‘ಕಿಸಾನ್‌ ಸಮ್ಮಾನ್‌’ ವೆಬ್‌ನಲ್ಲಿ ಕನ್ನಡ ಕಡೆಗಣನೆ: ಹಿಂದಿ ಸೇರಿ 8 ಭಾಷೆಗಳಲ್ಲಿ ಲಭ್ಯ, ಕನ್ನಡ ಇಲ್ಲ!

Published : Jul 05, 2022, 06:35 AM IST
‘ಕಿಸಾನ್‌ ಸಮ್ಮಾನ್‌’ ವೆಬ್‌ನಲ್ಲಿ ಕನ್ನಡ ಕಡೆಗಣನೆ: ಹಿಂದಿ ಸೇರಿ 8 ಭಾಷೆಗಳಲ್ಲಿ ಲಭ್ಯ, ಕನ್ನಡ ಇಲ್ಲ!

ಸಾರಾಂಶ

* ಕಿಸಾನ್‌ ಸಮ್ಮಾನ್‌’ ವೆಬ್‌ನಲ್ಲಿ ಕನ್ನಡಕ್ಕೆ ‘ಮರ್ಯಾದೆ’ ಇಲ್ಲ! * ಲೋಪ ಸರಿಪಡಿಸದಿದ್ದರೆ ಹೋರಾಟ: ಕರವೇ ಎಚ್ಚರಿಕೆ * 50 ಲಕ್ಷದಷ್ಟಿರುವ ಕರ್ನಾಟಕದ ರೈತ ಫಲಾನುಭವಿಗಳ ಬಗ್ಗೆ ನಿರ್ಲಕ್ಷ್ಯ * 30 ಲಕ್ಷದಷ್ಟಿರುವ ಅಸ್ಸಾಮಿ, ಮಲಯಾಳಿ ಫಲಾನುಭವಿಗಳಿಗೆ ಮಣೆ * ಕನ್ನಡದ ಬಗ್ಗೆ ತಾತ್ಸಾರಕ್ಕೆ ಕರವೇ ನಾರಾಯಣಗೌಡ ತೀವ್ರ ಆಕ್ರೋಶ

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು(ಜು.05): ‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌’ ಯೋಜನೆಯ ವೆಬ್‌ಸೈಟ್‌ನಲ್ಲಿ ಹಿಂದಿ, ಗುಜರಾತಿ, ತಮಿಳು, ತೆಲುಗು ಸೇರಿದಂತೆ ಹಲವು ಭಾರತೀಯ ಭಾಷೆಗಳು ಇದ್ದರೂ ಕನ್ನಡವನ್ನು ಮಾತ್ರ ಕಡೆಗಣಿಸಲಾಗಿದೆ. ಇದರಿಂದ ರಾಜ್ಯದಲ್ಲಿರುವ 50 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ತೊಂದರೆ ಉಂಟಾಗುತ್ತಿದೆ. ಕೇಂದ್ರ ಸರ್ಕಾರ ತಕ್ಷಣ ಸರಿಪಡಿಸದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

ಯೋಜನೆಯ ವೆಬ್‌ಸೈಟ್‌ನಲ್ಲಿ ಇಂಗ್ಲಿಷ್‌, ಅಸ್ಸಾಮಿ, ಗುಜರಾತಿ, ಹಿಂದಿ, ಮಲಯಾಳಂ, ಮರಾಠಿ, ತಮಿಳು, ತೆಲುಗು ಭಾಷೆಗಳಿಗೆ ಮಾತ್ರ ಮಾನ್ಯತೆ ನೀಡಲಾಗಿದೆ. ದಕ್ಷಿಣ ಭಾರತದ ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೆ ವೆಬ್‌ಸೈಟ್‌ನಲ್ಲಿ ಮನ್ನಣೆ ನೀಡಿದ್ದರೂ, ಕನ್ನಡವನ್ನು ಬಳಕೆ ಮಾಡಲಾಗಿಲ್ಲ. ಯೋಜನೆಗೆ ಸಂಬಂಧಿಸಿದ ಮಾಹಿತಿ ಪರಿಶೀಲಿಸಬೇಕು, ಮೊಬೈಲ್‌ ಮೂಲಕವೇ ಇ-ಕೆವೈಸಿ ಮಾಡಬೇಕು ಎಂದರೆ ಕನ್ನಡ ಬಾರದ ರೈತರು ಸಂಕಷ್ಟಅನುಭವಿಸುವಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಅನ್ನದಾತರಿದ್ದರೂ ಕನ್ನಡವನ್ನು ನಿರ್ಲಕ್ಷಿಸಲಾಗದೆ. ‘ಪಿಎಂ ಕಿಸಾನ್‌’ ವೆಬ್‌ಸೈಟ್‌ ಮಾಹಿತಿ ಪ್ರಕಾರ ಅಸ್ಸಾಂನಲ್ಲಿ ಸುಮಾರು 31 ಲಕ್ಷ, ಕೇರಳದಲ್ಲಿ 37 ಲಕ್ಷ ಫಲಾನುಭವಿಗಳು ಮಾತ್ರ ಇದ್ದಾರೆ. ಕರ್ನಾಟಕದಲ್ಲಿ 50 ಲಕ್ಷಕ್ಕೂ ಅಧಿಕ ಅರ್ಹ ರೈತರಿದ್ದರೂ ಕನ್ನಡದಲ್ಲಿ ಮಾಹಿತಿ ಸಿಗುತ್ತಿಲ್ಲ ಎಂದರೆ ಅದನ್ನು ಸಹಿಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಭಾಷಾ ನೀತಿ ಕಡೆಗಣನೆ:

ಕೇಂದ್ರ ಸರ್ಕಾರ ಮೊದಲಿನಿಂದಲೂ ಕನ್ನಡಿಗರನ್ನು ತೃತೀಯ ದರ್ಜೆಯ ನಾಗರಿಕರಂತೆ ನೋಡುತ್ತಿದ್ದು ಭಾಷಾ ನೀತಿಯನ್ನು ಅನುಸರಿಸುತ್ತಿಲ್ಲ. ಈ ಹಿಂದಿನ ಬೆಳವಣಿಗೆಗಳನ್ನು ಅವಲೋಕಿಸಿದರೆ ಇದು ಸ್ಪಷ್ಟವಾಗುತ್ತದೆ. ಕೇಂದ್ರ ಸರ್ಕಾರದ ಯಾವುದೇ ಯೋಜನೆಯ ಮಾಹಿತಿ ಸ್ಥಳೀಯ ಭಾಷೆಗಳಲ್ಲಿ ಲಭ್ಯವಾಗಬೇಕು. ಇಲ್ಲದಿದ್ದರೆ ಅರ್ಹರನ್ನು ತಲುಪುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು ಕೇಂದ್ರ ಸರ್ಕಾರ ತಪ್ಪು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಪಿಎಂ ಕಿಸಾನ್‌ ಸಮ್ಮಾನ್‌’ ಯೋಜನೆಯಡಿ ಕೇಂದ್ರ ಸರ್ಕಾರ ವರ್ಷಕ್ಕೆ 3 ಕಂತುಗಳಲ್ಲಿ ಎಲ್ಲ ರೈತರಿಗೂ ತಲಾ 6 ಸಾವಿರ ರು. ನೀಡಿದರೆ, ರಾಜ್ಯ ಸರ್ಕಾರವೂ 4 ಸಾವಿರ ರುಪಾಯಿಯನ್ನು ಪಾವತಿಸುತ್ತದೆ. ಕನ್ನಡದಲ್ಲಿ ಮಾಹಿತಿ ಸಿಗದಿದ್ದರೆ ಮುಗ್ಧ ರೈತರು ಅವಕಾಶಗಳಿಂದ ವಂಚಿತರಾಗುತ್ತಾರೆ. ವೇದಿಕೆಯು ಯಾವಾಗಲೂ ನೊಂದ ರೈತರ ಪರವಾಗಿದೆ. ಕೇಂದ್ರ ಸರ್ಕಾರ ತಕ್ಷಣ ಕನ್ನಡದಲ್ಲಿ ಮಾಹಿತಿ ನೀಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ನಾರಾಯಣಗೌಡ ಎಚ್ಚರಿಸಿದ್ದಾರೆ.

ಕೃಷಿ ಇಲಾಖೆ ನಿರ್ಲಕ್ಷ್ಯ

‘ರಾಜ್ಯದ ಕೃಷಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿಕೊಂಡು ಕುಳಿತಿರುವುದರಿಂದಲೇ ಪಿಎಂ ಕಿಸಾನ್‌ ಸಮ್ಮಾನ್‌ ವೆಬ್‌ಸೈಟ್‌ನಲ್ಲಿ ಕನ್ನಡ ಕಡೆಗಣಿಸಲಾಗಿದೆ. ರಾಜ್ಯದಿಂದ ಬಿಜೆಪಿಯ 25 ಸಂಸದರನ್ನು ಚುನಾಯಿಸಿದ್ದು ಅವರು ಈ ಬಗ್ಗೆ ಧ್ವನಿ ಎತ್ತಬೇಕಾಗಿದೆ. ಕನ್ನಡವು ಶಾಸ್ತ್ರೀಯ ಭಾಷೆ ಸ್ಥಾನಮಾನ ಪಡೆದಿದ್ದರೂ ಆಗಾಗ್ಗೆ ಇಂತಹ ತಪ್ಪುಗಳು ಉಂಟಾಗುತ್ತಿದ್ದು ಇದನ್ನು ಸರಿಪಡಿಸಬೇಕು’ ಎಂದು ರೈತ ಮುಖಂಡ ಆಂಜನೇಯ ರೆಡ್ಡಿ ಒತ್ತಾಯಿಸಿದ್ದಾರೆ.

ಕನ್ನಡವೂ ಸಂವಿಧಾನಾತ್ಮಕ ಭಾಷೆಯಾಗಿದೆ. ಪಿಎಂ ಕಿಸಾನ್‌ ವೆಬ್‌ಸೈಟ್‌ನಲ್ಲಿ ಕನ್ನಡದಲ್ಲೂ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.

- ಹನುಮನಗೌಡ ಬೆಳಗುರ್ಕಿ, ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು