
ಮುಂಬೈ: ಭಾರತೀಯ ಜೀವ ವಿಮಾ ನಿಗಮಕ್ಕೆ (LIC) ಬರೋಬ್ಬರಿ ₹2,684.57 ಕೋಟಿ ರೂಪಾಯಿಗಳ ಬೃಹತ್ ಆರ್ಥಿಕ ನಷ್ಟ ಉಂಟುಮಾಡಿದ ಗಂಭೀರ ಆರೋಪದ ಮೇಲೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ, ಅವರ ಒಡೆತನದ ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ , ಮಾಜಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೇಠ್ ಹಾಗೂ ಇತರ ಗುರುತಿಸದ ಸಾರ್ವಜನಿಕ ಸೇವಕರ ವಿರುದ್ಧ ಕೇಂದ್ರೀಯ ತನಿಖಾ ದಳ ಹೊಸ ಪ್ರಕರಣ ದಾಖಲಿದೆ.
ಸಿಬಿಐ ಸಲ್ಲಿಸಿರುವ ಎಫ್‌ಐಆರ್ ಪ್ರಕಾರ, 2012 ರ ಏಪ್ರಿಲ್ 12 ರಿಂದ 2018 ರ ಮಾರ್ಚ್ 9 ರ ನಡುವೆ ಎಲ್‌ಐಸಿಯು ರಿಲಯನ್ಸ್ ಕ್ಯಾಪಿಟಲ್ ಹೊರಡಿಸಿದ್ದ ಐದು ‘ಪರಿವರ್ತಿಸಲಾಗದ ಡಿಬೆಂಚರ್’ಗಳಿಗೆ (Non-Convertible Debentures - NCDs) ಚಂದಾದಾರರಾಗುವ ಮೂಲಕ ಒಟ್ಟು ₹3,900 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿತ್ತು. ಕಂಪನಿಯ ಸಾಮಾನ್ಯ ಕಾರ್ಪೊರೇಟ್ ಅಗತ್ಯಗಳು ಹಾಗೂ ಹಳೆಯ ಸಾಲಗಳ ಮರುಪಾವತಿಯ ನೆಪದಲ್ಲಿ ಈ ಹೂಡಿಕೆಯನ್ನು ಪಡೆಯಲಾಗಿತ್ತು.
ತಪ್ಪು ಮಾಹಿತಿ ನೀಡಿ ಹಾಗೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಎಲ್‌ಐಸಿಯಿಂದ ಹಣ ಹೂಡಿಕೆ ಮಾಡಿಸಿಕೊಂಡ ಆರೋಪಿಗಳು, ಬಳಿಕ ಆ ಹಣವನ್ನು ಮೋಸದಿಂದ ಬೇರೆಡೆಗೆ ಡೈವರ್ಷನ್ ಮಾಡಿದ್ದಾರೆ. ಇವರ ಖತರ್ನಾಕ್ ಪಿತೂರಿಯಿಂದಾಗಿ ಎಲ್‌ಐಸಿಗೆ ₹2,684.57 ಕೋಟಿ ರೂಪಾಯಿಗಳ ಭಾರಿ ಆರ್ಥಿಕ ನಷ್ಟ ಉಂಟಾಗಿದೆ ಎಂದು ಎಲ್‌ಐಸಿ ದೂರು ಸಲ್ಲಿಸಿ ಆರೋಪಿಸಿತ್ತು
ಸಿಬಿಐ ಎಫ್‌ಐಆರ್ ಪ್ರಕಟವಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಅನಿಲ್ ಅಂಬಾನಿ ಅವರ ಅಧಿಕೃತ ವಕ್ತಾರರು, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಸುಳ್ಳು ಎಂದು ನಿರಾಕರಿಸಿದ್ದಾರೆ. "ಈ ಪ್ರಕರಣವು ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್‌ಗೆ ಸಂಬಂಧಿಸಿದ್ದಾಗಿದೆ. ಅನಿಲ್ ಅಂಬಾನಿ ಅವರು 2005 ರಿಂದ 2021 ರ ನವೆಂಬರ್‌ವರೆಗೆ ಕಂಪನಿಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಹಾಗೂ ಅಧ್ಯಕ್ಷರಾಗಿ ಮಾತ್ರ ಸೇವೆ ಸಲ್ಲಿಸಿದ್ದರು. 2021 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕಂಪನಿಯ ಮಂಡಳಿಯನ್ನು ರದ್ದುಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಅಂಬಾನಿ ಅವರು ಯಾವುದೇ ರೀತಿಯ ಕಾನೂನುಬಾಹಿರ ಕೃತ್ಯ ಎಸಗಿಲ್ಲ. ಕಾನೂನಿನಲ್ಲಿ ಲಭ್ಯವಿರುವ ಎಲ್ಲಾ ಹಕ್ಕುಗಳನ್ನು ಬಳಸಿಕೊಂಡು ಹೋರಾಟ ನಡೆಸಲಿದ್ದಾರೆ" ಎಂದು ವಕ್ತಾರರು ಸಮರ್ಥಸಿಕೊಂಡಿದ್ದಾರೆ.
ವಿವಿಧ ಸಾರ್ವಜನಿಕ ವಲಯದ ಬ್ಯಾಂಕುಗಳು, ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಹಾಗೂ ಎಲ್‌ಐಸಿ ನೀಡಿದ ದೂರುಗಳ ಆಧಾರದ ಮೇಲೆ ರಿಲಯನ್ಸ್ ಗ್ರೂಪ್‌ನ ವಿವಿಧ ಸಂಸ್ಥೆಗಳ ವಿರುದ್ಧ ಸಿಬಿಐ ಈಗಾಗಲೇ ಒಟ್ಟು 8 ಎಫ್‌ಐಆರ್‌ಗಳನ್ನು ದಾಖಲಿಸಿದೆ. ಈ ಪೈಕಿ 6 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದ್ದು, 7 ಜನರನ್ನು ಬಂಧಿಸಲಾಗಿದೆ. ಪ್ರಸ್ತುತ ಈ ಎಲ್ಲಾ ಪ್ರಕರಣಗಳ ತನಿಖೆಯು ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ