
ಕರ್ನೂಲ್: ಬೆಂಕಿ ಬಿದ್ರೆ ಬೇಳೆ ಬೇಯ್ಸಿಕೊಂಡ್ರಂತೆ, ನೆರೆಮನೆಗೆ ಬೆಂಕಿ ಬಿದ್ರೆ ಚಳಿ ಕಾಯಿಸಿಕೊಂಡರಂತೆ ಇಂತಹ ಗಾದೆ ಮಾತುಗಳನ್ನು ನೀವು ಕೇಳಿದ್ದೀರಿ ವೇದ ಸುಳ್ಳಾದರೂ ಗಾದೆ ಸುಳ್ಳಾಗದು ನೋಡಿ ಹಾಗೆಯೇ ಇಲ್ಲಿ ಬೆಂಕಿ ಬಿದ್ರೆ ಬೇಳೆ ಬೇಯ್ಸಿಕೊಂಡ್ರಂತೆ ಎಂಬ ಗಾದೆ ಮಾತೊಂದು ನಿಜವಾಗಿದೆ. ಹೌದು ಕೆಲ ದಿನಗಳ ಹಿಂದಷ್ಟೇ ಆಂಧ್ರಪ್ರದೇಶ ಕರ್ನೂಲ್‌ನಲ್ಲಿ ಬಸ್‌ಗೆ ಬೆಂಕಿ ತಗುಲಿ 20 ಜನ ಪ್ರಯಾಣಿಕರು ಸಜೀವ ದಹನಗೊಂಡ ಘಟನೆ ನಡೆದಿತ್ತು. ಈ 20 ಜನರ ಸಾವಿನೊಂದಿಗೆ ಅನೇಕ ಕುಟುಂಬಗಳ ಕನಸುಗಳು ಸುಟ್ಟು ಭಸ್ಮವಾಗಿದೆ. ಈ ದುರಂತದಲ್ಲಿ ಮಕ್ಕಳು ಸೋದರ, ಸೋದರಿ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಗೋಳು ಹೇಳತೀರದಾಗಿದೆ. ಆದರೆ ಇದೇ ಸುಟ್ಟು ಕರಕಲಾದ ಬಸ್‌ನಲ್ಲಿ ಕೆಲವರು ಚಿನ್ನ ಹುಡುಕುವ ಯತ್ನದಲ್ಲಿದ್ದಾರೆ. ಈ ವೀಡಿಯೋ ಈಗ ಭಾರಿ ವೈರಲ್ ಆಗಿದ್ದು, ಅನೇಕರು ವೀಡಿಯೋ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನಾಹುತಗಳು, ನೈಸರ್ಗಿಕ ವಿಕೋಪಗಳು ಆದಂತಹ ಸ್ಥಳಗಳಲ್ಲಿ, ಕಳ್ಳಕಾಕರು ಚಿನ್ನ ಬಣ್ಣ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಹುಡುಕುವುದಕ್ಕೆ ಬರುವುದು ಸಾಮಾನ್ಯ. ಭೂಕಂಪ ಪ್ರವಾಹ ಸಂಭವಿಸಿದಂತಹ ಅನೇಕ ಸ್ಥಳಗಳಲ್ಲಿ ಅಳಿದುಳಿದ ಪಳೆಯುಳಿಕೆಗಳ ಕೆಳಗೆ ಸಮಾಧಿಯಾದ ಮನೆಯ ಒಳಗೇನಾದರೂ ಚಿನ್ನಾಭರಣ ಸೇರಿದಂತೆ ಅಮೂಲ್ಯ ವಸ್ತುಗಳು ಇರಬಹುದು ಎಂದು ಬೇರೆ ಬೇರೆ ಕಡೆಯಿಂದ ಜನ ಅಲ್ಲಿಗೆ ಬರುತ್ತಾರೆ. ಬೇರೆಯವರ ಸಂಕಟವನ್ನೇ ಲಾಭವಾಗಿಸಿಕೊಳ್ಳುವ ಜನರು ಇವರು. ಇಂತಹ ಸ್ಥಳಗಳಲ್ಲಿ ಹುಡುಕಾಟ ನಡೆಸಿ ಏನಾದರೂ ಅಮೂಲ್ಯ ವಸ್ತುಗಳು ಸಿಕ್ಕರೆ ಎತ್ತಿಕೊಂಡು ಹೋಗುತ್ತಾರೆ. ಅದೇ ರೀತಿ ಇಲ್ಲಿಯೂ ನಡೆದಿದೆ.
ಕರ್ನೂಲ್ ಬಸ್ ದುರಂತದಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಕಬ್ಬಿಣದ ಕೆಲ ಕಟೌಟ್ ಮಾತ್ರ ಬಸ್ ಇತ್ತು, ಇಂತಹದೊಂದು ದುರಂತಕ್ಕೆ ನಡೆಯಿತು ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದೆ. ಈ ಬಸ್ ಒಳಗೆ ಕೆಲ ಮಹಿಳೆಯನ್ನು ಚಿನ್ನ ಹುಡುಕುತ್ತಾ ಬಂದಿದ್ದು, ಇವರ ವೀಡಿಯೋ ವೈರಲ್ ಆಗಿದೆ. ಚಿನ್ನ ಇರಬಹುದೇನೋ ಎಂದು ಹುಡುಕಲು ಬಂದಿದ್ದೇವೆ ಎಂದು ಅವರು ಘಟನೆಯ ಬಗ್ಗೆ ಯಾವುದೇ ವಿಷಾದವಿಲ್ಲದೇ ನಿರ್ಭಾವುಕರಾಗಿ ಹೇಳಿದ್ದಾರೆ. ಈ ವೇಳೆ ವೀಡಿಯೋ ಮಾಡಿದವರು ನಿಮಗೇನಾದರು ಸಿಕ್ತೇ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಆ ಮಹಿಳೆಯರೂ ಏನೂ ಸಿಕ್ಕಿಲ್ಲ, ನಾವು ಎಲ್ಲಾ ಮುಗಿದ ಮೇಲೆ ಬಂದೆವು ನಮಗಿಂತಲೂ ಮೊದಲೇ ಇಲ್ಲಿ ಅನೇಕರು ಬಂದು ಹೋಗಿದ್ದಾರೆ. ಅವರಿಗೆ ಏನಾದರೂ ಸಿಕ್ಕಿರಬಹುದು ನಮಗೇನು ಸಿಕ್ಕಿಲ್ಲ ಎಂದು ನಗುತ್ತಲೇ ಹೇಳಿದ್ದಾರೆ.
ವೀಡಿಯೋಗೆ ಸಾರ್ವಜನಿಕರ ಆಕ್ರೋಶ
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದ ಜನ ಮಾತ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೆಲುಗು ಮಾಧ್ಯಮವೊಂದರಲ್ಲಿ ವರದಿಯಾದಂತೆ, ಅಪಘಾತಕ್ಕೆ ತುತ್ತಾದ ಬಸ್ಸನ್ನು ಈಗಾಗಲೇ ಅಧಿಕಾರಿಗಳು ಬೇರೆಡೆ ಸಾಗಿಸಿದ್ದಾರೆ. ಆದರೆ ಈ ದುರಂತದಲ್ಲಿ ಸುಟ್ಟು ಹೋದವರ ಚಿನ್ನಾಭರಣಗಳು ಕೂಡ ಸುಟ್ಟು ಭಸ್ಮವಾಗಿರಬಹುದು ಎಂದು ಭಾವಿಸಿ ಕೆಲವರು ಇಲ್ಲಿನ ಬೂದಿಯನ್ನು ಹೊತ್ತೊಯ್ಯುತ್ತಿದ್ದಾರೆ ಎಂದು ವರದಿಯಾಗಿದೆ. ಮೃತರ ಚಿತಾಭಸ್ಮವನ್ನು ಚೀಲದಲ್ಲಿ ತುಂಬಿಸಿ ಕೆಲವರು ಇಲ್ಲಿಂದ ಸಾಗಿಸುತ್ತಿದ್ದಾರೆ. ಒಂದೆಡೆ ಈ ದುರಂತದಲ್ಲಿ ಬಲಿಯಾದವರು ತಮ್ಮವರಿಗಾಗಿ ರೋಧಿಸುತ್ತಿದ್ದರೆ ಇತ್ತ ಕೆಲವರು ಅವರು ಹಾಕಿದ್ದ ಚಿನ್ನಾಭರಣವೇನಾದರು ಸಿಗಬಹುದೇ ಎಂಬುದನ್ನು ನೋಡುತ್ತಿರುವುದು ವಿಚಿತ್ರ ಎನಿಸಿದೆ.
ಘಟನೆ ನಡೆದಿದ್ದು ಹೇಗೆ?
ಆಕ್ಟೋಬರ್ 23ರ ಗುರುವಾರ ಈ ಘಟನೆ ನಡೆದಿತ್ತು. 43 ಜನರನ್ನು ಹೊತ್ತಿದ್ದ ದಿಯು-ದಮನ್ ನೋಂದಾಯಿತ ವೆಮೂರಿ ಕಾವೇರಿ ಟ್ರಾವೆಲ್ಸ್ ಸ್ಲೀಪರ್ ಬಸ್ ಗುರುವಾರ ಬೆಳಗಿನ ಜಾವ 2:30ರ ಸುಮಾರಿಗೆ ಕರ್ನೂಲ್ ಬಳಿ ಸಾಗಿಬರುತ್ತಿತ್ತು. ಈ ವೇಳೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ 400 ಮೀ. ದೂರದವರೆಗೂ ಬೈಕ್ ಅನ್ನು ಬಸ್ ತಳ್ಳಿಕೊಂಡು ಹೋಗಿದೆ. ಈ ವೇಳೆ ಬೈಕ್‌ನ ಪೆಟ್ರೋಲ್ ಟ್ಯಾಂಕ್‌ನಿಂದ ಇಂಧನ ಸೋರಿಕೆಯಾಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ವೈರ್ ತುಂಡಾಗಿ ಶಾರ್ಟ್ ಸರ್ಕೀಟ್ ಉಂಟಾದ ಕಾರಣ ಬಸ್‌ನ ಬಾಗಿಲು ಲಾಕ್ ಆಗಿದೆ. ಕೆಲವೇ ಕ್ಷಣಗಳಲ್ಲಿ ಧಗಧಗಿಸಿದ ಬೆಂಕಿಯಿಂದ ಎಚ್ಚರಗೊಂಡ ಪ್ರಯಾಣಿಕರು ಬಾಗಿಲು ತೆರೆಯಲು ಪ್ರಯತ್ನಿಸಿದರೂ ತೆರೆಯದ ಕಾರಣ ತುರ್ತುನಿರ್ಗಮನ ದ್ವಾರ ಮತ್ತು ಕಿಟಕಿ ಗಾಜುಗಳನ್ನು ಒಡೆದು ಹೊರಜಿಗಿದಿದ್ದಾರೆ. ಆದರೆ ಬರೋಬ್ಬರಿ 19 ಪ್ರಯಾಣಿಕರು ಹೊರಬರಲಾರದೆ ಬಸ್‌ನಲ್ಲಿಯೇ ಕರಕಲಾಗಿ ದಾರುಣ ಅಂತ್ಯ ಕಂಡಿದ್ದಾರೆ. ಬೈಕರ್ ಕೂಡ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಪಂಜಾಬ್‌ನಲ್ಲಿ ಮತ್ತೊಬ್ಬ ಕಬ್ಬಡಿ ಆಟಗಾರನ ಹತ್ಯೆ: ಒಂದೇ ವಾರದಲ್ಲಿ 2ನೇ ಘಟನೆ: ಹೊಣೆಹೊತ್ತ ಬಿಷ್ಣೋಯ್ ಗ್ಯಾಂಗ್
ಇದನ್ನೂ ಓದಿ: ನಿನಗಾಗಿ ಹೆಂಡ್ತಿ ಕೊಂದೇ: ಒಂದೇ ಮೆಸೇಜ್ 4-5 ಹೆಂಗಸರಿಗೆ ಕಳುಹಿಸಿದ್ದ ಸ್ತ್ರೀಲೋಲ ಡಾ. ಮಹೇಂದ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ