ಪುಣ್ಯ ಸ್ನಾನದ ವೇಳೆ ಹೆಲಿಕಾಪ್ಟರ್‌ನಿಂದ ಹೂಮಳೆ: ಕೊರೋನಾ ಮಾರ್ಗಸೂಚಿಗಳು ಗಾಳಿಗೆ!

By Kannadaprabha NewsFirst Published Apr 13, 2021, 8:58 AM IST
Highlights

ಕೊರೋನಾ ನಡುವೆ 20 ಲಕ್ಷ ಜನರಿಂದ ಕುಂಭಮೇಳದಲ್ಲಿ ಪುಣ್ಯಸ್ನಾನ| ಸಾಧುಗಳ ಪುಣ್ಯ ಸ್ನಾನದ ವೇಳೆ ಹೆಲಿಕಾಪ್ಟರ್‌ನಿಂದ ಹೂಮಳೆ| ಕುಂಭಮೇಳದಲ್ಲಿ ಕೊರೋನಾ ಮಾರ್ಗಸೂಚಿಗಳು ಗಾಳಿಗೆ

 

ಹರಿದ್ವಾರ(ಏ.13): ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿರುವ ನಡುವೆಯೇ ಉತ್ತರಾಖಂಡ್‌ನ ಹರಿದ್ವಾರದಲ್ಲಿ ಚಾಲನೆ ಸಿಕ್ಕಿರುವ ಕುಂಭಮೇಳಕ್ಕೆ ಜನಸಾಗರವೇ ಹರಿದುಬಂದಿದೆ. ನಾಗ ಸಾಧುಗಳು, ಇತರ ಸಾಧು-ಸಂತರು ಹಾಗೂ ಭಕ್ತಾದಿಗಳು ಸೇರಿದಂತೆ 20 ಲಕ್ಷಕ್ಕೂ ಹೆಚ್ಚು ಜನರು ಕುಂಭಮೇಳದ 2ನೇ ದಿನವಾದ ಸೋಮವಾರವೂ ಗಂಗಾ ನದಿಯಲ್ಲಿ ಮಿಂದೆದ್ದು, ಪುಣ್ಯಸ್ನಾನ ಮಾಡಿದರು.

ಸಾವಿರಾರು ಕಿಲೋ ಮೀಟರ್‌ಗಳಿಂದ ಕಾಲ್ನಡಿಗೆಯಲ್ಲಿ ಆಗಮಿಸಿ ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಸಾಧುಗಳಿಗೆ ಉತ್ತರಾಖಂಡ್‌ ಸರ್ಕಾರದ ವತಿಯಿಂದ ಹೆಲಿಕಾಪ್ಟರ್‌ ಮೂಲಕ ಹೂವಿನ ಮಳೆ ಸುರಿಸಲಾಯಿತು. ಕುಂಭಮೇಳದ ಪವಿತ್ರ ಪುಣ್ಯಸ್ನಾನದಲ್ಲಿ 17 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸಿದ ಕಾರಣ ಕೊರೋನಾ ನಿಯಂತ್ರಣದ ಮಾರ್ಗಸೂಚಿಗಳಾದ ಮಾಸ್ಕ್‌ ಧರಿಸುವಿಕೆ, ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಕ್ರಮಗಳನ್ನು ಅನುಸರಿಸಲಾಗಿಲ್ಲ ಎಂದು ಆಯೋಜಕರು ಕೈ-ಕೈ ಹಿಸುಕಿಕೊಂಡಿದ್ದಾರೆ.

ಇಂಥ ಬೃಹತ್‌ ಕಾರ್ಯಕ್ರಮಗಳಲ್ಲಿ ಕೊರೋನಾ ಮಾರ್ಗಸೂಚಿಗಳ ಪಾಲನೆ ಸುಲಭದ ಮಾತಲ್ಲ. ಆದಾಗ್ಯೂ, ಸೋಂಕು ನಿಯಂತ್ರಣದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಮಾರು 60 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಕುಂಭಮೇಳದ ಭದ್ರತೆಗಾಗಿ 20 ಸಾವಿರಕ್ಕೂ ಹೆಚ್ಚು ಪೊಲೀಸ್‌ ಮತ್ತು ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

click me!