ಕೋಲ್ಕತಾದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ, ಹತ್ಯೆ ಹಾಗೂ ನಂತರ ಆಸ್ಪತ್ರೆ ಮೇಲೆ ನಡೆದ ದಾಳಿ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ಕೊಟ್ಟಿದ್ದ ದೇಶವ್ಯಾಪಿ ಮುಷ್ಕರ ಯಶಸ್ವಿಯಾಗಿದೆ.
ನವದೆಹಲಿ (ಆ.18): ಕೋಲ್ಕತಾದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ, ಹತ್ಯೆ ಹಾಗೂ ನಂತರ ಆಸ್ಪತ್ರೆ ಮೇಲೆ ನಡೆದ ದಾಳಿ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ಕೊಟ್ಟಿದ್ದ ದೇಶವ್ಯಾಪಿ ಮುಷ್ಕರ ಯಶಸ್ವಿಯಾಗಿದೆ. 10 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ವಿವಿಧ ಸೇವೆ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುವ ಮೂಲಕ ರಕ್ಷಣೆಗಾಗಿ ಮತ್ತೊಮ್ಮೆ ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ. ಮುಷ್ಕರದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿಗಳು, ಲ್ಯಾಬ್ ಸಿಬ್ಬಂದಿ ಕೂಡಾ ಭಾಗಿಯಾಗಿದ್ದ ಕಾರಣ ದೇಶವ್ಯಾಪಿ ವೈದ್ಯಕೀಯ ಸೇವೆಯಲ್ಲಿ ಭಾರೀ ವ್ಯತ್ಯಯವಾಯಿತು.
ಮುಷ್ಕರ ನಡೆದ 24 ಗಂಟೆಗಳ ಅವಧಿಯಲ್ಲಿ ಎಲ್ಲಾ ರೀತಿಯ ತುರ್ತು ಸೇವೆಗಳು ಲಭ್ಯವಿತ್ತಾದರೂ, ಹೊರರೋಗಿ ವಿಭಾಗಗಳು (ಒಪಿಡಿ) ಕೆಲಸ ಮಾಡಲಿಲ್ಲ. ಜೊತೆಗೆ ಇಡೀ ದಿನ ಯಾವುದೇ ಶಸ್ತ್ರಚಿಕಿತ್ಸೆಗಳನ್ನು ನಡೆಸಲಿಲ್ಲ.ಬಹುತೇಕ ರಾಜ್ಯಗಳ ರಾಜಧಾನಿ, ಜಿಲ್ಲಾ ಕೇಂದ್ರಗಳು ಮತ್ತು ಇತರೆ ಸ್ಥಳಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು, ಕೋಲ್ಕತಾ ಘಟನೆಯ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.
ಅಲ್ಲದೆ ಕರ್ತವ್ಯದ ಸ್ಥಳದಲ್ಲಿ ವೈದ್ಯಕೀಯ ಸಿಬ್ಬಂದಿಗೆ ಗರಿಷ್ಠ ಭದ್ರತೆ ನೀಡಬೇಕು. ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆಯ ವಾತಾವರಣ ಕಲ್ಪಿಸಬೇಕು. ವೈದ್ಯಕೀಯ ಸಿಬ್ಬಂದಿ ಮೇಲಿನ ದಾಳಿ ನಡೆಸಿದವರಿಗೆ ಕಠಿಣ ಶಿಕ್ಷೆ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ಕಡೆ ಹಂತದಲ್ಲಿ ವೈದ್ಯಕೀಯ ಸಂಘಟನೆ ಮುಷ್ಕರಕ್ಕೆ ಕರೆಕೊಟ್ಟಿದ್ದ ಹಿನ್ನೆಲೆಯಲ್ಲಿ, ಈ ಮಾಹಿತಿ ತಿಳಿಯದ ಸಾವಿರಾರು ಜನರು ಶನಿವಾರ ಆಸ್ಪತ್ರೆಗೆ ತೆರಳಿ ಯಾವುದೇ ಸೇವೆ ಪಡೆಯದೆ ಮರಳುವಂತಾಯಿತು. ಹಲವೆಡೆ ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆ, ಕ್ಲಿನಿಕ್‌ಗಳ ಮುಂದೆ ಸರದಿ ನಿಂತಿದ್ದ ದೃಶ್ಯಗಳು ಕಂಡುಬಂದವು. ದೂರದ ಊರಿನಿಂದ ಬಂದಿದ್ದ ರೋಗಿಗಳು ಆಸ್ಪತ್ರೆಗಳು ಬಂದಾಗಿದ್ದನ್ನು ನೋಡಿ ಬೇಸರದಿಂದ ಮರಳಿದ ಘಟನೆಗಳೂ ನಡೆದವು.
ಭಾರತ ತನ್ನ ಅಭಿವೃದ್ಧಿಯ ವೇಗಕ್ಕೆ ಹೋಲಿಸಿದರೆ ಉದ್ಯೋಗ ಸೃಷ್ಟಿಯಲ್ಲಿ ಹಿಂದುಳಿದಿದೆ: ಗೀತಾ ಗೋಪಿನಾಥ್
ಘಟನೆ ಹಿನ್ನೆಲೆ: ಕೋಲ್ಕತಾದ ಆರ್.ಜಿ. ಕರ್ ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯೆಯ ಮೇಲೆ ಆ.9ರಂದು ಅತ್ಯಾಚಾರ ನಡೆಸಲಾಗಿತ್ತು. ಬಳಿಕ ಆಕೆಯನ್ನು ಹತ್ಯೆ ಮಾಡಲಾಗಿತ್ತು. ಇದಾದ ಬಳಿಕ ಬಂಗಾಳದಲ್ಲಿ ಆರಂಭಗೊಂಡ ಪ್ರತಿಭಟನೆ ದೇಶ ವ್ಯಾಪಿಯಾಗಿತ್ತು. ಮೊದಲಿಗೆ ಆಸ್ಪತ್ರೆ ಸಿಬ್ಬಂದಿ ಘಟನೆ ಮುಚ್ಚಿಹಾಕುವ ಯತ್ನ ಮಾಡಿದ್ದರಾದರೂ ವೈದ್ಯರ ಪ್ರತಿಭಟನೆ ಬಳಿಕ ದೂರು ನೀಡಿದ್ದರು. ಘಟನೆ ಕುರಿತು ಕಲ್ಕತಾ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿತ್ತು. ಅದರ ಬೆನ್ನಲ್ಲೇ ದುಷ್ಕರ್ಮಿಗಳ ಗುಂಪೊಂದು ಆಸ್ಪತ್ರೆಯ ಮೇಲೆ ದಾಳಿ ನಡೆಸಿತ್ತು. ಹೀಗಾಗಿ ಭಾರತೀಯ ವೈದ್ಯಕೀಯ ಸಂಘ ಶನಿವಾರ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿತ್ತು.