ರಾಯಬರೇಲಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರಾಕರಿಸಿದ ವರುಣ್ ಗಾಂಧಿ, ಒಂದು ಕಾರಣಕ್ಕೆ ಸ್ಪರ್ಧೆಯಿಂದ ದೂರ!

By Suvarna NewsFirst Published Apr 25, 2024, 7:47 PM IST
Highlights

ಫಿಲ್ಬಿಟ್ ಕ್ಷೇತ್ರದ ಹಾಲಿ ಸಂಸದ ವರುಣ್ ಗಾಂಧಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿತ್ತು. ಇದೀಗ ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಫರ್ ನೀಡಲಾಗಿದೆ. ಆದರೆ ವರುಣ್ ಗಾಂಧಿ ಈ ಆಫರ್ ನಿರಾಕರಿಸಿದ್ದಾರೆ. ಗಾಂಧಿ ಕುಟುಂಬದ ವಿರುದ್ದ ಸ್ಪರ್ಧೆಗೆ ನಿರಾಕರಿಸಿದ್ರಾ ವರುಣ್ ಗಾಂಧಿ?
 

ನವದೆಹಲಿ(ಏ.25) ಲೋಕಸಭಾ ಚುನಾವಣೆಗೆ ಈ ಬಾರಿ ಬಿಜೆಪಿ ಹಲವು ಹಾಲಿ ಸಂಸದರಿಗೆ ಟಿಕೆಟ್ ನೀಡಿಲ್ಲ. ಈ ಪೈಕಿ ಫಿಲ್ಬಿಟ್ ಕ್ಷೇತ್ರದ ಸಂಸದ ವರುಣ್ ಗಾಂಧಿ ಕೂಡ ಒಬ್ಬರು. ಬಿಜೆಪಿಯಿಂದ ಮುನಿಸಿಕೊಂಡಿದ್ದ ವರುಣ್ ಗಾಂಧಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಇದೀಗ ಕೊನೆಯ ಕ್ಷಣದಲ್ಲಿ ಬಿಜೆಪಿ ಹೊಸ ದಾಳ ಉರುಳಿಸಿದೆ. ರಾಯಬರೇಲಿಯಿಂದ ವರುಣ್ ಗಾಂಧಿಗೆ ಟಿಕೆಟ್ ಆಫರ್ ಮಾಡಿದೆ. ಆದರೆ ಈ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ವರುಣ್ ಗಾಂಧಿ ಬಿಜೆಪಿ ಆಫರ್ ತಿರಸ್ಕರಿಸಿದ್ದಾರೆ. ಇದೇ ಕ್ಷೇತ್ರದಿಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಇದೇ ಕಾರಣದಿಂದ ಗಾಂಧಿ ಕುಟುಂಬದ ವಿರುದ್ಧ ಸ್ಪರ್ಧೆ ನಿರಾಕರಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.

ಗಾಂಧಿ ವರ್ಸಸ್ ಗಾಂಧಿ ಮುಖಾಮುಖಿಯಿಂದ ವರುಣ್ ಗಾಂಧಿ ದೂರ ಉಳಿದಿದ್ದಾರೆ. ಪ್ರಿಯಾಂಕಾ ಗಾಂಧಿ ವಿರುದ್ದ ಸ್ಪರ್ಧೆಗೆ ನಿರಾಕರಿಸಿರುವ ವರುಣ್ ಗಾಂಧಿ ಬಿಜೆಪಿ ಆಫರ್ ತಿರಸ್ಕರಿಸಿದ್ದಾರೆ ಅನ್ನೋ ಚರ್ಚೆ ಆರಂಭವಾಗಿದೆ. 2004ರಿಂದ ರಾಯಬರೇಲಿ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. 2019ರಲ್ಲಿ ರಾಯಬರೇಲಿ ಕ್ಷೇತ್ರದಿಂದ ಸೋನಿಯಾ ಗಾಂಧಿ ಭರ್ಜರಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಇದೊಂದೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಸೋನಿಯಾ ಗಾಂಧಿ ವಯಸ್ಸು ಹಾಗೂ ಆರೋಗ್ಯದ ಕಾರಣದಿಂದ ರಾಜ್ಯಸಭೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಹೀಗಾಗಿ ತೆರವಾಗಿರುವ ರಾಯಬರೇಲಿಯಿಂದ ಪುತ್ರಿ ಪ್ರಿಯಾಂಕಾ ಗಾಂಧಿಯನ್ನು ಕಣಕ್ಕಿಳಿಸಿ ರಾಯಬರೇಲಿ ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡಿದೆ.

ಲೋಕಸಭಾ ಚುನಾವಣೆ 2024: ಪ್ರಿಯಾಂಕಾ ವಿರುದ್ಧ ಸೋದರ ವರುಣ್ ಕಣಕ್ಕೆ?

1967ರಿಂದ 1984ರವರೆಗೆ ಇಂದಿರಾ ಗಾಂಧಿ ಇದೇ ಕ್ಷೇತ್ರದಿಂದ ಗೆದ್ದು ಲೋಕಸಭೆ ಆಯ್ಕೆಯಾಗಿದ್ದಾರೆ. ದೇಶದ ಪ್ರಧಾನ ಮಂತ್ರಿ ಕೂಡ ಆಗಿದ್ದರು. ರಾಯಬರೇಲಿ ಕ್ಷೇತ್ರದ ಜನತೆ ಕಾಂಗ್ರೆಸ್ ಜೊತೆ ಸುದೀರ್ಘ ಸಂಬಂಧ ಹೊಂದಿದ್ದಾರೆ. ಆದರೆ ಪ್ರಿಯಾಂಕಾ ಗಾಂಧಿಗೆ ಠಕ್ಕರ್ ನೀಡಲು ಬಿಜೆಪಿ ರಾಯಬರೇಲಿ ಕ್ಷೇತ್ರದಿಂದ  ವರುಣ್ ಗಾಂಧಿಯನ್ನು ಕಣಕ್ಕಿಳಿಸಲು ಪ್ಲಾನ್ ಮಾಡಿತ್ತು. ಈ ಕುರಿತು ವರುಣ್ ಗಾಂಧಿಗೆ ಸೂಚಿಸಲಾಗಿತ್ತು. ಆದರೆ ಗಾಂಧಿ ಕುಟುಂಬದ ವಿರುದ್ದ ಸ್ಪರ್ಧೆಗೆ ವರುಣ್ ಗಾಂಧಿ ನಿರಾಕರಿಸಿದ್ದಾರೆ. 

ಅಮೇಠಿ ಕೂಡ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ 2019ರಲ್ಲಿ ಅಮೇಠಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಸೋಲು ಕಂಡಿದ್ದರು. ಬಿಜೆಪಿ ನಾಯಕಿ ಸ್ಮೃತಿ ಇರಾನಿ ವಿರುದ್ದ ಮುಗ್ಗರಿಸಿದ ರಾಹುಲ್ ಗಾಂಧಿ, ವಯಾನಾಡಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಈ ಮೂಲಕ ಅಮೇಠಿಯಲ್ಲಿನ ಕಾಂಗ್ರೆಸ್ ಭದ್ರಕೋಟೆ ಛಿದ್ರವಾಗಿತ್ತು. ಈ ಬಾರಿ ರಾಯಬರೇಲಿ ಕೋಟೆ ಛಿದ್ರಗೊಳಿಸಲು ಬಿಜೆಪಿ ಮಾಡಿದ ಮಾಸ್ಟರ್ ಪ್ಲಾನ್‌ಗೆ ಆರಂಭದಲ್ಲಿ ಹಿನ್ನಡೆಯಾಗಿದೆ. ಇದೀಗ ಮತ್ತೊಬ್ಬ ಪ್ರಬಲ ಅಭ್ಯರ್ಥಿಯನ್ನು ರಾಯಬರೇಲಿಯಿಂದ ಕಣಕ್ಕಿಳಿಸಲು ಬಿಜೆಪಿ ಪ್ಲಾನ್ ಮಾಡಿದೆ.

Lok Sabha Election 2024: ಪೀಲಿಭೀತ್‌ನಲ್ಲಿ ವರುಣ್‌ ಇಲ್ಲದ ಬಿಜೆಪಿಗೆ ಮೋದಿ ಅಲೆಯೇ ಶ್ರೀರಕ್ಷೆ..!
 

click me!