ಅಮೆರಿಕದ ಭಾರತೀಯ ದೂತಾವಾಸ ಕಚೇರಿಗೆ ಖಲಿಸ್ತಾನಿ ಉಗ್ರರಿಂದ ಬೆಂಕಿ: ಕೆನಡಾದಲ್ಲಿ ರಾಜತಾಂತ್ರಿಕರು ಟಾರ್ಗೆಟ್‌

By Kannadaprabha News  |  First Published Jul 5, 2023, 8:01 AM IST

ಜುಲೈ 8ರಂದು ಅಮೆರಿಕ ಹಾಗೂ ಕೆನಡಾದಲ್ಲಿ ಭಾರತದ ವಿರುದ್ಧ ‘ಖಲಿಸ್ತಾನಿ ಸ್ವಾತಂತ್ರ್ಯ ರ‍್ಯಾಲಿ’ ಪ್ರತಿಭಟನೆಗೂ ಕರೆ ನೀಡಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ.


ನ್ಯೂಯಾರ್ಕ್ (ಜುಲೈ 5, 2023): ತಮ್ಮ ನಾಯಕ ಹರದೀಪ್‌ ಸಿಂಗ್‌ ನಿಜ್ಜರ್‌ ಇತ್ತೀಚೆಗೆ ಕೆನಡಾದಲ್ಲಿ ಅನಾಮಿಕರ ಗುಂಡಿನ ದಾಳಿಗೆ ಬಲಿಯಾದ ಬಳಿಕ ಕ್ರುದ್ಧರಾಗಿರುವ ಖಲಿಸ್ತಾನಿ ಉಗ್ರರು, ಇದೀಗ ಭಾರತದ ವಿರುದ್ಧ ನೇರಾನೇರ ಸಮರಕ್ಕೆ ಇಳಿದಿದ್ದಾರೆ. ಇದರ ಭಾಗವಾಗಿ ಅಮೆರಿಕದಲ್ಲಿನ ಭಾರತೀಯ ದೂತಾವಾಸ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಜೊತೆಗೆ ಅಮೆರಿಕ, ಕೆನಡಾ ಮತ್ತು ಆಸ್ಪ್ರೇಲಿಯಾದಲ್ಲಿನ ಭಾರತೀಯ ದೂತಾವಾಸ ಕಚೇರಿಗಳ ಮೇಲೆ ಅಲ್ಲಿನ ಭಾರತೀಯ ರಾಯಭಾರಿಗಳ ಫೋಟೋ ಮತ್ತು ಹೆಸರು ಹಾಕಿ, ನಿಜ್ಜರ್‌ ಸಾವಿಗೆ ಇವರೇ ಕಾರಣ ಎಂದು ಘೋಷಿಸಿದ್ದಾರೆ.

ಅಲ್ಲದೆ ಜುಲೈ 8ರಂದು ಅಮೆರಿಕ ಹಾಗೂ ಕೆನಡಾದಲ್ಲಿ ಭಾರತದ ವಿರುದ್ಧ ‘ಖಲಿಸ್ತಾನಿ ಸ್ವಾತಂತ್ರ್ಯ ರ‍್ಯಾಲಿ’ ಪ್ರತಿಭಟನೆಗೂ ಕರೆ ನೀಡಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇಂಥ ಹೋರಾಟಗಳಿಗೆ ಅವಕಾಶ ನೀಡುವುದು ಉಭಯ ದೇಶಗಳ ನಡುವಣ ಸಂಬಂಧವನ್ನು ಹದಗೆಡಿಸಬಹುದು ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಎಚ್ಚರಿಸಿದ್ದಾರೆ. ಅದರ ಬೆನ್ನಲ್ಲೇ ಖಲಿಸ್ತಾನಿಗಳ ದಾಳಿಯನ್ನು ಅಮೆರಿಕ ಮತ್ತು ಕೆನಡಾ ದೇಶಗಳು ಖಂಡಿಸಿವೆ. ಜೊತೆಗೆ ಇಂಥ ಬೆಳವಣಿಗೆಗಳಿಗೆ ಅವಕಾಶ ನೀಡುವುದಿಲ್ಲ ಮತ್ತು ಭಾರತೀಯ ದೂತಾವಾಸ ಸಿಬ್ಬಂದಿಗೆ ಪೂರ್ಣ ರಕ್ಷಣೆ ನೀಡುವುದಾಗಿ ಭರವಸೆ ನೀಡಿವೆ.

Tap to resize

Latest Videos

ಇದನ್ನು ಓದಿ: ಪಂಜಾಬ್‌ ಗೋಲ್ಡನ್‌ ಟೆಂಪಲ್‌ ಬಳಿ 2 ದಿನದಲ್ಲಿ 2 ಸ್ಫೋಟ: ಖಲಿಸ್ತಾನಿ ಉಗ್ರರ ಕೃತ್ಯ?

ಬೆಂಕಿ ಹಚ್ಚಲು ಯತ್ನ:
ಭಾನುವಾರ ಬೆಳಗಿನ ಜಾವ 1.30 ರಿಂದ 2.30ರ ನಡುವೆ ಸ್ಯಾನ್‌ಫ್ರಾನ್ಸಿಸ್ಕೋ ಭಾರತೀಯ ದೂತಾವಾಸ ಕಚೇರಿಗೆ ಖಲಿಸ್ತಾನಿಗಳು ಬೆಂಕಿ ಹಚ್ಚಿದ್ದಾರೆ. ಅದರಿಂದ ಉಂಟಾದ ಹಾನಿಯ ಬಗ್ಗೆ ವಿವರಗಳು ಲಭಿಸಿಲ್ಲ. ಬಳಿಕ ಅದರ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಉಗ್ರರೇ ಪೋಸ್ಟ್‌ ಮಾಡಿದ್ದಾರೆ. ಜೊತೆಗೆ ದೂತಾವಾಸ ಕಚೇರಿ ಮೇಲೆ ಸಿಬ್ಬಂದಿಗಳಾದ ತರಣ್‌ಜಿತ್‌ ಸಿಂಗ್‌ ಸಂಧು ಮತ್ತು ಟಿ.ವಿ.ನಾಗೇಂದ್ರ ಪ್ರಸಾದ್‌ ಅವರ ಫೋಟೋ ಇರುವ ಬ್ಯಾನರ್‌ಗಳನ್ನು ಹಾಕಿದ್ದಾರೆ.

ಕೆನಡಾದಲ್ಲಿ ರಾಜತಾಂತ್ರಿಕರು ಟಾರ್ಗೆಟ್‌:
ಅತ್ತ ಕೆನಡಾದಲ್ಲಿ ಇತ್ತೀಚೆಗೆ ಖಲಿಸ್ತಾನಿ ಹೋರಾಟಗಾರರ ಮುಖ್ಯಸ್ಥ ಹರದೀಪ್‌ ಸಿಂಗ್‌ ನಿಜ್ಜರ್‌ನನ್ನು ಗುಂಡಿಕ್ಕಿ ಹತ್ಯೆಗೈದಿದ್ದಕ್ಕೆ ಒಟ್ಟಾವಾದಲ್ಲಿರುವ ಭಾರತೀಯ ಹೈಕಮಿಷನರ್‌ ಸಂಜಯ್‌ ಕುಮಾರ್‌ ವರ್ಮಾ ಹಾಗೂ ಟೊರೆಂಟೋದ ಕಾನ್ಸುಲ್‌ ಜನರಲ್‌ ಅಪೂರ್ವ ಶ್ರೀವಾಸ್ತವ ಕಾರಣ ಎಂದು ಅವರ ಫೋಟೋ ಜೊತೆಗಿನ ಪೋಸ್ಟರ್‌ಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಖಲಿಸ್ತಾನಿಗಳು ಹರಿಬಿಟ್ಟಿದ್ದಾರೆ. ಅಲ್ಲದೆ ಜುಲೈ 8ರಂದು ಟೊರೆಂಟೋ ಹಾಗೂ ವ್ಯಾಂಕೋವರ್‌ ದೂತಾವಾಸದ ಎದುರು ಮತ್ತು ಒಟ್ಟಾವಾದಲ್ಲಿರುವ ಭಾರತೀಯ ಹೈಕಮಿಷನರ್‌ ಕಚೇರಿಯೆದುರು ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ: ದುಬೈ ಬಿಸಿನೆಸ್‌ ಬಿಟ್ಟು ಉಗ್ರನಾದ ಅಮೃತ್‌ಪಾಲ್‌ ಸಿಂಗ್: ಪಂಜಾಬ್‌ ಬದಲು ಅಸ್ಸಾಂ ಜೈಲಿಗೆ ಹಾಕಿದ್ದೇಕೆ!

ಈ ಘಟನೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಭಾರತ, ಇಲ್ಲಿನ ಕೆನಡಾ ಹೈಕಮಿಷನರ್‌ ಕೆಮರೂನ್‌ ಮೆಕ್‌ಕೇ ಅವರನ್ನು ಕರೆಸಿ ಪ್ರತಿಭಟನೆ ವ್ಯಕ್ತಪಡಿಸಿದೆ. ಅಮೆರಿಕ ಸರ್ಕಾರ ಕೂಡ ದೂತಾವಾಸಕ್ಕೆ ಬೆಂಕಿ ಹಚ್ಚಿರುವುದನ್ನು ಖಂಡಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ‘ಅಮೆರಿಕ, ಕೆನಡಾ, ಬ್ರಿಟನ್‌ನಂತಹ ರಾಷ್ಟ್ರಗಳು ಭಾರತ ವಿರೋಧಿ ಖಲಿಸ್ತಾನಿಗಳಿಗೆ ಜಾಗ ನೀಡಬಾರದು. ಅದು ನಮ್ಮ ಸಂಬಂಧಗಳಿಗೆ ಒಳ್ಳೆಯದಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಅಮೆರಿಕದಲ್ಲಿ ಭಾರತೀಯ ದೂತಾವಾಸಕ್ಕೆ ಖಲಿಸ್ತಾನಿಗಳು ಬೆಂಕಿ ಹಚ್ಚಿರುವುದು ಒಂದು ತಿಂಗಳಲ್ಲಿ ಎರಡನೇ ಸಲವಾಗಿದೆ.

ಇದನ್ನೂ ಓದಿ: ಕೊನೆಗೂ ಸಿಕ್ಕಿಬಿದ್ದ ಖಲಿಸ್ತಾನಿ ಉಗ್ರ ಅಮೃತ್‌ಪಾಲ್‌ ಸಿಂಗ್‌: ಪಂಜಾಬ್‌ನಲ್ಲಿ ಅರೆಸ್ಟ್‌

click me!