ಕೆಲವು ತಿಂಗಳ ಹಿಂದಷ್ಟೇ ನಡೆದ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಮಣಿಸಿ ಬಿಜೆಪಿ ಗೆದ್ದಿತ್ತು. ಈಗ ಈ ಕಾವು ಆರುವ ಮೊದಲೇ ಲೋಕಸಭೆ ಚುನಾವಣೆ ಬಂದಿದೆ.
ಜೈಪುರ (ಏ.04): ಕೆಲವು ತಿಂಗಳ ಹಿಂದಷ್ಟೇ ನಡೆದ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಮಣಿಸಿ ಬಿಜೆಪಿ ಗೆದ್ದಿತ್ತು. ಈಗ ಈ ಕಾವು ಆರುವ ಮೊದಲೇ ಲೋಕಸಭೆ ಚುನಾವಣೆ ಬಂದಿದೆ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ಜಾದೂವನ್ನೇ ಲೋಕಸಭೆ ಚುನಾವಣೆಯಲ್ಲಿ ಮಾಡುವ ವಿಶ್ವಾಸದಲ್ಲಿ ಬಿಜೆಪಿ ಇದೆ. ಆದರೆ ಕಳೆದ 2 ಲೋಕಸಭೆ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ಕಾಂಗ್ರೆಸ್ ಈ ಸಲ ಖಾತೆ ತೆರೆವ ಉಮೇದಿಯಲ್ಲಿದೆ. ಈ ತಿಂಗಳು ಎರಡು ಹಂತಗಳಲ್ಲಿ ಮತದಾನ ನಡೆಯಲಿರುವ ರಾಜಸ್ಥಾನದ 25 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 6 ಕ್ಷೇತ್ರಗಳಲ್ಲಿ ತುಲನಾತ್ಮಕವಾಗಿ ಕಠಿಣ ಸ್ಪರ್ಧೆ ನಿರೀಕ್ಷಿಸಲಾಗಿದೆ.
ಈ ಸಲದ ಕಣ ಹೇಗಿದೆ?: ಕಾಂಗ್ರೆಸ್ 22 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಮತ್ತು ಆರ್‌ಎಲ್‌ಪಿ ಮತ್ತು ಸಿಪಿಎಂನೊಂದಿಗೆ ಮೈತ್ರಿ ಮಾಡಿಕೊಂಡಿರುವ ನಾಗೌರ್ ಮತ್ತು ಸಿಕರ್ ಎರಡು ಸ್ಥಾನಗಳನ್ನು ಬಿಟ್ಟುಕೊಟ್ಟಿದೆ, ಆದರೆ ಬನ್ಸ್ವಾರಾ ಕ್ಷೇತ್ರದ ನಿರ್ಧಾರವು ಬಾಕಿ ಉಳಿದಿದೆ. ಆದರೆ ಬಿಜೆಪಿ ಎಲ್ಲಾ 25 ಸ್ಥಾನಗಳಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.
ಹರಿದ್ವಾರ: ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧ ಹರೀಶ್ ರಾವತ್ ಪುತ್ರ ವೀರೇಂದ್ರ ರಾವತ್ ಕಣಕ್ಕೆ!
ಚುರು, ಕೋಟಾ-ಬಂಡಿ, ಸಿಕರ್, ನಾಗೌರ್, ಬನ್ಸ್ವಾರಾ ಮತ್ತು ಬಾಢ್ಮೇರ್‌ನಂತಹ ಸ್ಥಾನಗಳಲ್ಲಿ ತುಲನಾತ್ಮಕವಾಗಿ ಕಠಿಣ ಸ್ಪರ್ಧೆಗಳನ್ನು ನಿರೀಕ್ಷಿಸಲಾಗಿದೆ. ಬಾಢ್ಮೇರ್‌ನಲ್ಲಿ ಲೋಕಸಭೆಯ ಕದನಕ್ಕೆ ಸ್ವತಂತ್ರ ಶಾಸಕ ರವೀಂದ್ರ ಸಿಂಗ್ ಭಾಟಿ ಸೇರುವುದರೊಂದಿಗೆ ಹೋರಾಟ ಕುತೂಹಲಕಾರಿಯಾಗಿದೆ. ಕಾಂಗ್ರೆಸ್ 3 ಪಕ್ಷಾಂತರಿಗಳಿಗೆ ಹಾಗೂ ಬಿಜೆಪಿ ಒಬ್ಬ ಪಕ್ಷಾಂತರಿಗೆ ಟಿಕೆಟ್ ನೀಡಿವೆ.
ಸ್ಪರ್ಧೆ ಹೇಗೆ?: ಮೋದಿ ಸರ್ಕಾರದ 10 ವರ್ಷಗಳ ಆಡಳಿತದ ವಿರುದ್ಧ ತೊಡೆ ತಟ್ಟಿ ಕಾಂಗ್ರೆಸ್ ಹಾಗೂ ಇಂಡಿಯಾ ಕೂಟದ ಪಕ್ಷಗಳು ಚುನಾವಣೆಗೆ ಮುಂದಾಗಿವೆ. ಅಲ್ಲದೆ, ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ಜೋಡಿ ವೈಮನಸ್ಸು ಮರೆತು ರಾಜಸ್ಥಾನದಲ್ಲಿ 10 ವರ್ಷ ನಂತರ ಕಾಂಗ್ರೆಸ್ ಖಾತೆ ತೆರೆಯಲೇಬೇಕು ಎಂದು ಯತ್ನಿಸುತ್ತಿದ್ದಾರೆ. ಆದರೆ, ಬಿಜೆಪಿಯು ಈ ಸಲ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರ ಹೊಸ ಆಡಳಿತ ಹಾಗೂ ಮೋದಿ ಸರ್ಕಾರದ 10 ವರ್ಷದ ಸಾಧನೆ ನೆಚ್ಚಿ ಮತ್ತೆ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ.
ಈ ಹಿಂದಿನ ಚುನಾವಣೆಯಲ್ಲಿ ಏನಾಗಿತ್ತು?: 2014 ರಲ್ಲಿ ಬಿಜೆಪಿ ಸ್ವತಂತ್ರವಾಗಿ ಎಲ್ಲಾ 25 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತ್ತು ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿ 24 ಮತ್ತು ಅದರ ಮಿತ್ರ ಪಕ್ಷ ಆರ್‌ಎಲ್‌ಪಿ ಒಂದು ಸ್ಥಾನವನ್ನು ಗೆದ್ದಿದ್ದವು. ಈ ಬಾರಿ, ಬಿಜೆಪಿ ಯಾವುದೇ ಮೈತ್ರಿಯ ಗೋಜಿಗೆ ಹೋಗದೇ ಏಕಾಂಗಿಯಾಗಿ ಸ್ಪರ್ಧಿಸಿದೆ.
ಸತತ 2 ಸಲ ಒಂದೂ ಸ್ಥಾನ ಗೆಲ್ಲದ ಕಾಂಗ್ರೆಸ್: 2019ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಕಳೆದ ಎರಡು ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಕಾಂಗ್ರೆಸ್‌ಗೆ ಸಾಧ್ಯವಾಗಿರಲಿಲ್ಲ. ಆದರೆ ಈ ಸಲ 2019 ರಲ್ಲಿ ಎನ್‌ಡಿಎ ಭಾಗವಾಗಿದ್ದ ಹನುಮಾನ್ ಬೇನಿವಾಲ್ ಅವರ ಆರ್‌ಎಲ್‌ಪಿ ಈಗ ಅದೇ ನಾಗೌರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದೆ.
ಯಾವತ್ತು ಚುನಾವಣೆ?: ರಾಜಸ್ಥಾನದ ಲೋಕಸಭೆ ಚುನಾವಣೆಯು ಏಪ್ರಿಲ್ 19 ಮತ್ತು 26 ರಂದು ಎರಡು ಹಂತಗಳಲ್ಲಿ ನಡೆಯಲಿದೆ.
ಮೊದಲ ಹಂತದಲ್ಲಿ 12 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ - ಗಂಗಾನಗರ, ಬಿಕಾನೇರ್, ಚುರು, ಜುಂಜುನು, ಸಿಕರ್, ಜೈಪುರ ಗ್ರಾಮಾಂತರ, ಜೈಪುರ, ಅಲ್ವಾರ್.
ಏಪ್ರಿಲ್ 19 ರಂದು ಭರತ್‌ಪುರ, ಕರೌಲಿ-ಧೋಲ್‌ಪುರ್, ದೌಸಾ ಮತ್ತು ನಾಗೌರ್. ಟೋಂಕ್-ಸವಾಯಿ ಮಾಧೋಪುರ್, ಅಜ್ಮೀರ್, ಪಾಲಿ, ಜೋಧ್‌ಪುರ, ಬಾಢ್ಮೇರ್, ಜಾಲೋರ್, ಉದಯ್‌ಪುರ, ಬನ್ಸ್‌ವಾರಾ, ಚಿತ್ತೋರ್‌ಗಢ, ರಾಜ್‌ಸಮಂದ್, ಭಿಲ್ವಾರ, ಕೋಟಾ ಮತ್ತು ಝಾಲಾವರ್ (ಒಟ್ಟು 13 ಸ್ಥಾನಗಳು) ಏಪ್ರಿಲ್ 26 ರಂದು ಎರಡನೇ ಹಂತದ ಚುನಾವಣೆಗೆ ಅಣಿಯಾಗಿವೆ.
ರಾಜ್ಯ: ರಾಜಸ್ಥಾನ
ಒಟ್ಟು ಕ್ಷೇತ್ರ: 25
ಒಟ್ಟು ಹಂತ: 2
2019ರ ಚುನಾವಣೆಯಲ್ಲಿ ಏನಾಗಿತ್ತು?
(ಒಟ್ಟು ಸ್ಥಾನ 25)
ಪಕ್ಷ ಸ್ಥಾನ ಶೇಕಡಾ ಮತ
ಬಿಜೆಪಿ+ 25 ಶೇ.62
ಕಾಂಗ್ರೆಸ್ 00 ಶೇ.34
ಕಣದಲ್ಲಿರುವ ಪ್ರಮುಖರು
ದುಷ್ಯಂತ ಸಿಂಗ್ (ಬಿಜೆಪಿ-ಝಾಲಾವರ್), ಹನುಮಾನ್ ಬೇನಿವಾಲ್ (ಆರ್‌ಎಲ್‌ಪಿ- ನಾಗೌರ್), ರಾಹುಲ್ ಕಸ್ವಾನ್ (ಕಾಂಗ್ರೆಸ್- ಚುರು), ದೇವೇಂದರ ಝಝಾರಿಯಾ (ಬಿಜೆಪಿಚುರು)
ಈಶಾನ್ಯ ಭಾರತದಲ್ಲಿ ‘ಇಂಡಿಯಾ’ಗಿಂತ ಎನ್‌ಡಿಎ ಮುಂಚೂಣಿ?
ಪ್ರಮುಖ ಕ್ಷೇತ್ರಗಳು
ನಾಗೌರ್, ಝಾಲವರ್, ಚುರು, ಬಾಢ್ಮೇರ್, ಸಿಕಾರ್, ಬಿಕಾನೇರ್, ಜೈಪುರ, ಜೋಧಪುರ