ಕಾಶ್ಮೀರ ಗಡಿಯಲ್ಲಿ ಉಗ್ರರ ಲಾಂಚ್‌ಪ್ಯಾಡ್‌: ಗಡಿ ನುಸುಳಲು 300 ಉಗ್ರರು ಸಜ್ಜು!

By Suvarna NewsFirst Published Sep 2, 2021, 11:34 AM IST
Highlights

* ಕಾಶ್ಮೀರ ಗಡಿಯಲ್ಲಿ ಉಗ್ರರ ಲಾಂಚ್‌ಪ್ಯಾಡ್‌ ಸಕ್ರಿಯ

* ಗಡಿಯೊಳಕ್ಕೆ ನುಸುಳಲು ಕಾದು ಕುಳಿತಿದ್ದಾರೆ 300 ಉಗ್ರರು

ನವದೆಹಲಿ(ಸೆ.02): ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾದ ಬಳಿಕ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳು ಜಮ್ಮು- ಕಾಶ್ಮೀರ ಗಡಿಯಲ್ಲಿರುವ ಲಾಂಚ್‌ಪ್ಯಾಡ್‌ಗಳಲ್ಲಿ ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಿವೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಉಗ್ರರ ಚಲನವಲನಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.

ಕಳೆದ ಫೆಬ್ರವರಿಯಲ್ಲಿ ಕದನವಿರಾಮ ಘೋಷಣೆ ಆದ ಬಳಿಕ ಲಾಂಚ್‌ಪ್ಯಾಡ್‌ಗಳಿಂದ ಉಗ್ರರನ್ನು ತೆರವುಗೊಳಿಸಲಾಗಿತ್ತು. ಹೀಗಾಗಿ ಉಗ್ರರ ಚಟುವಟಿಕೆಗಳಿಗೆ ಬ್ರೇಕ್‌ ಬಿದ್ದಿತ್ತು. ಆದರೆ, ಅಷ್ಘಾನಿಸ್ತಾನ ತಾಲಿಬಾನಿಗಳ ವಶವಾಗುತ್ತಿದ್ದಂತೆ ಮತ್ತೊಮ್ಮೆ ಉಗ್ರರು ಬಾಲ ಬಿಚ್ಚಿದ್ದಾರೆ. ಪಾಕ್‌ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್‌-ಎ- ತೊಯ್ಬಾ ಮತ್ತು ಜೈಷ್‌-ಎ- ಮೊಹಮ್ಮದ್‌ ಸಂಘಟನೆಗಳು ಉಗ್ರರನ್ನು ಜಮ್ಮು- ಕಾಶ್ಮೀರದ ಒಳಕ್ಕೆ ನುಗ್ಗಿಸುವ ಯತ್ನವನ್ನು ತೀವ್ರಗೊಳಿಸಿವೆ.

ಗಡಿ ನಿಯಂತ್ರಣ ರೇಖೆಯಗುಂಟ ಇರುವ ಲಾಂಚ್‌ಪ್ಯಾಡ್‌ಗಳಲ್ಲಿ ಸುಮಾರು 300 ಉಗ್ರರು ಜಮಾವಣೆಗೊಂಡಿದ್ದಾರೆ. ಅವರನ್ನು ಗಡಿಯ ಒಳಕ್ಕೆ ಕಳುಹಿಸಲು ಸಂಚು ಹೆಣೆಯಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಅಲ್‌ ಖೈದಾದಂತಹ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳು ತಾಲಿಬಾನ್‌ಗೆ ಈಗಾಗಲೇ ಬೆಂಬಲ ಘೋಷಿಸಿರುವುದು ಪಾಕ್‌ ಮೂಲದ ಭಯೋತ್ಪಾದಕ ಸಂಘಟನೆಗಳ ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ಅಷ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಗೆಲುವನ್ನು ಉಗ್ರರು ಸಂಭ್ರಮಾಚರಣೆ ಮಾಡುತ್ತಿರುವ ವಿಡಿಯೋಗಳನ್ನು ಹರಿಬಿಟ್ಟು ಕಾಶ್ಮೀರದ ಯುವಕರನ್ನು ಸೆಳೆಯಲಾಗುತ್ತಿದೆ. ಈ ಮಧ್ಯೆ ಕಾಶ್ಮೀರ ಕಣಿವೆಯಿಂದ 70 ಮಂದಿ ಯುವಕರು ಕಳೆದ ಕೆಲವು ದಿನಗಳಿಂದ ನಾಪತ್ತೆ ಆಗಿದ್ದು, ಉಗ್ರಗಾಮಿ ಸಂಘಟನೆಗಳ ಜೊತೆ ಕೈಜೋಡಿಸಿರುವ ಸಾಧ್ಯತೆ ಇದೆ. ಈ ಬೆಳವಣಿಗೆ ಭದ್ರತಾ ಪಡೆಗಳನ್ನು ಚಿಂತೆಗೀಡು ಮಾಡಿದೆ ಎಂದು ಮೂಲಗಳು ತಿಳಿಸಿವೆ.

click me!