
ಬೆಂಗಳೂರು (ಏ.15): ನಾಸಿಕ್‌ನಲ್ಲಿರುವ ಟಿಸಿಎಸ್ ಕಂಪನಿಯಲ್ಲಿ ನಡೆಯುತ್ತಿರುವ ಕಾರ್ಪೋರೇಟ್ ಜಿಹಾದ್‌ನ ಒಂದೊಂದೇ ವಿವರಗಳು ಹೊರಬರುತ್ತಿರುವ ಹೊತ್ತಿನಲ್ಲಿ, ಇತರ ಕಂಪನಿಗಳಲ್ಲಿರುವ ಇಂಥ ಪಾಲಿಸಿಗಳ ವಿರುದ್ಧವೂ ಸುದ್ದಿಯಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ದೇಶದ ಪ್ರಮುಖ ಐವೇರ್ ಕಂಪನಿ'ಲೆನ್ಸ್‌ಕಾರ್ಟ್' (Lenskart) ತನ್ನ ಉದ್ಯೋಗಿಗಳಿಗೆ ವಿಧಿಸಿರುವ ಹೊಸ ಡ್ರೆಸ್ ಕೋಡ್ ನಿಯಮಾವಳಿಗಳು ಈಗ ವಿವಾದದ ಕೇಂದ್ರಬಿಂದುವಾಗಿವೆ. ಹಿಂದೂ ಧರ್ಮದ ಸಾಂಪ್ರದಾಯಿಕ ಗುರುತುಗಳಾದ ಬಿಂದಿ, ಸಿಂಧೂರ ಮತ್ತು ಕೈಗೆ ಕಟ್ಟುವ ದಾರ ಧರಿಸುವುದರ ಮೇಲೆ ನಿರ್ಬಂಧ ಹೇರಿರುವ ಕಂಪನಿ, ಹಿಜಾಬ್ ಧರಿಸಲು ಅವಕಾಶ ನೀಡಿರುವುದು ತಾರತಮ್ಯದ ಆರೋಪಕ್ಕೆ ಗುರಿಯಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಲೆನ್ಸ್‌ಕಾರ್ಟ್‌ನ ಅಧಿಕೃತ ಮಾರ್ಗಸೂಚಿಗಳ ಪ್ರಕಾರ, ಮಹಿಳಾ ಮತ್ತು ಪುರುಷ ಉದ್ಯೋಗಿಗಳಿಗೆ ಕಟ್ಟುನಿಟ್ಟಿನ ಡ್ರೆಸ್ ಕೋಡ್ ಜಾರಿಗೊಳಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಗಮನ ಸೆಳೆದಿರುವ ಅಂಶಗಳೆಂದರೆ, ಮಹಿಳಾ ಉದ್ಯೋಗಿಗಳು ಹಣೆಗೆ ಬಿಂದಿ ಇಡುವಂತಿಲ್ಲ. ಸಿಂಧೂರ ಧರಿಸುವುದಾದರೆ ಅದು ಅತೀ ಕಡಿಮೆ ಇರಬೇಕು ಮತ್ತು ಹಣೆಯ ಮೇಲೆ ಕಾಣಿಸಬಾರದು ಎಂದು ಸೂಚಿಸಲಾಗಿದೆ. ಇಷ್ಟು ಮಾತ್ರವಲ್ಲದೆ, ಕೈಗೆ ಕಟ್ಟುವ ಧಾರ್ಮಿಕ ದಾರಗಳು ಅಥವಾ ಯಾವುದೇ ರೀತಿಯ ರಿಸ್ಟ್ ಬ್ಯಾಂಡ್‌ಗಳನ್ನು ಕಡ್ಡಾಯವಾಗಿ ತೆಗೆಯಬೇಕು ಎಂದು ಆದೇಶಿಸಲಾಗಿದೆ.
ಒಂದು ವೇಳೆ ಉದ್ಯೋಗಿಗಳು ಹಿಜಾಬ್ ಅಥವಾ ಟರ್ಬನ್ ಧರಿಸುವುದಾದರೆ ಅದು ಕಪ್ಪು ಬಣ್ಣದಲ್ಲಿರಬೇಕು. ಹಿಜಾಬ್ ಎದೆಯ ಭಾಗವನ್ನು ಮೀಡಿಯಂ ಆಗಿ ಕವರ್ ಮಾಡಿರಬೇಕು ಮತ್ತು ಕಂಪನಿಯ ಲೋಗೋ ಮರೆಯಾಗಬಾರದು ಎಂದು ಹೇಳಲಾಗಿದೆ. ಅದರೊಂದಿಗೆ ಬಂಗಾರದ ಓಲೆಗಳು, ನೇತಾಡುವ ಕಿವಿಯೋಲೆಗಳು ಮತ್ತು ಮೂಗುಬೊಟ್ಟು ಧರಿಸಲು ಅನುಮತಿ ನಿರಾಕರಿಸಲಾಗಿದೆ. ಕೇವಲ ಸಣ್ಣ ಮುತ್ತು ಅಥವಾ ಚಿನ್ನದ ಸ್ಟಡ್‌ಗಳನ್ನು ಮಾತ್ರ ಧರಿಸಲು ಅವಕಾಶ ನೀಡಲಾಗಿದೆ.
ಈ ನಿಯಮಗಳು ಹೊರಬೀಳುತ್ತಿದ್ದಂತೆ ನೆಟ್ಟಿಗರು ಲೆನ್ಸ್‌ಕಾರ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿಂದೂ ಮಹಿಳೆಯರ ಧಾರ್ಮಿಕ ಗುರುತುಗಳನ್ನು ಕಂಪನಿಯು ವ್ಯವಸ್ಥಿತವಾಗಿ ಅಳಿಸಿಹಾಕಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. "ಹಿಜಾಬ್ ಧರಿಸಲು ಅವಕಾಶ ನೀಡುವ ಕಂಪನಿಗೆ ಬಿಂದಿ ಮತ್ತು ಧಾರ್ಮಿಕ ದಾರ ಕಂಡರೆ ಯಾಕೆ ಅಲರ್ಜಿ?" ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಈ ವಿವಾದದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಜನ ಸಾಮಾನ್ಯರು ಕಂಪನಿಯ ವಿರುದ್ಧ ಕಿಡಿಕಾರಿದ್ದಾರೆ."ಲೆನ್ಸ್‌ಕಾರ್ಟ್‌ನಲ್ಲಿ ಕೆಲಸ ಮಾಡುವಾಗ ಸಿಂಧೂರ, ಬಿಂದಿ ಅಥವಾ ದಾರ ಧರಿಸುವಂತಿಲ್ಲ, ಆದರೆ ಹಿಜಾಬ್ ಧರಿಸಬಹುದು. ಇದು ಹಿಂದೂ ಮಹಿಳೆಯರ ಅಸ್ಮಿತೆಯನ್ನು ಅಳಿಸಿಹಾಕುವ ಪ್ರಯತ್ನ' ಎಂದು ಒಬ್ಬರು ಬರೆದಿದ್ದಾರೆ.
"ಯಾರು ಇಂತಹ ಕಾನೂನುಗಳನ್ನು ಮಾಡುತ್ತಿದ್ದಾರೆ? ನಮ್ಮದೇ ದೇಶದಲ್ಲಿ ಹಿಂದೂಗಳು ಹೇಗೆ ಇರಬೇಕು ಎಂದು ನಿರ್ಧರಿಸಲು ಇವರು ಯಾರು? ಬಿಂದಿ ಮತ್ತು ಧಾರ್ಮಿಕ ದಾರ ಕಂಡರೆ ಏನು ತೊಂದರೆ?" ಎಂದು ಇನ್ನೊಬ್ಬರು ಬರೆದಿದ್ದರೆ, "ಹಿಂದೂ ಸಂಘಟನೆಗಳೇ ನಿಮಗೆ ಇದು ಕೇಳಿಸುತ್ತಿದೆಯೇ? ಲೆನ್ಸ್‌ಕಾರ್ಟ್ ಮ್ಯಾನೇಜ್‌ಮೆಂಟ್‌ಗೆ ಬುದ್ಧಿ ಕಲಿಸುವ ಸಮಯ ಬಂದಿದೆ. ನಾನು ಇನ್ನು ಮುಂದೆ ಇವರಿಂದ ಏನನ್ನೂ ಖರೀದಿಸುವುದಿಲ್ಲ, ನನ್ನ ಬಂಧು-ಮಿತ್ರರಿಗೂ ಇದನ್ನೇ ಹೇಳುತ್ತೇನೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
'ಎಲ್ಲಾ ಹಿಂದೂ ಪುರುಷರು ಮತ್ತು ಮಹಿಳೆಯರೇ ಗಮನಿಸಿ, ನೀವು ಎಲ್ಲೇ ಇರಿ, ನಿಮ್ಮ ಮನೆಯ ಸಂಸ್ಕೃತಿ ಮತ್ತು ಧಾರ್ಮಿಕ ಆಚರಣೆಗಳಿಂದ ದೂರವಾಗಬೇಡಿ. ಸೆಕ್ಯುಲರಿಸಂ ಹೆಸರಿನಲ್ಲಿ ನಿಮ್ಮ ಅಸ್ಮಿತೆಯನ್ನು ಬಿಟ್ಟುಕೊಡಬೇಡಿ' ಎಂದು ಸಲಹೆ ಕೊಟ್ಟಿದ್ದಾರೆ.
ಲೆನ್ಸ್‌ಕಾರ್ಟ್‌ನ ಈ 'ಏಕಪಕ್ಷೀಯ' ಎನ್ನಲಾದ ನಿಯಮಗಳು ಸದ್ಯ ದೊಡ್ಡ ಮಟ್ಟದ ವಿವಾದಕ್ಕೆ ನಾಂದಿ ಹಾಡಿವೆ. ಉದ್ಯೋಗದ ಸ್ಥಳದಲ್ಲಿ ಸಮಾನತೆ ಇರಬೇಕು ಎಂಬ ವಾದದ ನಡುವೆ, ಒಂದು ಧರ್ಮದ ಆಚರಣೆಗೆ ನಿರ್ಬಂಧ ಹೇರಿ ಇನ್ನೊಂದಕ್ಕೆ ಅವಕಾಶ ನೀಡುತ್ತಿರುವುದು ಕಂಪನಿಗೆ ಮುಳುವಾಗುವ ಲಕ್ಷಣಗಳು ಕಾಣುತ್ತಿವೆ. ಈ ಕುರಿತು ಲೆನ್ಸ್‌ಕಾರ್ಟ್ ಸಂಸ್ಥೆಯಿಂದ ಇನ್ನೂ ಅಧಿಕೃತ ಸ್ಪಷ್ಟನೆ ಬರಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ