ಪ್ರಧಾನಿ ಮೋದಿ ವಿರುದ್ಧ ವಾರಣಾಸಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಜಯ್ ರೈ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಈಗಾಗಲೇ ಟಿಕೆಟ್ ಘೋಷಣೆ ಮಾಡಿದೆ. ಮಾಜಿ ಎಬಿವಿಪಿ ಕಾರ್ಯಕರ್ತ, ಮಾಜಿ ಬಿಜೆಪಿ ನಾಯಕನಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಠಕ್ಕರ್ ನೀಡಲು ಮುಂದಾಗಿದೆ. ಯಾರು ಈ ಅಜಯ್ ರೈ?
ನವದೆಹಲಿ(ಮಾ.24) ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಳೆದು ತೂಗಿ ಅಭ್ಯರ್ಥಿಗಳನ್ನು ಘೋಷಿಸುತ್ತಿದೆ. ಈ ಪೈಕಿ ನಾಲ್ಕನೇ ಪಟ್ಟಿಯಲ್ಲಿ ಅಜಯ್ ರೈ ಹೆಸರನ್ನು ಕಾಂಗ್ರೆಸ್ ಘೋಷಿಸಿದೆ. ಅಜಯ್ ರೈ ಪ್ರದಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸುತ್ತಿದ್ದಾರೆ. 2014, 2019ರಲ್ಲೂ ಅಜಯ್ ರೈ ವಾರಣಾಸಿಯಿಂದ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು. ಇದೀಗ 3ನೇ ಬಾರಿಗೆ ಅಜಯ್ ರೈ ಮೋದಿ ವಿರುದ್ಧ ಕಣಕ್ಕಿಳಿದಿದ್ದಾರೆ.
ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿರುವ ಅಜಯ್ ರೈ ಮಾಜಿ ಬಿಜೆಪಿ ನಾಯಕ. ಇಷ್ಟೇ ಅಲ್ಲ ಮಾಜಿ ಎಬಿವಿಪಿ ಕಾರ್ಯಕರ್ತ. ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಸಂಘಟನೆಯನಲ್ಲಿ ಸಕ್ರಿಯವಾಗಿದ್ದ ಅಜಯ್ ರೈ, 1996 ರಿಂದ 2007ರ ವರೆಗೆ ಉತ್ತರ ಪ್ರದೇಶದ ಕೋಲಸಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ವಿಶೇಷ ಅಂದರೆ 3 ಬಾರಿ ಬಿಜೆಪಿ ನಾಯಕನಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. ಆದರೆ 2009ರ ಲೋಕಸಭಾ ಚುನಾವಣೆ ವೇಳೆಗೆ ಅಜಯ್ ರೈಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಈ ವೇಳೆ ಸಮಾಜವಾದಿ ಪಾರ್ಟಿ ಸೇರಿಕೊಂಡಿದ್ದರು.
2009ರಲ್ಲಿ ವಾರಣಾಸಿಯಿಂದ ಬಿಜೆಪಿ ಮುರಳಿ ಮನೋಹರ್ ಜೋಶಿಗೆ ಟಿಕೆಟ್ ನೀಡಿತ್ತು. ಜೋಶಿ ವಿರುದ್ಧ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಿದ ಅಜಯ್ ರೈ ಸೋಲು ಕಂಡಿದ್ದರು. 2012ರಲ್ಲಿ ಕಾಂಗ್ರೆಸ್ ಪಕ್ಷ ಸೇರಿಕೊಂಡ ಅಜಯ್ ರೈ ಉತ್ತರ ಪ್ರದೇಶದಲ್ಲಿ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. 2012ರಲ್ಲಿ ಪಿಂದ್ರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದ ಅಜಯ್ ರೈ, 2017ರಲ್ಲಿ ಇದೇ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.
Breaking: ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಲಿಸ್ಟ್ ಪ್ರಕಟ, ರಾಜ್‌ಗಢದಿಂದ ದಿಗ್ವಿಜಯ್ ಸಿಂಗ್ ಸ್ಪರ್ಧೆ!
ಕಳೆದೆರಡು ಲೋಕಸಭಾ ಚುನಾವಣೆಯಲ್ಲಿ ಅಜಯ್ ರೈ ವಾರಣಾಸಿಯಿಂದ ಮೋದಿ ವಿರುದ್ಧ ಸ್ಪರ್ಧಿಸಿದ್ದಾರೆ. 2019ರಲ್ಲಿ ವಾರಣಾಸಿಯ 1.52 ಲಕ್ಷ ಮತದಾರರ ಪೈಕಿ ಅಜಯ್ ರೈ ಶೇಕಡಾ 14.38 ವೋಟ್ ಶೇರ್ ಪಡೆದುಕೊಂಡಿದ್ದರು. ಪ್ರಧಾನಿ ಮೋದಿ ಶೇಕಡಾ 63.62 ವೋಟ್ ಶೇರ್ ಪಡೆದುಕೊಂಡಿದ್ದರು. 2013ರಲ್ಲಿ ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷರಾಗಿ ಅಜಯ್ ರೇ ನೇಮಕ ಮಾಡಲಾಗಿದೆ.
ಇದೀಗ ಮೂರನೇ ಬಾರಿಗೆ ಪ್ರಧಾನಿ ಮೋದಿ ವಿರುದ್ಧ ಅಜಯ್ ರೈ ಕಣಕ್ಕಿಳಿಸಲಾಗಿದೆ. ಭುಮಿಹಾರ್ ಸಮುದಾಯಕ್ಕೆ ಸೇರಿದ ಅಜಯ್ ರೈ, ಪೂರ್ವ ಉತ್ತರ ಪ್ರದೇಶದಲ್ಲಿ ಪ್ರಬಲ ಮತದಾರರನ್ನು ಹೊಂದಿದೆ. ಪೂರ್ವಾಂಚಲದಲ್ಲಿ ಇದೇ ಮತದಾರ ಸಮುದಾಯದಿಂದ ಕಾಂಗ್ರೆಸ್ ಭಾರಿ ಗೆಲುವಿನ ಅಲೆ ಕಂಡಿತ್ತು. ಆದರೆ ಇದೀಗ ಈ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ.