ಕೋಲ್ಕತಾ: ದೇಶೀಯವಾಗಿಯೇ ನಿರ್ಮಿಸಲಾದ ಅತ್ಯಾಧುನಿಕ 'ವಿಂಧ್ಯಗಿರಿ' ಯುದ್ಧನೌಕೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಗುರುವಾರ ಇಲ್ಲಿ ದೇಶಕ್ಕೆ ಸಮರ್ಪಣೆ ಮಾಡಿದರು. ಭಾರತೀಯ ನೌಕಾಪಡೆಯ ತಂತ್ರಜ್ಞರು ವಿನ್ಯಾಸ ಮಾಡಿರುವ ಈ ನೌಕೆಯನ್ನು ಕೋಲ್ಕತಾದ ಗಾರ್ಡನ್ ರೀಚ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಿಸಲಾಗಿದೆ.
ನೌಕೆಯನ್ನು ದೇಶಕ್ಕೆ ಸಮರ್ಪಣೆ ಮಾಡಿ ಮಾತನಾಡಿದ ರಾಷ್ಟ್ರಪತಿ, ಅತ್ಯಾಧುನಿಕ ಯುದ್ಧನೌಕೆಯನ್ನು ದೇಶೀಯವಾಗಿಯೇ ನಿರ್ಮಿಸಿರುವುದು ಆತ್ಮನಿರ್ಭರ ಭಾರತದ ಪ್ರತೀಕವಾಗಿರುವುದರ ಜೊತೆಗೆ ದೇಶವು ತಾಂತ್ರಿಕವಾಗಿ ಮುನ್ನಡೆ ಸಾಧಿಸಿರುವುದನ್ನು ತೋರಿಸುತ್ತದೆ. ಈ ರೀತಿಯ ಯೋಜನೆಗಳು ಆತ್ಮನಿರ್ಭರ ಮತ್ತು ತಾಂತ್ರಿಕವಾಗಿ ಔನ್ನತ್ಯದ ಕುರಿತಾದ ದೇಶದ ಬದ್ಧತೆಯನ್ನು ತೋರಿಸುತ್ತದೆ ಎಂದಿದ್ದಾರೆ.
ಈ ನೌಕೆಯಲ್ಲಿ ಇನ್ನಷ್ಟು ತಾಂತ್ರಿಕ ಉಪಕರಣ ಮತ್ತು ರಕ್ಷಣಾ ಉಪಕರಣಗಳನ್ನು ಅಳವಡಿಸಿ ಬಳಿಕ ಸಮುದ್ರದಲ್ಲಿ ನಾನಾ ರೀತಿಯ ಪರೀಕ್ಷೆಗೆ ಒಳಪಡಿಸಲಾಗುವುದು. ಬಳಿಕ ಅದನ್ನು ನೌಕಾಪಡೆಗೆ ಹಸ್ತಾಂತರಿಸಲಾಗುವುದು.
ಸ್ಟಾರ್‌ವಾರ್ ಶೈಲಿ ಯುದ್ಧನೌಕೆಗೆ ಚೀನಾ ಸಜ್ಜು: ಇತರೆ ದೇಶಗಳಿಗಿಂತ 100 ವರ್ಷ ಮುಂದೆ ಹೋಗಲು ಪ್ಲ್ಯಾನ್!
ಯುದ್ಧ ನೌಕೆ ಸಾಮರ್ಥ್ಯ
ಭಾರತೀಯ ನೌಕಾಪಡೆಯು ಪ್ರಾಜೆಕ್ಟ್ 17 ಆಲ್ಫಾ ಯೋಜನೆಯಡಿ 7 ಯುದ್ಧನೌಕೆ ನಿರ್ಮಾಣಕ್ಕೆ ಯೋಜಿಸಿದ್ದು ಆ ಪೈಕಿ ವಿಂಧ್ಯಗಿರಿ 6ನೇಯದ್ದು. ಈ ನೌಕೆಯ ಶೇ.75ರಷ್ಟು ಬಿಡಿಭಾಗಗಳನ್ನು ದೇಶೀಯ ಕಿರು, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳಿಂದಲೇ ಪಡೆಯಲಾಗಿದೆ. ನೌಕೆಯಲ್ಲಿ ಅತ್ಯಾಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಗುರಿ ನಿರ್ದೇಶಿತ ಕ್ಷಿಪಣಿಗಳನ್ನು ಅಳವಡಿಸಲಾಗುವುದು. ನೌಕೆ 149 ಮೀಟರ್ ಉದ್ದವಿದ್ದು 6670 ಟನ್ ತೂಕವಿದೆ. ಗಂಟೆಗೆ 29 ನಾಟಿಕಲ್ ವೇಗದಲ್ಲಿ ಚಲಿಸಬಲ್ಲದಾಗಿದೆ. ವೈರಿಗಳ ಕಣ್ತಪ್ಪಿಸುವ ಹಾಗೂ ಭೂಮಿ, ಆಗಸ, ಸಮುದ್ರದಿಂದ ತನ್ನತ್ತ ತೂರಿ ಬರುವ ಯಾವುದೇ ಅಪಾಯವನ್ನು ಧ್ವಂಸಗೊಳಿಸುವ ಶಕ್ತಿ ಈ ಯುದ್ಧನೌಕೆಗಿದೆ.
ಐತಿಹಾಸಿಕ ಸಾಧನೆ ಮಾಡಿದ ನೌಕಾಸೇನೆ, ರಾತ್ರಿ ಹೊತ್ತಿನಲ್ಲಿ ಯುದ್ಧನೌಕೆಯಲ್ಲಿ ಯಶಸ್ವಿಯಾಗಿ ಇಳಿದ ಮಿಗ್-29ಕೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ