
ಜೈಪುರ(ಜ.03) ರಾಮ ಮಂದಿರ ಉದ್ಘಾಟನೆ ದಿನ ಆಯೋಧ್ಯೆಯ ಎಲ್ಲಾ ಮದ್ಯ ಹಾಗೂ ಮಾಂಸದ ಅಂಗಡಿ ಬಂದ್ ಮಾಡಲಾಗಿದೆ. ಇನ್ನು ಆಯೋಧ್ಯೆಗೆ ತೆರಳು ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿರುವ ಎಲ್ಲಾ ಮದ್ಯ ಹಾಗೂ ಮಾಂಸದ ಅಂಗಡಿಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ. ಇದರ ಬೆನ್ನಲ್ಲೇ ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಜನವರಿ 22ರ ಪ್ರಾಣ ಪ್ರತಿಷ್ಠೆ ದಿನ ಜೈಪುರದ ಎಲ್ಲಾ ಮದ್ಯ ಹಾಗೂ ಮಾಂಸದ ಅಂಗಡಿ ಬಂದ್ ಮಾಡಲು ಜೈಪುರ ಮುನ್ಸಿಪಲ್ ಕಾರ್ಪೋರೇಶನ್ ಮೇಯರ್ ಆದೇಶ ಹೊರಡಿಸಿದ್ದಾರೆ.
ಜೈಪುರದ ಸಿವಿಲ್ ಲೈನ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಗೋಪಾಲ್ ಶರ್ಮಾ ಈ ಕುರಿತು ಮೇಯರ್ ಮುನೇಶ್ ಗುರ್ಜಾರ್‌ಗೆ ಮಹತ್ವದ ಮನವಿ ಮಾಡಿದ್ದರು. ಆಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಹಾಗೂ ಉದ್ಘಾಟನೆ ಐತಿಹಾಸಿಕ ಹಾಗೂ ಅತ್ಯಂತ ಪವಿತ್ರ. ಹೀಗಾಗಿ ಪ್ರಾಣ ಪ್ರತಿಷ್ಠೆ ದಿನ ಜೈಪುರದ ಎಲ್ಲಾ ಮದ್ಯ ಹಾಗೂ ಮಾಂಸದ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದರು.
ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಜ.22ರ ದಿನಾಂಕ ಆಯ್ಕೆ ಮಾಡಿಕೊಂಡಿದ್ದೇಕೆ? ಇದರ ಮಹತ್ವವೇನು?
ಗೋಪಾಲ್ ಶರ್ಮಾ ಮಾಡಿದ ಮನವಿ ಸ್ವೀಕರಿಸಿದ ಮೇಯರ್, ಜೈಪುರ ಕಾರ್ಪೋರೇಶನ್ ವ್ಯಾಪ್ತಿಯ ಎಲ್ಲಾ ಮದ್ಯ ಹಾಗೂ ಮಾಂಸದ ಅಂಗಡಿಗಳನ್ನು ಜನವರಿ 22ರಂದು ಬಂದ್ ಮಾಡಲು ಆದೇಶ ಹೊರಡಿಸಿದ್ದಾರೆ. ಗೋಪಾಲ್ ಶರ್ಮಾ ಇದೇ ಮನವಿಯಲ್ಲಿ ಪ್ರಾಣ ಪ್ರತಿಷ್ಠೆ ದಿನ, ಕಾರ್ಪೋರೇಶನ್ ವ್ಯಾಪ್ತಿಯಲ್ಲಿ ಬರುವ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ರಂಗೋಲಿ ಬಿಡಿಸಿ ಶ್ರೀರಾಮನ ಭವ್ಯ ಮಂದಿರ ಪ್ರಾಣಪ್ರತಿಷ್ಠೆಯ ಸಡಗರ ಸಂಭ್ರಮ ಆಚರಿಸಲು ನಿರ್ದೇಶ ನೀಡಬೇಕು ಎಂದು ಕೋರಲಾಗಿತ್ತು. ಈ ಮನವಿಯನ್ನು ಮೇಯರ್ ಸ್ವೀಕರಿಸಿದ್ದಾರೆ. ದೇವಸ್ಥಾನ, ಹಿಂದೂ ಧಾರ್ಮಿಕ ಕೇಂದ್ರಗಳನ್ನು ದೀಪಗಳಿಂದ ಅಲಂಕರಿಸಲು ಮೇಯರ್ ಸೂಚಿಸಿದ್ದಾರೆ.
ರಾಮನ ನಂಟಿನ ಪ್ರದೇಶಗಳಲ್ಲಿ ಮಾರಾಟಕ್ಕಿಲ್ಲ ಅವಕಾಶ
ಶ್ರೀರಾಮ ಮಂದಿರ ಉದ್ಘಾಟನೆಗೆ ಸಿದ್ಧವಾಗಿರುವ ನಡುವೆಯೇ ಅಯೋಧ್ಯೆಯ ಬಹುತೇಕ ಪ್ರದೇಶಗಳಲ್ಲಿ ಮದ್ಯ ಮತ್ತು ಮಾಂಸ ಮಾರಾಟ ನಿಷೇಧಿಸಲಾಗಿದೆ.22 ರಂದು ಮಂದಿರದ ಮೊದಲ ಹಂತ ಉದ್ಘಾಟನೆಯಾಗುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಆದೇಶ ಹೊರಡಿಸಿದ್ದಾರೆ. ಇದರನ್ವಯ ನಗರದಲ್ಲಿನ ರಾಮನ ನಂಟಿನ ಪ್ರದೇಶಗಳ ಆಸುಪಾಸಿನ ಪ್ರದೇಶಗಳಲ್ಲಿ ಎಲ್ಲ ಮಾಂಸ ಮತ್ತು ಮದ್ಯದ ಅಂಗಡಿಗಳನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಬಾಬರ್ ಹುಟ್ಟೂರು ಸೇರಿ 153 ದೇಶದ ಪವಿತ್ರ ನೀರು ಬಳಕೆ!
ಶ್ರೀರಾಮ ಜನ್ಮಭೂಮಿ ಮತ್ತು ಮಂದಿರವನ್ನು ಅತ್ಯುನ್ನತ ಪವಿತ್ರ ಕ್ಷೇತ್ರವೆಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಸುಮಾರು 150 ರಿಂದ 175 ಕಿ.ಮೀ ಮಾರ್ಗದಲ್ಲಿ ಈ ಆದೇಶ ಅನ್ವಯವಾಗಲಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ