ಖ್ಯಾತ ಕುಂಡಲಿ ಜ್ಯೋತಿಷಿ ಕೆಎಂ ಸಿನ್ಹಾ ಲೋಕಸಭಾ ಚುನಾವಣೆ ಫಲಿತಾಂಶ ಕುರಿತು ಭವಿಷ್ಯ ನುಡಿದಿದ್ದಾರೆ. ಈ ಬಾರಿ ಎನ್‌ಡಿಎ 400ರ ಗಡಿ ದಾಟಲಿದೆ ಎಂದಿದ್ದಾರೆ. ಬಿಜೆಪಿ 315 ಸ್ಥಾನ ಗೆಲ್ಲುವುದು ಪಕ್ಕಾ ಎಂದಿದ್ದಾರೆ. ಇದರ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಬಿರುಗಾಳಿ ಬೀಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ನವದೆಹಲಿ(ಜೂ.02) ಲೋಕಸಭಾ ಚುನಾವಣೆ ಫಲಿತಾಂಶ ಕುತೂಹಲ ತೀವ್ರಗೊಳ್ಳುತ್ತಿದೆ. ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಪರವಾಗಿದೆ. ಆದರೆ ಇದು ಮೋದಿ ಮತ ಸಮೀಕ್ಷೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. ಹೀಗಾಗಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಇದರ ನಡುವೆ ಸಟ್ಟಾ ಬಜಾರ್ ನಂಬರ್ ಕೂಡ ಆಸಕ್ತಿ ಕೆರಳಿದೆ. ಇದೀಗ ಖ್ಯಾತ ಕುಂಡಲಿ ಜ್ಯೋತಿಷಿ ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಕುರಿತು ಭವಿಷ್ಯ ನುಡಿದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ 400 ಗಡಿ ದಾಟಲಿದೆ ಎಂದಿದ್ದಾರೆ. ಇಷ್ಟೇ ಅಲ್ಲ ಬಿಜೆಪಿ 315 ಸ್ಥಾನ ಗೆಲ್ಲಲಿದೆ ಎಂದಿದ್ದಾರೆ.
ಬಿಜೆಪಿ, ಎನ್‌ಡಿಎ, ಕಾಂಗ್ರೆಸ್, ಇಂಡಿಯಾ ಒಕ್ಕೂಟ, ಚುನಾವಣೆ ದಿನಾಂಕ, ಫಲಿತಾಂಶ ಹಾಗೂ ರಾಹು ಕೇತುಗಳ ಲೆಕ್ಕಾಚಾರ ಆಧರಿಸಿ ಕೆಎಂ ಸಿನ್ಹ ಭವಿಷ್ಯ ನುಡಿದಿದ್ದಾರೆ. 5ನೇ ಮನೆಯಲ್ಲಿ ರಾಹು ಹಾಗೂ 7ನೇ ಮನೆಯಲ್ಲಿ ಸೂರ್ಯ ಇದ್ದಾಗ ಡೈರೆಕ್ಷನ್ ಸ್ಪಷ್ಟ ಎಂದು ಕುಂಡಲಿ ಜ್ಯೋತಿಷ್ಯ ಕೆಎಂ ಸಿನ್ಹ ಹೇಳಿದ್ದಾರೆ. ಹೀಗಾಗಿ ಎನ್‌ಡಿಎ ಗುರಿ ಸ್ಪಷ್ಟವಾಗಿತ್ತು. ಜೊತೆಗೆ ಜ್ಯೋತಿಷಿ ಕುಂಡಲಿಗಳು ಬಿಜೆಪಿ ಹಾಗೂ ಎನ್‌ಡಿಎ ಪರವಾಗಿ ಗೋಚರಿಸುತ್ತಿದೆ ಎಂದು ಸಿನ್ಹಾ ಹೇಳಿದ್ದಾರೆ.
ಬಿಜೆಪಿ ನಿರೀಕ್ಷೆ ಮುಟ್ಟದ ಎಕ್ಸಿಟ್ ಪೋಲ್, ಜನ್ ಕಿ ಬಾತ್ ಸರ್ವೆಯಲ್ಲಿ ಅಚ್ಚರಿ ಭವಿಷ್ಯ!
ನನ್ನ ಭವಿಷ್ಯ ಸುಳ್ಳಾಗುವುದಿಲ್ಲ. ಚುನಾವಣೆ ಫಲಿತಾಂಶದ ಬಳಿಕ ಭವಿಷ್ಯದಲ್ಲಿ ಹೇಳಿದ ಸಂಖ್ಯೆಗಳನ್ನು ಪರಿಶೀಲಿಸಿ ಎಂದು ಸಿನ್ಹ ಹೇಳಿದ್ದಾರೆ. ಪ್ರಮುಖವಾಗಿ ಪಶ್ಚಿಮ ಬಂಗಾಳದಲ್ಲಿ 25 ರಿಂದ 28 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದಿದ್ದಾರೆ. ಇದೇ ವೇಳೆ ಹಿಮಾಚಲದ 4 ಸ್ಥಾನ ಹಾಗೂ ಉತ್ತರಖಂಡದ 5 ಸ್ಥಾನಗಳನ್ನೂ ಬಿಜೆಪಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಬಿಜೆಪಿ ಸರ್ಕಾರ ಮಾಡಿದ ಪ್ರಮುಖ 2 ತಪ್ಪುಗಳಲ್ಲಿ ಮಹಾರಾಷ್ಟ್ರ ಹಾಗೂ ಬಿಹಾರ ಎಂದು ಕೆಎಂ ಸಿನ್ಹ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಪಕ್ಷಕ್ಕೆ ಸೇರಿಸಿಕೊಂಡು ಅಧಿಕಾರ ನೀಡಿರುವುದು ತಪ್ಪಾಗಿದೆ. ಇದೇ ರೀತಿ ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತೆ ಎನ್‌ಡಿಎ ಒಕ್ಕೂಟಕ್ಕೆ ವಾಪಸ್ ಆಗಿರುವುದು ಬಿಜೆಪಿ ಹೊಡೆತ ನೀಡಿದೆ ಎಂದು ಸಿನ್ಹ ಹೇಳಿದ್ದಾರೆ. ಹೀಗಾಗಿ ಮಹಾರಾಷ್ಟ್ರ ಹಾಗೂ ಬಿಹಾರದಲ್ಲಿ ಬಿಜೆಪಿಗೆ ಈ ಬಾರಿ ನಿರೀಕ್ಷಿತ ಸ್ಥಾನಗಳು ಇಲ್ಲ ಎಂದಿದ್ದಾರೆ.
Exit Poll Result ಇಂಡಿಯಾ ಮೈತ್ರಿಗೆ ಮತ ಹಾಕದ ಭಾರತ, ಮೋದಿಗೆ ಹ್ಯಾಟ್ರಿಕ್ ಬಹುಮತ!
ಇದೇ ವೇಳೆ ಹೈದರಾಬಾದ್ ಕ್ಷೇತ್ರದಿಂದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವಿರುದ್ಧ ಸ್ಪರ್ಧಿಸಿರುವ ಮಾಧವಿ ಲತಾ ಸೋಲು ಕಾಣಲಿದ್ದಾರೆ ಎಂದು ಸಿನ್ಹ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಮಾಧವಿ ಲತಾ ಗೆಲುವು ಕಾಣಬೇಕು ಅನ್ನೋದು ನನ್ನ ಹಂಬಲ, ಆದರೆ ಕುಂಡಲಿಯಲ್ಲಿ ಮಾಧವಿ ಲತಾ ಸೋಲು ತೋರಿಸುತ್ತಿದೆ ಎಂದಿದ್ದಾರೆ.