
ನವದೆಹಲಿ: ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ, ಭಾರತದ ಮೇಲೆ ಮತ್ತೊಮ್ಮೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ. 2008ರ ಮುಂಬೈ ದಾಳಿ ಮಾದರಿಯಲ್ಲೇ ಸಮುದ್ರ ಮಾರ್ಗವಾಗಿ ಭಾರತವನ್ನು ಟಾರ್ಗೆಟ್ ಮಾಡುವುದಾಗಿ ಎಚ್ಚರಿಸಿದೆ. ಲಷ್ಕರ್-ಎ-ತೊಯ್ಬಾದ ಉಪ ಮುಖ್ಯಸ್ಥ ಹಾಗೂ 2025ರ ಏಪ್ರಿಲ್ 22ರ ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್ ಸೈಫುಲ್ಲಾ ಕಸೂರಿ ಈ ಬೆದರಿಕೆ ವಿಡಿಯೋವನ್ನು ಬಿಡುಗಡೆ ಮಾಡಿದ್ದಾನೆ. 2025ರಲ್ಲಿ ಪಾಕಿಸ್ತಾನ ಆಕಾಶದಲ್ಲಿ ಪಾರುಪತ್ಯ ಮೆರೆದಿದೆ, ಇನ್ನು 2026ರಲ್ಲಿ ಸಮುದ್ರದಲ್ಲೂ ನಮ್ಮದೇ ಹವಾ ಇರಲಿದೆ ಎಂದು ಕಸೂರಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಶತ್ರುಗಳಿಗೆ ಭೂಮಿ, ಆಕಾಶ ಅಥವಾ ಸಮುದ್ರದಲ್ಲಿ ಎಲ್ಲಿಯೂ ಜಾಗ ಇರುವುದಿಲ್ಲ, ಇದು ದೇವರ ಇಚ್ಛೆ ಎಂದು ಲಷ್ಕರ್ ನಾಯಕ ವಿಡಿಯೋದಲ್ಲಿ ಹೇಳಿದ್ದಾನೆ.
ಕಾಶ್ಮೀರದಲ್ಲಿ ಭಾರತ ತೆಗೆದುಕೊಳ್ಳುತ್ತಿರುವ ಕ್ರಮಗಳಿಗೆ ಬಲೂಚಿಸ್ತಾನದಲ್ಲಿ ತಕ್ಕ ಉತ್ತರ ಸಿಗಲಿದೆ ಎಂದು ಆತ ವಿಡಿಯೋದಲ್ಲಿ ಬೆದರಿಕೆ ಹಾಕಿದ್ದಾನೆ. ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ಉಗ್ರರ ಅಡಗುತಾಣಗಳ ಮೇಲೆ ಭಾರತ ನಡೆಸಿದ ಪ್ರತಿದಾಳಿಯನ್ನು ಕಸೂರಿ 'ದೌರ್ಜನ್ಯ' ಎಂದು ಕರೆದಿದ್ದಾನೆ. ತಮಗೆ ಪಾಕಿಸ್ತಾನ ಸೇನೆಯ ಸಂಪೂರ್ಣ ಬೆಂಬಲವಿದೆ ಎಂಬುದನ್ನು ಕೂಡ ಆತ ವಿಡಿಯೋದಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಪಾಕ್ ಸರ್ಕಾರ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂಬ ಭಾರತದ ಆರೋಪವನ್ನು ಕಸೂರಿಯ ಈ ವಿಡಿಯೋ ಮತ್ತಷ್ಟು ಗಟ್ಟಿ ಮಾಡಿದೆ.
ಪಾಕಿಸ್ತಾನದ ಮುರಿದ್ಕೆ ಮತ್ತು ಬಹಾವಲ್‌ಪುರ್‌ನಲ್ಲಿರುವ ಲಷ್ಕರ್ ಕೇಂದ್ರಗಳ ಮೇಲೆ ಭಾರತ ನಡೆಸಿದ ಪ್ರತಿದಾಳಿಯಿಂದ ಸೈಫುಲ್ಲಾ ಕಸೂರಿ ಕೆರಳಿದ್ದಾನೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. 2008ರ ಮುಂಬೈ ದಾಳಿಗೆ ಬಳಸಿದ ಸಮುದ್ರ ಮಾರ್ಗವನ್ನು ಪಾಕ್ ಬೆಂಬಲಿತ ಉಗ್ರ ಸಂಘಟನೆಗಳು ಮತ್ತೆ ಬಳಸಿಕೊಳ್ಳಲು ಯತ್ನಿಸಬಹುದು ಎಂಬ ಸೂಚನೆಯನ್ನು ಈ ವಿಡಿಯೋ ನೀಡುತ್ತಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ. ಈ ಬೆದರಿಕೆ ಕೇವಲ ಪ್ರಚಾರವೇ ಅಥವಾ ಇದರ ಹಿಂದೆ ಗಂಭೀರ ಸಂಚು ಏನಾದರೂ ಇದೆಯೇ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ.
ಪಾಕಿಸ್ತಾನದ ಪ್ರಜೆಯಾದ ಸೈಫುಲ್ಲಾ ಕಸೂರಿ, ಲಷ್ಕರ್-ಎ-ತೊಯ್ಬಾದ ಪ್ರಮುಖ ನಾಯಕರಲ್ಲಿ ಒಬ್ಬ. ಗಡಿ ದಾಟಿ ನಡೆಯುವ ಅನೇಕ ಭಯೋತ್ಪಾದಕ ಕೃತ್ಯಗಳ ಸೂತ್ರಧಾರ ಈತ. ಭಾರತದಲ್ಲಿ ನಡೆಸಿದ ಹಲವು ದಾಳಿಗಳೇ ಕಸೂರಿಯನ್ನು ಲಷ್ಕರ್-ಎ-ತೊಯ್ಬಾದ ಉಪ ಮುಖ್ಯಸ್ಥನನ್ನಾಗಿ ಮಾಡಿತು. ಭಾರತೀಯ ಗುಪ್ತಚರ ಇಲಾಖೆಯಲ್ಲಿ 'ಖಾಲಿದ್' ಎಂಬ ಅಲಿಯಾಸ್‌ನಿಂದ ಕರೆಯಲ್ಪಡುವ ಕಸೂರಿಯನ್ನು, ಎಲ್‌ಇಟಿಯ ಅತ್ಯಂತ ನಂಬಿಕಸ್ಥ ಫೀಲ್ಡ್ ಕಮಾಂಡರ್‌ಗಳಲ್ಲಿ ಒಬ್ಬ ಎಂದು ಪರಿಗಣಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ