ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ 2 ವಾರದಲ್ಲಿ 2ನೇ ಬಾರಿಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರ ನಡುವೆಯೇ ತಮ್ಮ ಸಂಪೂರ್ಣ ಆಸ್ತಿ ಹಾಗೂ ಕಂಪನಿಗಳ ಜವಾಬ್ದಾರಿಯನ್ನು ಪುತ್ರ ರುಚಿರ್ ಮೋದಿಗೆ ಹಸ್ತಾಂತೆ ಮಾಡಿದ್ದಾರೆ. ಈಗ ನನಗೆ ನಿವೃತ್ತಿಯ ಸಮಯ ಎಂದು ಅವರು ಟ್ವೀಟ್ ಮಾಡಿದ್ದಾರೆ.
ನವದೆಹಲಿ (ಜ.16): ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಲಂಡನ್‌ನಲ್ಲಿ ಐಸಿಯುನಲ್ಲಿ ಆಕ್ಸಿಜನ್ ಸಪೋರ್ಟ್‌ನಲ್ಲಿದ್ದಾರೆ. ಎರಡು ವಾರಗಳಲ್ಲಿ ಎರಡನೇ ಬಾರಿಗೆ ಅವರಿಗೆ ಕೊರೋನಾ ಸೋಂಕು ತಗುಲಿದೆ. ಅನಾರೋಗ್ಯದ ನಡುವೆಯೂ ಅವರು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ತಮ್ಮ ಕಂಪನಿ ಹಾಗೂ ಆಸ್ತಿಯ ಒಟ್ಟೂ ಜವಾಬ್ದಾರಿಯನ್ನು ಅವರು ಮಕ್ಕಳಿಗೆ ವಹಿಸಿದ್ದಾರೆ. ಲಲಿತ್ ಮೋದಿ ಅವರನ್ನು ಮೂರು ದಿನಗಳ ಹಿಂದೆ ಮೆಕ್ಸಿಕೋ ಸಿಟಿಯಿಂದ ಏರ್ ಲಿಫ್ಟ್ ಮಾಡುವ ಮೂಲಕ ಲಂಡನ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದಲೇ, ಅವರು ಕುಟುಂಬ ಟ್ರಸ್ಟ್‌ಗೆ ರಾಜೀನಾಮೆ ನೀಡಿದ್ದಲ್ಲದೆ, ತಮ್ಮ ಆಸ್ತಿ ಹಾಗೂ ಕಂಪನಿಯ ಹೊಣೆಯನ್ನು ಮಗನಾದ ರುಚಿರ್‌ಗೆ ಹಸ್ತಾಂತರಿಸುವುದಾಗಿ ಘೋಷಿಸಿದರು.
l In light of what I have gone thru, it’s time to retire and move on. And groom my kids. I am handing them all. 😀🥰 pic.twitter.com/DihwLqJd5e
— Lalit Kumar Modi (@LalitKModi)
ಲಲಿತ್ ಮೋದಿ ಅವರು ನಿವೃತ್ತಿಯ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ ಮತ್ತು ಕೆಕೆ ಮೋದಿ ಫ್ಯಾಮಿಲಿ ಟ್ರಸ್ಟ್‌ನ ಲಲಿತ್ ಕುಮಾರ್ ಮೋದಿ (ಎಲ್‌ಕೆಎಂ) ವಿಭಾಗವನ್ನು ಮಗ ರುಚಿರ್‌ಗೆ ಹಸ್ತಾಂತರಿಸಿದ್ದಾರೆ. ಲಲಿತ್ ಮೋದಿ ಇನ್ನು ಮುಂದೆ ಟ್ರಸ್ಟ್‌ನ ಫಲಾನುಭವಿಯೂ ಆಗಿರುವುದಿಲ್ಲ. ಇಡೀ ಕಂಪನಿಗೆ ಅವರು ರಾಜೀನಾಮೆಯನ್ನೂ ಘೋಷಿಸಿದರು. ಈ ಟ್ರಸ್ಟ್ ಗೆ ಸಂಬಂಧಿಸಿದಂತೆ ಲಲಿತ್ ಮೋದಿ ಅವರ ತಾಯಿ ಬೀನಾ ಮತ್ತು ಸಹೋದರಿ ನಡುವೆ ಕಾನೂನು ಹೋರಾಟ ನಡೆಯುತ್ತಿದೆ. ಈ ನಿರ್ಧಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಅವರ ತಾಯಿ ಬೀನಾ ಮೋದಿ ನಿರಾಕರಿಸಿದ್ದಾರೆ. 'ನಾನು ಹಾದುಹೋದ ದಾರಿಯಿಂದ ನಾನು ಪಡೆದ ಪಾಠವೆಂದರೆ ಈಗ ನಿವೃತ್ತಿ ಮತ್ತು ಮುಂದುವರಿಯುವ ಸಮಯ ಎನ್ನುವುದು. ಇದು ಮಕ್ಕಳನ್ನು ಬೆಳೆಸುವ ಸಮಯ, ನಾನು ಎಲ್ಲವನ್ನೂ ಅವರಿಗೆ ಒಪ್ಪಿಸುತ್ತಿದ್ದೇನೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬಹಳ ದಿನಗಳಿಂದ ತಾಯಿ-ತಂಗಿ ನಡುವೆ ಕಲಹ, ಪರಿಹಾರವಿಲ್ಲದೇ ಇರೋದನ್ನ ಕಂಡು ಲಲಿತ್ ಮೋದಿ ಅವರು ಕೆಕೆ ಮೋದಿ ಫ್ಯಾಮಿಲಿ ಟ್ರಸ್ಟ್ ಬಗ್ಗೆ ತನ್ನ ಸದಸ್ಯರಿಗೆ ಪತ್ರ ಬರೆದಿದ್ದಾರೆ. ತನ್ನ ತಾಯಿ ಮತ್ತು ಸಹೋದರಿ ನಡುವೆ ಬಹಳ ದಿನಗಳಿಂದ ಪ್ರಕರಣಗಳು ನಡೆಯುತ್ತಿದ್ದು, ಇತ್ಯರ್ಥಕ್ಕೆ ಹಲವು ಸುತ್ತಿನ ಮಾತುಕತೆ ನಡೆಸಿದರೂ ಪರಿಹಾರ ಸಿಕ್ಕಿಲ್ಲ, ಇದರಿಂದ ಸಾಕಷ್ಟು ತೊಂದರೆಯಾಗಿದೆ ಎಂದು ಬರೆದಿದ್ದಾರೆ. ಮಗಳು ಆಲಿಯಾ ಜೊತೆ ಚರ್ಚಿಸಿದ ನಂತರವೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಬರೆದಿದ್ದಾರೆ.
ಲಲಿತ್ ಮೋದಿ ಬಿಟ್ಟು ಮತ್ತೆ ಮಾಜಿ ಬಾಯ್‌ಫ್ರೆಂಡ್ ಹಿಂದೆ ಬಿದ್ದ ಸುಶ್ಮಿತಾ ಸೇನ್; ಮದುವೆ ಫೋಟೋ ವೈರಲ್?
ಮತ್ತೊಂದು ವಿಚಾರವನ್ನು ಹೇಳಲು ಬಯಸುತ್ತೇನೆ, ನನ್ನ ಮಕ್ಕಳಿಬ್ಬರೂ ಸಮಾನ ಫಲಾನುಭವಿಗಳು, ಆದರೆ ನಾಯಕ ಒಬ್ಬನೇ ಆಗಿರಬೇಕು. ನನ್ನ ಮಗಳು ತುಂಬಾ ಸ್ಮಾರ್ಟ್, ಆದರೆ ದುರದೃಷ್ಟವಶಾತ್ ಅವಳು ಈ ಪಾತ್ರವನ್ನು ಬಯಸುವುದಿಲ್ಲ. ನನ್ನ ತಂದೆಯ ಮರಣದ ನಂತರ ಉಂಟಾದ ದ್ವೇಷವನ್ನು ಅವಳು ನಿಭಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಲಲಿತ್ ಮೋದಿ ಅವರು ತಮ್ಮ ಸಹೋದರಿ ಮತ್ತು ತಾಯಿಯೊಂದಿಗಿನ ವಿವಾದದಿಂದ ಕುಟುಂಬದಲ್ಲಿ ವಿಭಜನೆಯ ಬಗ್ಗೆ ತಂದೆ ಮಾಡಿದ ತಪ್ಪನ್ನು ಪ್ರಸ್ತಾಪಿಸಿದ್ದಾರೆ. ನನಗೆ ತುಂಬಾ ಸಂತೋಷವಾಗುತ್ತಿದೆ, 59 ನೇ ವಯಸ್ಸಿನಲ್ಲಿ ಇದು ಸರಿಯಾದ ಸಮಯ. ಮುಂದಿನ ಜನರೇಷನ್‌ನ ವ್ಯಕ್ತಿಗಳಿಗೆ ವ್ಯವಹಾರವನ್ನು ಸರಿಯಾಗಿ ಹಂಚಿಕೆ ಮಾಡಬೇಕು ಎನ್ನುವ ವಿಚಾರವನ್ನು ನನ್ನ ತಂದೆ ಸರಿಯಾಗಿ ನಿಭಾಯಿಸಲಿಲ್ಲ. ಆ ದೊಡ್ಡ ತಪ್ಪನ್ನು ಪುನರಾವರ್ತಿಸಲು ನಾನು ಬಯಸುವುದಿಲ್ಲ ಎಂದಿದ್ದಾರೆ.
ಸುಶ್ಮಿತಾ ಲಲಿತ್ ಮೋದಿ ಪೋಟೋ ಎಡಿಟ್ ಮಾಡಿ ಕಿಚಾಯಿಸಿದ ಹಾಸ್ಯನಟ
ಕೆಕೆ ಮೋದಿ ಫ್ಯಾಮಿಲಿ ಟ್ರಸ್ಟ್ ಕುರಿತು ಲಲಿತ್ ಮೋದಿ, ಅವರ ತಾಯಿ ಬೀನಾ ಮೋದಿ ಮತ್ತು ಸಹೋದರಿ ನಡುವೆ ನಡೆಯುತ್ತಿರುವ ಕಾನೂನು ಹೋರಾಟವನ್ನು ನ್ಯಾಯಾಲಯವು ಸಂಧಾನ ಮಾಡಲು ಪ್ರಯತ್ನಿಸಿತು. 2022 ರಲ್ಲಿ, ಲಲಿತ್ ಮೋದಿ ಪರವಾಗಿ, ಪ್ರಸಿದ್ಧ ವಕೀಲ ಹರೀಶ್ ಸಾಳ್ವೆ ಮತ್ತು ಅವರ ತಾಯಿಯ ಪರವಾಗಿ ಕಪಿಲ್ ಸಿಬಲ್ ಸೇರಿದಂತೆ ಇತರ ವಕೀಲರು ಇತ್ಯರ್ಥಕ್ಕೆ ಮಾತುಕತೆ ನಡೆಸಿದರು, ಆದರೆ ಯಾವುದೇ ಪರಿಹಾರವನ್ನು ಕಂಡುಹಿಡಿಯಲಾಗಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, 2019 ರಲ್ಲಿ, ಲಲಿತ್ ಮೋದಿ ಅವರ ತಂದೆ ಕೆಕೆ ಮೋದಿ ಅವರ ಮರಣದ ನಂತರ, ಕುಟುಂಬದಲ್ಲಿ ಕಲಹ ಹೆಚ್ಚಾಯಿತು. ಇದು ಕೆಕೆ ಮೋದಿ ಫ್ಯಾಮಿಲಿ ಟ್ರಸ್ಟ್‌ನ ಆಸ್ತಿಗೆ ಸಂಬಂಧಿಸಿದ ವಿವಾದ. ಆಸ್ತಿ ಮಾರಾಟಕ್ಕೆ ಸಂಬಂಧಿಸಿದಂತೆ ಟ್ರಸ್ಟ್‌ನ ಸದಸ್ಯರಲ್ಲಿ ಒಮ್ಮತವಿಲ್ಲ ಎಂದು ಮೋದಿ ನ್ಯಾಯಾಲಯದಲ್ಲಿ ಪ್ರತಿಪಾದಿಸಿದರು. ಹಾಗಿದ್ದರೂ ಆಸ್ತಿಯನ್ನು ಮಾರಾಟ ಮಾಡಲು ಪ್ರಾರಂಭಿಸಿದರು ಮತ್ತು ಒಂದು ವರ್ಷದೊಳಗೆ ಅದರ ಸಮಾನ ಪಾಲನ್ನು ಟ್ರಸ್ಟ್‌ನ ಸದಸ್ಯರಿಗೆ ನೀಡಲಿಲ್ಲ. ಲಲಿತ್ ಅವರ ತಾಯಿ ಬೀನಾ ಮೋದಿ ಅವರು ಟ್ರಸ್ಟ್‌ನ ಯಾವುದೇ ಆಸ್ತಿಯನ್ನು ಮಾರಾಟ ಮಾಡಿಲ್ಲ ಎಂದು ಹೇಳಿದ್ದಾರೆ.