Asianet Suvarna News Asianet Suvarna News

ಈಶಾನ್ಯ ಭಾರತದಲ್ಲಿ ‘ಇಂಡಿಯಾ’ಗಿಂತ ಎನ್‌ಡಿಎ ಮುಂಚೂಣಿ?

ಈಶಾನ್ಯ ರಾಜ್ಯಗಳು ಚಿಕ್ಕವಾದರೂ ದೇಶದ ಏಳ್ಗೆಗೆ ಅವುಗಳ ಕೊಡುಗೆ ಅಗಣಿತ. ಅದು ಅಸ್ಸಾಂ ಚಹಾ ಇರಬಹುದು. ಕಾಜಿರಂಗಾ ಅರಣ್ಯದ ಘೇಂಡಾಮೃಗಗಳಿರಬಹುದು. ದೇಶದ ಏಳ್ಗೆಗೆ ತಮ್ಮದೇ ಆದ ಕಾಣಿಕೆ ನೀಡಿವೆ.

Lok Sabha Election 2024 NDA ahead of INDIA in Northeast India gvd
Author
First Published Apr 3, 2024, 6:38 AM IST

ಗುವಾಹಟಿ (ಏ.03): ಈಶಾನ್ಯ ರಾಜ್ಯಗಳು ಚಿಕ್ಕವಾದರೂ ದೇಶದ ಏಳ್ಗೆಗೆ ಅವುಗಳ ಕೊಡುಗೆ ಅಗಣಿತ. ಅದು ಅಸ್ಸಾಂ ಚಹಾ ಇರಬಹುದು. ಕಾಜಿರಂಗಾ ಅರಣ್ಯದ ಘೇಂಡಾಮೃಗಗಳಿರಬಹುದು. ದೇಶದ ಏಳ್ಗೆಗೆ ತಮ್ಮದೇ ಆದ ಕಾಣಿಕೆ ನೀಡಿವೆ. ಇಂಥದ್ದರಲ್ಲಿ ಈ ಸಲ ಅಲ್ಲಿನ ಲೋಕಸಭೆ ಚುನಾವಣೆಯು ಕೇವಲ ಬಿಜೆಪಿ ಚುನಾವಣೆಗಿಂತ ಎನ್‌ಡಿಎ ಚುನಾವಣೆಯಾಗಿ ಮಾರ್ಪಟ್ಟಿದೆ. ಇಲ್ಲಿ ಕೇಸರಿ ಪಕ್ಷವು ಈಶಾನ್ಯದ ಚಿಕ್ಕ ಪುಟ್ಟ ಪ್ರಾದೇಶಿಕ ಪಕ್ಷಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಗಿಂತ ಸ್ಪಷ್ಟವಾಗಿ ಮುಂದಿದೆ. 

ಆದರೆ ದೇಶ ವಿದೇಶಗಳಲ್ಲಿ ಸದ್ದು ಮಾಡಿದ ‘ಮಣಿಪುರ ಹಿಂಸೆ’ ಮುಂದಿಟ್ಟು ಬಿಜೆಪಿ ಹಣಿಯಲು ಕಾಂಗ್ರೆಸ್‌ ಯತ್ನ ನಡೆಸುತ್ತಿದೆ. ಈಶಾನ್ಯವು ಒಟ್ಟು 25 ಸ್ಥಾನಗಳನ್ನು ಹೊಂದಿದೆ, ಅವುಗಳಲ್ಲಿ 14 ಅಸ್ಸಾಂನಲ್ಲಿವೆ. ಮಣಿಪುರ, ತ್ರಿಪುರ, ಮೇಘಾಲಯ, ಅರುಣಾಚಲ ಪ್ರದೇಶದಲ್ಲಿ ತಲಾ ಎರಡು ಸ್ಥಾನಗಳಿದ್ದರೆ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಸಿಕ್ಕಿಂನಲ್ಲಿ ತಲಾ ಒಂದು ಸ್ಥಾನವಿದೆ.

Lok Sabha Election 2024: ರಾಹುಲ್ ಗಾಂಧಿ ವಿರುದ್ಧ ಮೋದಿ ‘ಬೆಂಕಿ’ ದಾಳಿ!

ಎನ್‌ಡಿಎ ಮುನ್ನಡೆ: ಬಿಜೆಪಿಯು ಅಸ್ಸಾಂ, ಮಣಿಪುರ, ತ್ರಿಪುರಾ ಮತ್ತು ಅರುಣಾಚಲದಲ್ಲಿ ಆಡಳಿತ ನಡೆಸುತ್ತಿದೆ ಮತ್ತು ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಆಡಳಿತಾರೂಢ ಒಕ್ಕೂಟದ ಒಂದು ಘಟಕವಾಗಿದೆ. ಅಸ್ಸಾಂ ಹೊರತುಪಡಿಸಿ, 2019ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಯಾವುದೇ ಸೀಟು ಹಂಚಿಕೆ ಮಾಡಿಕೊಂಡಿರಲಿಲ್ಲ. ಆದರೂ ಎನ್‌ಡಿಎ 25ರಲ್ಲಿ 19 ಸ್ಥಾನಗಳನ್ನು ಗಳಿಸಿತು. ಆದರೆ ಈ ಚುನಾವಣೆಯಲ್ಲಿ ಈ ಎಲ್ಲ ಪಕ್ಷಗಳು ಎನ್‌ಡಿಎ ತಂಡವಾಗಿ ಸ್ಪರ್ಧಿಸುತ್ತಿವೆ.

ಮಿಜೋರಾಂ ಮತ್ತು ಸಿಕ್ಕಿಂ- ಎನ್‌ಡಿಎ ಕೂಟಕ್ಕೆ ಅಪವಾದಗಳಾಗಿವೆ. ಮಿಜೋರಾಂನಲ್ಲಿ ಮಿತ್ರಪಕ್ಷಗಳಾಗಿದ್ದರೂ ಬಿಜೆಪಿ ಮತ್ತು ಮಿಜೋ ನ್ಯಾಷನಲ್ ಫ್ರಂಟ್ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ. ಅದೇ ರೀತಿ ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ವಿರುದ್ಧ ಬಿಜೆಪಿ ಕಣಕ್ಕಿಳಿದಿದೆ. ಬಿಜೆಪಿಯು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ), ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತು ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಫ್ರಂಟ್ (ಎನ್‌ಡಿಪಿಪಿ) ನೊಂದಿಗೆ ಸೀಟು ಹಂಚಿಕೆ ಒಪ್ಪಂದಗಳನ್ನು ಮಾಡಿಕೊಂಡಿದೆ ಮತ್ತು ಅಸೋಮ್ ಗಣ ಪರಿಷತ್ (ಎಜಿಪಿ) ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ನೊಂದಿಗೆ ತನ್ನ ಹೊಂದಾಣಿಕೆ ಮುಂದುವರೆಸಿದೆ.

ಬಿಜೆಪಿಗೆ ಅಸ್ಸಾಂ ಪ್ರತಿಷ್ಠೆಯ ಕಣ: ಅಸ್ಸಾಂ ರಾಜ್ಯವು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ. ರಾಜ್ಯದಲ್ಲಿ ಬಿಜೆಪಿ 11 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಮತ್ತು ಎಜಿಪಿ ಮತ್ತು ಯುಪಿಪಿಎಲ್‌ಗೆ ಕ್ರಮವಾಗಿ 2 ಮತ್ತು 1 ಸ್ಥಾನದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ.

ಅರುಣಾಚಲ-ಮೇಘಾಲಯದಲ್ಲಿ ಪರಸ್ಪರ ಸಹಕಾರ: ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ನೇತೃತ್ವದ ಎನ್‌ಪಿಪಿಯು ಅರುಣಾಚಲದ ಎರಡು ಸ್ಥಾನಗಳಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿ ಬದಲಿಗೆ ಬಿಜೆಪಿಯನ್ನು ಬೆಂಬಲಿಸುತ್ತಿದೆ. ಅದೇ ರೀತಿ ಮೇಘಾಲಯದಲ್ಲಿ ಚುನಾವಣಾ ಸ್ಪರ್ಧೆಯಿಂದ ಹೊರಗುಳಿಯುವ ಮೂಲಕ ಬಿಜೆಪಿ, ಎನ್‌ಪಿಪಿಗೆ ಬೆಂಬಲ ನೀಡಿ ಪ್ರತ್ಯುಪಕಾರ ಮಾಡುತ್ತಿದೆ.

ಮಣಿಪುರ, ನಾಗಾದಲ್ಲಿ ಬಿಜೆಪಿ ಸ್ಪರ್ಧೆ ಇಲ್ಲ: ಮಣಿಪುರದ ಹೊರ ಮಣಿಪುರ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸುತ್ತಿಲ್ಲ ಮತ್ತು ಎನ್‌ಪಿಎಫ್‌ಗೆ ಬೆಂಬಲ ನೀಡಲು ನಿರ್ಧರಿಸಿದೆ. ಅದೇ ರೀತಿ ನಾಗಾಲ್ಯಾಂಡ್‌ನಿಂದ ದೂರ ಉಳಿದಿದ್ದು, ಅಲ್ಲಿ ಎನ್‌ಡಿಪಿಪಿ ಏಕೈಕ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದೆ. ಇಲ್ಲಿ ಎನ್‌ಡಿಎ ಅಂಗಪಕ್ಷಗಳ ನಡುವಿನ ಬಾಂಧವ್ಯ ಎದ್ದುಕಾಣುತ್ತದೆ.

ಹಿಮಂತ ಬಿಸ್ವ ಶರ್ಮ ಸೂತ್ರಧಾರ: ಎನ್‌ಡಿಎ ಇಷ್ಟೊಂದು ಬಲಗೊಳ್ಳಲು ಅಸ್ಸಾಂ ಮುಖ್ಯಮಂತ್ರಿ ಹಾಗೂ ಈಶಾನ್ಯ ಭಾರತದ ಎನ್‌ಡಿಎ ಉಸ್ತುವಾರಿ ಹಿಮಂತ ಬಿಸ್ವ ಶರ್ಮ ಪ್ರಮುಖ ಸೂತ್ರಧಾರಿ ಆಗಿದ್ದಾರೆ. ‘ನಮ್ಮ ಪಾಲುದಾರರ ನಡುವಿನ ಈ ಅಪ್ರತಿಮ ಬದ್ಧತೆಯು ಎನ್‌ಡಿಎ 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸುತ್ತದೆ’ ಎಂದು ಶರ್ಮ ಹೇಳಿದ್ದಾರೆ.

ಕಾಂಗ್ರೆಸ್‌, ಇಂಡಿಯಾ ಕೂಟ: ಈ ಪ್ರದೇಶದಲ್ಲಿ ಬಿಜೆಪಿ ಸ್ಪರ್ಧೆಯು ಹೆಚ್ಚಾಗಿ ಕಾಂಗ್ರೆಸ್‌ನೊಂದಿಗೆ ಇರಲಿದೆ. ಕೆಲವು ಸ್ಥಾನಗಳನ್ನು ಹೊರತುಪಡಿಸಿ ಇತರ ವಿರೋಧ ಪಕ್ಷಗಳು ಪ್ರತಿಸ್ಪರ್ಧಿಗಳಾಗಿರುತ್ತವೆ. ವಿರೋಧ ಪಕ್ಷವಾದ ಇಂಡಿಯಾ ಕೂಟವು ಮಣಿಪುರ ಮತ್ತು ತ್ರಿಪುರಾದಲ್ಲಿ ಮಾತ್ರ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಕಾಂಗ್ರೆಸ್ ಒಳ ಮಣಿಪುರ ಮತ್ತು ಹೊರ ಮಣಿಪುರ ಎರಡೂ ಸ್ಥಾನಗಳಲ್ಲಿ ಮತ್ತು ತ್ರಿಪುರಾ (ತ್ರಿಪುರ ಪಶ್ಚಿಮ) ಒಂದು ಸ್ಥಾನಕ್ಕೆ ಸ್ಪರ್ಧಿಸುತ್ತಿದೆ. ಸಿಪಿಎಂ ಇನ್ನೊಂದು ಸ್ಥಾನಕ್ಕೆ (ತ್ರಿಪುರ ಪೂರ್ವ) ಸ್ಪರ್ಧಿಸುತ್ತಿದೆ.

ಬಹುಪಾಲು ಈಶಾನ್ಯವನ್ನು ಆಳಿದ ಕಾಂಗ್ರೆಸ್ ಈಗ ಭಾರಿ ಹಿನ್ನಡೆಯಲ್ಲಿದೆ. ಅಸ್ಸಾಂನ ನಾಗಾಂವ್ ಮತ್ತು ಮೇಘಾಲಯದ ಶಿಲ್ಲಾಂಗ್‌ನ ಎರಡು ಸ್ಥಾನಗಳನ್ನು ಉಳಿಸಿಕೊಳ್ಳಲು ಆಶಿಸುತ್ತಿದೆ. ಜೋರ್ಹತ್ ಮತ್ತು ಧುಬ್ರಿ (ಎರಡೂ ಅಸ್ಸಾಂ) ಮತ್ತು ಇನ್ನರ್ ಮಣಿಪುರ ಸ್ಥಾನಗಳ ಬಗ್ಗೆಯೂ ಪಕ್ಷವು ಆಶಾವಾದಿಯಾಗಿದೆ.

ಮಣಿಪುರ ಹಿಂಸೆ ಪ್ರಮುಖ ವಿಷಯ: ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರ ಈ ಸಲದ ಚುನಾವಣೆಯಲ್ಲಿ ಈಶಾನ್ಯದ ಪ್ರಮುಖ ವಿಷಯವಾಗಿದೆ. ಸುಮಾರು 200 ಜನರ ಸಾವಿಗೆ ಕಾರಣವಾದ ಈ ಸಂಘರ್ಷವನ್ನು ಮಂದಿಟ್ಟುಕೊಂಡು ಬಿಜೆಪಿ ಹಣಿಯಲು ವಿಪಕ್ಷಗಳು ಯತ್ನಿಸುತ್ತಿವೆ. ಹೀಗಾಗಿ ಒಳ ಮಣಿಪುರ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಮನಗಂಡಿರುವ ಬಿಜೆಪಿ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಆರ್‌ಕೆ ರಂಜನ್ ಸಿಂಗ್ ಬದಲಿಗೆ ಮಣಿಪುರದ ಸಚಿವ ಬಸಂತಕುಮಾರ ಸಿಂಗ್‌ ಅವರಿಗೆ ಟಿಕೆಟ್ ನೀಡಿ ಗೆಲುವು ಸಾಧಿಸುವ ಯತ್ನ ನಡೆಸಿದೆ.

ಎಲ್ಲಿ ಯಾವತ್ತು ಚುಣಾವಣೆ?: ಏಪ್ರಿಲ್ 19 ರಂದು ಮೊದಲ ಹಂತದಲ್ಲಿ 15 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ - ಅಸ್ಸಾಂನಲ್ಲಿ ಐದು, ಮಣಿಪುರ, ಮೇಘಾಲಯ ಮತ್ತು ಅರುಣಾಚಲದಲ್ಲಿ ತಲಾ ಎರಡು ಮತ್ತು ನಾಗಾಲ್ಯಾಂಡ್, ಸಿಕ್ಕಿಂ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ತಲಾ ಒಂದು ಸ್ಥಾನಕ್ಕೆ ಮತದಾನ ಏರ್ಪಡಲಿದೆ, ನಂತರ ಉಳಿದ 10 ಕ್ಷೇತ್ರಗಳು ಏ.26 ಹಾಗೂ ಮೇ 7ರಂದು ಚುನಾವಣೆ ಎದುರಿಸಲಿವೆ.

ಈಶಾನ್ಯದಲ್ಲಿ ಎಷ್ಟು ಕ್ಷೇತ್ರ?
ಒಟ್ಟು ಕ್ಷೇತ್ರ 25
ಅಸ್ಸಾಂ 14
ಮಣಿಪುರ 2
ತ್ರಿಪುರ 2
ಮೇಘಾಲಯ 2
ಅರುಣಾಚಲ ಪ್ರದೇಶ 2
ಮಿಜೋರಂ 1
ನಾಗಾಲ್ಯಾಂಡ್‌ 1
ಸಿಕ್ಕಿಂ 1

2019ರಲ್ಲಿ ಏನಾಗಿತ್ತು?
ಒಟ್ಟು ಸ್ಥಾನ

ಎನ್‌ಡಿಎ..19
ಯುಪಿಎ+ಇತರರು..6
ಒಟ್ಟು ಕ್ಷೇತ್ರ 25
ಚುನಾವಣಾ ಹಂತ 3

ಪ್ರಮುಖ ಕ್ಷೇತ್ರಗಳು
ದಿಬ್ರುಗಢ, ಜೋರ್ಹತ್‌, ಅರುಣಾಚಲ ಪಶ್ಚಿಮ, ಒಳ ಮಣಿಪುರ

ವಯನಾಡಿನಲ್ಲಿ ಇಂದು ರಾಹುಲ್‌ ಗಾಂಧಿ ನಾಮಪತ್ರ: ಬೃಹತ್‌ ರೋಡ್‌ಶೋ ನಡೆಸಲಿರುವ ಕಾಂಗ್ರೆಸ್‌ ನಾಯಕ

ಪ್ರಮುಖ ಅಭ್ಯರ್ಥಿಗಳು
ಸರ್ಬಾನಂದ ಸೋನೊವಾಲ್‌ (ಬಿಜೆಪಿ- ದಿಬ್ರುಗಢ)
ಗೌರವ್‌ ಗೊಗೋಯ್‌ (ಕಾಂಗ್ರೆಸ್‌ - ಜೋರ್ಹಾಟ್‌ )
ಕಿರಣ್ ರಿಜಿಜು (ಬಿಜೆಪಿ- ಅರುಣಾಚಲ ಪಶ್ಚಿಮ)
ನಬಾಂ ಟುಕಿ (ಕಾಂಗ್ರೆಸ್‌- ಅರುಣಾಚಲ ಪಶ್ಚಿಮ)
ಬಸಂತಕುಮಾರ ಸಿಂಗ್‌ (ಬಿಜೆಪಿ- ಒಳ ಮಣಿಪುರ)

Follow Us:
Download App:
  • android
  • ios