
ನವದೆಹಲಿ(ಸೆ.25): ಮುಡಾ ನಿವೇಶನ ಹಂಚಿಕೆ ಅವ್ಯವಹಾರದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿರುವುದರಿಂದ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಹೀಗಾಗಿ ಸಿದ್ದರಾಮಯ್ಯ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಮ್ಮ ವಿರುದ್ಧ ಕೇಳಿಬಂದಿರುವ ನಾಚಿಕೆಗೇಡಿನ ಭ್ರಷ್ಟಾಚಾರ ಆರೋಪದ ಬಗ್ಗೆ ಮುಕ್ತ ಹಾಗೂ ಸ್ವತಂತ್ರ ತನಿಖೆ ನಡೆಯಲು ಅವಕಾಶ ಮಾಡಿಕೊಡಬೇಕು’ ಎಂದು ಹೇಳಿದರು.
ಕಾಂಗ್ರೆಸ್ಸಿಂದ ‘ಜಲಜೀವನ್ ಮಿಷನ್’ ಜಾರಿ ನಿಧಾನ: ರಾಜೀವ್ ಚಂದ್ರಶೇಖರ್
‘ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ನಡೆಸುವುದಕ್ಕಾಗಿಯೇ ಅಧಿಕಾರಕ್ಕೆ ಬರುತ್ತದೆ. ಹಾಗೆ ಅಧಿಕಾರಕ್ಕೆ ಬರಲು ಸುಳ್ಳು ಭರವಸೆಗಳನ್ನು ನೀಡುತ್ತದೆ. ಬಡವರ ಕಲ್ಯಾಣದ ಹೆಸರಿನಲ್ಲಿ ಸುಳ್ಳು ಹಾಗೂ ನಕಲಿ ಭರವಸೆ ನೀಡುವ ಮೂಲಕ ಚುನಾವಣೆಯಲ್ಲಿ ಗೆದ್ದು, ಬಳಿಕ ತಮ್ಮ ಕುಟುಂಬಗಳನ್ನು ಶ್ರೀಮಂತ ಮಾಡಿಕೊಳ್ಳುವ ರಾಹುಲ್ ಗಾಂಧಿಯವರ ಸಂಪ್ರದಾಯವನ್ನೇ ಸಿದ್ದರಾಮಯ್ಯ ಮುಂದುವರೆಸುತ್ತಿದ್ದಾರೆ’ ಎಂದು ರಾಜೀವ್ ವಾಗ್ದಾಳಿ ನಡೆಸಿದರು
‘ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಾರ್ವಜನಿಕರ ಹಣವನ್ನು ಲೂಟಿ ಹೊಡೆದ ಸಾಕಷ್ಟು ನಿದರ್ಶನಗಳಿವೆ. ದುಬಾರಿ ಬೆಲೆಯ ಜಾಗವನ್ನು ಯಃಕಶ್ಚಿತ್ ಹಣಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಟ್ರಸ್ಟ್‌ಗೆ ನೀಡಲಾಗಿದೆ. ಯಾವುದಾದರೊಂದು ಹಗರಣದಲ್ಲಿ ಭಾಗಿಯಾಗಿಲ್ಲದೆ ಇರುವ ಒಬ್ಬನೇ ಒಬ್ಬ ಕಾಂಗ್ರೆಸ್ ನಾಯಕ ಕರ್ನಾಟಕದಲ್ಲಿ ಇಲ್ಲ’ ಎಂದೂ ಅವರು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ