ಟಿಟಿಡಿಯ ತಜ್ಞರ ಸಮಿತಿ ‘ಸಾಕ್ಷ್ಯ’ ಬಿಡುಗಡೆ ಮಾಡಲು ನಿರ್ಧರಿಸಿದೆ.

‘ರಾಮನ ಬಂಟ ಹನೂಮಂತ ಅಂಜನಾದ್ರಿ ಪರ್ವತದಲ್ಲಿ ಹುಟ್ಟಿದ’ ಎಂದು ರಾಮಾಯಣದಲ್ಲಿದೆ. ಆ ಅಂಜನಾದ್ರಿ ಪರ್ವತ ಕೊಪ್ಪಳ ಜಿಲ್ಲೆಯಲ್ಲಿದೆ ಎಂದೇ ಆಸ್ತಿಕರು ನಂಬುತ್ತಾ ಬಂದಿದ್ದಾರೆ. ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿರುವ ಕಿಷ್ಕಿಂಧೆಯು ಪುಣ್ಯಕ್ಷೇತ್ರ ಕೂಡ ಆಗಿದ್ದು, ಆಂಜನೇಯನ ಭಕ್ತರು ನಿತ್ಯ ಅಪಾರ ಸಂಖ್ಯೆಯಲ್ಲಿ ಅಲ್ಲಿಗೆ ತೆರಳುತ್ತಾರೆ. ಆದರೆ, ಟಿಟಿಡಿ ಇತ್ತೀಚೆಗೆ ತಿರುಮಲದಲ್ಲಿರುವ ‘ಅಂಜನಾದ್ರಿ ಬೆಟ್ಟ’ದಲ್ಲಿ ಆಂಜನೇಯ ಜನಿಸಿದ್ದಾನೆ ಎಂಬುದಕ್ಕೆ ತನ್ನಲ್ಲಿ ಪುರಾವೆಗಳಿವೆ ಎಂಬ ವಾದವನ್ನು ಹುಟ್ಟುಹಾಕಿದೆ.

ಕಳೆದ ಡಿಸೆಂಬರ್‌ನಲ್ಲೇ ಟಿಟಿಡಿಯು ಆಂಜನೇಯನ ಜನ್ಮಸ್ಥಾನ ತಿರುಮಲದ ಅಂಜನಾದ್ರಿ ಪರ್ವತ ಎಂಬುದನ್ನು ಸಾಬೀತುಪಡಿಸುವ ಪುರಾವೆಗಳನ್ನು ಕಲೆಹಾಕಲು ತಜ್ಞರ ಸಮಿತಿಯೊಂದನ್ನು ನೇಮಕ ಮಾಡಿತ್ತು. ಈ ಸಮಿತಿಯು ಡಿಸೆಂಬರ್‌ನಿಂದ ಸಾಕಷ್ಟುಸಂಶೋಧನೆ ನಡೆಸಿ ತಿರುಮಲದ ಅಂಜನಾದ್ರಿ ಪರ್ವತವೇ ಆಂಜನೇಯನ ಜನ್ಮಸ್ಥಳ ಎಂದು ವರದಿ ನೀಡಿದೆ. ಇದಕ್ಕೆ ಸಾಕ್ಷ್ಯವಾಗಿ ಶಿವ, ಬ್ರಹ್ಮ, ಬ್ರಹ್ಮಾಂಡ, ವರಾಹ, ಮತ್ಸ್ಯ ಪುರಾಣಗಳನ್ನು, ವೆಂಕಟಾಚಲ ಮಹಾತ್ಮೆ ಗ್ರಂಥವನ್ನು ಹಾಗೂ ವರಾಹಮಿಹಿರನ ಬೃಹತ್ಸಂಹಿತೆಯನ್ನು ಉಲ್ಲೇಖಿಸಿದೆ. ಈ ವರದಿಯನ್ನು ಯುಗಾದಿಯ ದಿನ ಬಿಡುಗಡೆ ಮಾಡುವುದಾಗಿ ಟಿಟಿಡಿ ತಿಳಿಸಿದೆ.

ಆಂಜನೇಯನ ಜನ್ಮಸ್ಥಳ ತಿರುಮಲ ಎಂದು ಹೇಳಿರುವ ತಜ್ಞರ ಸಮಿತಿಯಲ್ಲಿ ಟಿಟಿಡಿಯ ಡಾ| ಕೆ.ಎಸ್‌.ಜವಾಹರ್‌, ವೇದಿಕ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಸನ್ನಿಧಾನಂ ಸುದರ್ಶನ ಶರ್ಮ, ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಮುರಳೀಧರ ಶರ್ಮ, ಪ್ರೊಫೆಸರ್‌ಗಳಾದ ರಾಣಿಸದಾಶಿವ ಮೂರ್ತಿ, ಜೆ.ರಾಮಕೃಷ್ಣ, ಶಂಕರನಾರಾಯಣ, ಇಸ್ರೋ ವಿಜ್ಞಾನಿ ಮೂರ್ತಿ ರೆಮಿಲ್ಲಾ, ಪುರಾತತ್ವ ಇಲಾಖೆಯ ವಿಜಯ್‌ ಕುಮಾರ್‌ ಹಾಗೂ ವೇದಾಧ್ಯಯನ ತಜ್ಞ ಡಾ| ಎ.ವಿಭೀಷಣ ಶರ್ಮ ಇದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ