ಆಯೋಧ್ಯೆ ರಾಮ ಮಂದಿರ ಹಾಗೂ ಭಾರತದ ಪವಿತ್ರ ಹಿಂದೂ ಧಾರ್ಮಿಕ ದೇಗುಲ ಮೇಲೆ ದಾಳಿ ಮಾಡುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಎಚ್ಚರಿಕೆ ನೀಡಿದ್ದಾನೆ.
ನವದೆಹಲಿ(ನ.11) ಭಾರತ ಹಾಗೂ ಕೆನಡಾ ನಡುವಿನ ಸಂಬಂಧಕ್ಕೆ ಖಲಿಸ್ತಾನಿ ಉಗ್ರರು ಹುಳಿ ಹಿಂಡಿದ್ದಾರೆ. ಕೆನಡಾದಲ್ಲಿ ಖಲಿಸ್ತಾನಿ ಚಟುವಟಿಕೆ ತೀವ್ರಗೊಳ್ಳುತ್ತಿದೆ. ಇದರ ನಡುವೆ ಪದೇ ಪದೇ ಭಾರತಕ್ಕೆ ಎಚ್ಚರಿಕೆ ನೀಡುತ್ತಿರುವ ಖಲಿಸ್ತಾನಿ ಉಗ್ರ, ನಿಷೇಧಿತ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಇದೀಗ ಹೊಸ ಬೆದರಿಕೆ ಹಾಕಿದ್ದಾರೆ. ಆಯೋಧ್ಯೆ ರಾಮ ಮಂದಿರ ಹಾಗೂ ಹಿಂದೂ ಪವಿತ್ರ ದೇಗುಲ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದಾನೆ. ನವೆಂಬರ್ 16 ಹಾಗೂ 17 ರಂದು ದಾಳಿ ಸಂಘಟಿಸುವುದಾಗಿ ಎಚ್ಚರಿಸಿದ್ದಾನೆ.
ವಿಡಿಯೋ ಮೂಲಕ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿದ್ದಾನೆ. ಈ ವಿಡಿಯೋವನ್ನು ಕೆನಡಾದ ಬ್ರಾಂಪ್ಟನ್‌ನಲ್ಲಿ ರೆಕಾರ್ಡ್ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೆನಡಾದಲ್ಲಿ ನಡೆಯುತ್ತಿರುವ ಹಿಂದೂ ಮಂದಿರಗಳ ಮೇಲಿನ ದಾಳಿ ಹಿಂದೆ ಇದೇ ಗುರುಪತ್ವಂತ್ ಸಿಂಗ್ ಪನ್ನುನ್ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಇದೀಗ ಈ ದಾಳಿ ಬೆನ್ನಲ್ಲೇ ಆಯೋಧ್ಯೆ ರಾಮ ಮಂದಿರ ಸೇರಿದಂತೆ ಭಾರತದಲ್ಲಿರುವ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡುವುದಾಗಿ ಪತ್ವಂತ್ ಎಚ್ಚರಿಸಿದ್ದಾನೆ.
undefined
ವಿಮಾನಗಳಿಗೆ ಬಾಂಬ್ ಬೆದರಿಕೆಯಿಂದ 300 ಕೋಟಿ ನಷ್ಟ, ಏರ್ ಇಂಡಿಯಾದಲ್ಲಿ ಪ್ರಯಾಣಿಸದಂತೆ ಉಗ್ರ ಪನ್ನು ಎಚ್ಚರಿಕೆ
ವಿಡಿಯೋ ಸಂದೇಶದಲ್ಲಿ ಪನ್ನುನ್ ಸ್ಫೋಟಕ ಮಾತುಗಳ ಮೂಲಕ ಬೆದರಿಕೆ ಹಾಕಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಆಯೋಧ್ಯೆ ರಾಮಲಲ್ಲಾ ಎದುರು ಪೂಜೆ ಮಾಡುತ್ತಿರುವ ಫೋಟೋವನ್ನು ಹಾಕಿ, ನಾವು ಆಕ್ರಮಣಕಾರಿ, ಹಿಂಸಾತ್ಮಕ ಹಿಂದೂ ಐಡಿಯಾಲಾಜಿ ಹುಟ್ಟಿದ ಆಯೋಧ್ಯೆಯ ಅಡಿಪಾಯ ಬುಡಮೇಲು ಮಾಡುತ್ತೇವೆ ಎಂದು ಎಚ್ಚರಿಸಿದ್ದಾನೆ. ಇದೇ ವೇಳೆ ಕೆನಡಾದಲ್ಲಿರುವ ಭಾರತೀಯರೇ ಹಿಂದೂ ಮಂದಿರದಿಂದ ದೂರವಿರಿ, ಖಲಿಸ್ತಾನಿ ಸೈನಿಕರು ಸತತ ದಾಳಿ ಮಾಡಲಿದ್ದಾರೆ ಎಂದು ಎಚ್ಚರಿಸಿದ್ದಾನೆ.
ಗುರುಪತ್ವಂತ್ ಸಿಂಗ್ ಪನ್ನುನ್ ಪದೇ ಪದೇ ಭಾರತದ ಮೇಲೆ ದಾಳಿ ಬೆದರಿಕೆ ವಿಡಿಯೋ ಹರಿಬಿಡುತ್ತಿದ್ದಾನೆ. ಕಳೆದ ತಿಂಗಳು ಏರ್ ಇಂಡಿಯಾ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದ. ಕಳೆದ ತಿಂಗಳು ಬಿಡುಗಡೆ ಮಾಡಿದ ವಿಡಿಯೋದಲ್ಲಿ ನವೆಂಬರ್ 1 ಹಾಗೂ ನವೆಂಬರ್ 19 ರಂದು ಏರ್ ಇಂಡಿಯಾ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದ. ಸಿಖ್ ಮಾರಣಹೋಮಕ್ಕೆ 40 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಏರ್ ಇಂಡಿಯಾ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದ.
ಪನ್ನುನ್ ಮೇಲೆ ಹಲವು ಕೇಸ್‌ಗಳು ದಾಖಲಾಗಿದೆ. ಆದರೆ ಕೆನಡಾ ಹಾಗೂ ಅಮೆರಿಕದಲ್ಲಿ ನೆಲೆಸಿರುವ ಪನ್ನುನ್ ಭಾರತದ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದಾರೆ. ಇತ್ತ ಕೆನಡಾ ಪನ್ನುನ್‌ಗೆ ಆಶ್ರಯ ನೀಡಿದೆ. ಇದೇ ರೀತಿ ಹಲವು ಖಲಿಸ್ತಾನಿ ಉಗ್ರರು ಕೆನಡಾದಲ್ಲಿ ಆಶ್ರಯ ಪಡೆದಿದ್ದಾರೆ. ಭಾರತದಲ್ಲಿ ಮೋಸ್ಟ್ ವಾಂಟೆಡ್ ಉಗ್ರರು ಅಕ್ರಮವಾಗಿ ಕೆನಡಾಗೆ ಹಾರಿ ಅಲ್ಲಿ ಅಶ್ರಯ ಪಡೆದಿರುವ ಪಟ್ಟಿಯನ್ನು ಭಾರತ ಕೆಲ ವರ್ಷಗಳ ಹಿಂದೇ ನೀಡಿದೆ. ಆದರೆ ಕೆನಡಾ ಈ ಪಟ್ಟಿಗೆ ಸೊಪ್ಪು ಹಾಕಿಲ್ಲ. ಇದೀಗ ಕೆನಡಾ ಹಾಗೂ ಅಮೆರಿಕದಲ್ಲಿ ಕುಳಿತು ಗುರುಪತ್ವಂತ್ ಸಿಂಗ್ ಪನ್ನುನ್ ಸೇರಿದಂತೆ ಕೆಲ ಉಗ್ರರು ಭಾರತಕ್ಕೆ ಬೆದರಿಕೆ ಹಾಕುತ್ತಿದ್ದಾರೆ.