ರಸಗೊಬ್ಬರ ದರ ಏರಿಕೆಗೆ ಕೇಂದ್ರ ತಡೆ!

By Kannadaprabha NewsFirst Published Apr 10, 2021, 7:29 AM IST
Highlights

ರಸಗೊಬ್ಬರ ದರ ಏರಿಕೆಗೆ ಕೇಂದ್ರ ತಡೆ| ಪನಿಗಳ ಜತೆ ಸಭೆ ನಡೆಸಿ ಬೆಲೆ ಏರಿಸದಿರಲು ಸೂಚನೆ, ಕಂಪನಿಗಳ ಒಪ್ಪಿಗೆ| ಚೀಲದ ಮೇಲೆ ಹೊಸ ದರವೇ ಮುದ್ರಣ| ಮತ್ತೆ ಏರಿದರೂ ಅಚ್ಚರಿ ಇಲ್ಲ

ನವದೆಹಲಿ(ಏ.10): ಏ.1ರಿಂದ ಡಿಎಪಿ, ಎನ್‌ಪಿಕೆ ಮುಂತಾದ ಯೂರಿಯೇತರ ರಸಗೊಬ್ಬರಗಳ ಬೆಲೆಯನ್ನು ರಸಗೊಬ್ಬರ ಕಂಪನಿಗಳು 50 ಕೇಜಿಗೆ 700 ರು.ವರೆಗೂ ಏರಿಕೆ ಮಾಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ರಸಗೊಬ್ಬರ ಕಂಪನಿಗಳ ಜೊತೆ ಸಭೆ ನಡೆಸಿ ಹಳೆಯ ದರದಲ್ಲೇ ಗೊಬ್ಬರ ಮಾರಾಟ ಮಾಡುವಂತೆ ಸೂಚನೆ ನೀಡಿದೆ. ಇದಕ್ಕೆ ರಸಗೊಬ್ಬರ ಕಂಪನಿಗಳು ಒಪ್ಪಿಕೊಂಡಿವೆ ಎಂದು ಸರ್ಕಾರ ಹೇಳಿಕೊಂಡಿದೆ.

ಕೃಷಿಯಲ್ಲಿ ವ್ಯಾಪಕವಾಗಿ ಬಳಕೆಯಾಗುವ ಡಿಎಪಿ, ಎಂಒಪಿ, ಎನ್‌ಪಿಕೆ ಮುಂತಾದ ರಸಗೊಬ್ಬರಗಳ ಬೆಲೆಯನ್ನು ಕೇಂದ್ರ ಸರ್ಕಾರ ತನ್ನ ನಿಯಂತ್ರಣದಿಂದ ಈಗಾಗಲೇ ಮುಕ್ತಗೊಳಿಸಿದೆ. ಆದರೂ, ರಸಗೊಬ್ಬರ ಕಂಪನಿಗಳಿಗೆ ನಿರ್ದಿಷ್ಟಪ್ರಮಾಣದ ಸಬ್ಸಿಡಿ ನೀಡುತ್ತದೆ. ಆ ಸಬ್ಸಿಡಿ ಸ್ವೀಕರಿಸಿ ರಸಗೊಬ್ಬರ ಕಂಪನಿಗಳು ರೈತರಿಗೆ ಕಡಿಮೆ ಬೆಲೆಗೆ ರಸಗೊಬ್ಬರ ಮಾರಾಟ ಮಾಡಬೇಕಿದೆ. ಆದರೆ, ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಹಾಗೂ ಸ್ಥಳೀಯವಾಗಿ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗಿದೆ ಎಂಬ ಕಾರಣ ನೀಡಿ ಇಫೆä್ಕೕ, ಕ್ರಿಬ್ಕೋ, ಎಂಸಿಎಫ್‌ಎಲ್‌, ಜುವಾರಿ ಆಗ್ರೋ ಕೆಮಿಕಲ್ಸ್‌, ಪಾರಾದೀಪ್‌ ಫಾಸ್ಫೇಟ್ಸ್‌ ಮುಂತಾದ ರಸಗೊಬ್ಬರ ಕಂಪನಿಗಳು ಏ.1ರಿಂದ ಬೇರೆ ಬೇರೆ ರಸಗೊಬ್ಬರಗಳಿಗೆ 50 ಕೇಜಿಗೆ 200ರಿಂದ 700 ರು.ವರೆಗೂ ಬೆಲೆ ಏರಿಕೆ ಮಾಡಿವೆ. 1 ಚೀಲ ಡಿಎಪಿ ಗೊಬ್ಬರ ದರ 1200 ರು.ನಿಂದ 1900 ರು.ಗೆ ಏರಿದೆ.

ಈ ಹಿನ್ನೆಲೆಯಲ್ಲಿ ಗುರುವಾರ ರಸಗೊಬ್ಬರ ಕಂಪನಿಗಳ ಜೊತೆ ಸಭೆ ನಡೆಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ರಾಜ್ಯ ಸಚಿವ ಮನಸುಖ್‌ ಮಾಂಡವೀಯ, ಹಳೆಯ ದರದಲ್ಲೇ ರಸಗೊಬ್ಬರ ಮಾರಾಟ ಮಾಡುವಂತೆ ಸೂಚಿಸಿದ್ದಾರೆ.

ನಂತರ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮಾಂಡವೀಯ, ಹಳೆಯ ದರದಲ್ಲೇ ರಸಗೊಬ್ಬರ ಮಾರಾಟ ಮಾಡಲು ಕಂಪನಿಗಳು ಒಪ್ಪಿವೆ. ರೈತರಿಗೆ ಹಳೆಯ ದರದಲ್ಲೇ ರಸಗೊಬ್ಬರ ಸಿಗಲಿದೆ ಎಂದು ಹೇಳಿದರು. ಇದೇ ವೇಳೆ ಟ್ವೀಟ್‌ ಮಾಡಿರುವ ಇಫೆä್ಕೕ ಸಿಇಒ ಯು.ಎಸ್‌. ಅವಸ್ಥಿ, ‘ನಮ್ಮ ಕಂಪನಿ ಈಗಾಗಲೇ ತಯಾರಿಸಿರುವ 11.26 ಲಕ್ಷ ಟನ್‌ ರಸಗೊಬ್ಬರವನ್ನು ಹಳೆಯ ದರದಲ್ಲೇ ಮಾರಾಟ ಮಾಡಲಿದೆ. ಆದರೆ, ಗೊಬ್ಬರದ ಚೀಲಗಳ ಮೇಲೆ ಹೊಸ ದರ ಮುದ್ರಿಸಲಾಗಿದೆ. ಅದು ರೈತರಿಗೆ ಮಾರಾಟ ಮಾಡುವ ದರವಲ್ಲ’ ಎಂದು ಸ್ಪಷ್ಟನೆ ನೀಡಿದರು.

ಹಳೇ ಸಬ್ಸಿಡಿ ಮುಂದುವರಿಕೆ:

ಈ ನಡುವೆ, ಸರ್ಕಾರವು ಶುಕ್ರವಾರ ಸಂಜೆ ಹೊಸ ಆದೇಶ ಹೊರಡಿಸಿದ್ದು, ‘2020-21ರಲ್ಲಿ ರಸಗೊಬ್ಬರ ಸಬ್ಸಿಡಿ ಏನಿತ್ತೋ ಅದೇ ಸಬ್ಸಿಡಿಯನ್ನು ರಸಗೊಬ್ಬರ ಕಂಪನಿಗಳಿಗೆ ನೀಡುವುದನ್ನು ಮುಂದುವರಿಸಲಾಗುವುದು’ ಎಂದು ಘೋಷಿಸಿದೆ.

ಆದರೆ ಇದಕ್ಕೆ ಗೊಬ್ಬರ ಉದ್ಯಮದ ತಜ್ಞರು ಆಕ್ಷೇಪಿಸಿದ್ದಾರೆ. ‘ಸರ್ಕಾರವು ಸಬ್ಸಿಡಿ ಹೆಚ್ಚಿಸದೇ ಹಳೆಯ ಸಬ್ಸಿಡಿ ದರವನ್ನೇ ಈ ಸಲವೂ ನೀಡುವುದಾಗಿ ಹೇಳಿದೆ. ಇದೇ ವೇಳೆ, ಜಾಗತಿಕ ರಸಗೊಬ್ಬರ ದರ ಈಗ ಏರುತ್ತಿದೆ ಹಾಗೂ ರುಪಾಯಿ ಮೌಲ್ಯ ಕುಸಿಯುತ್ತಿದೆ. ಇದು ಡಿಎಪಿ, ಎನ್‌ಪಿಕೆ ರಸಗೊಬ್ಬರ ದರದ ಮೇಲೆ ಪರಿಣಾಮ ಬೀರಲಿದೆ’ ಎಂದಿದ್ದಾರೆ. ಈ ಮೂಲಕ ಮುಂದಿನ ದಿನದಲ್ಲಿ ದರ ಹೆಚ್ಚಳದ ಸುಳಿವು ನೀಡಿದ್ದಾರೆ.

click me!