
ಕೇರಳದಲ್ಲಿ ಕೃಷ್ಣಪ್ರಿಯಳ ತಂದೆ ಎಂದೇ ಖ್ಯಾತಿ ಪಡೆದಿದ್ದ ಮಗಳನ್ನು ಕೊಂದವನನನ್ನು ನ್ಯಾಯಾಲಯದ ಕಟೆಕಟೆಗೆ ಬಿಡದೇ ತಾನೇ ಕತೆ ಮುಗಿಸಿದ ಮಗಳೊಬ್ಬಳ ಹೆಮ್ಮೆಯ ತಂದೆ ಕೇರಳದ ಶಂಕರನಾರಾಯಣನ್ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಕೃಷ್ಣಪ್ರಿಯಳ ತಂದೆ ಎಂಬ ಒಂದೇ ಒಂದು ವಿಶೇಷಣದಿಂದ ಕೇರಳದಲ್ಲಿ ನೆನಪಿಸಿಕೊಳ್ಳುವ ವ್ಯಕ್ತಿಯೆಂದರೆ ಮಲಪ್ಪುರಂ ಮಂಚೇರಿ ಚಾರಂಗಾವ್ ಚೆನೋಟುಕುನ್ನುವಿನ ಪೂವಂಚೇರಿ ತೇಕೆವೀಟಿಲ್ ಶಂಕರನಾರಾಯಣನ್. ಎಳೆ ಪ್ರಾಯದ ಮಗಳ ಹಂತಕನನ್ನು ಕಾನೂನಿಗೆ ಬಿಡದೆ ಒಂದೇ ಗುಂಡಿನಲ್ಲಿ ಮುಗಿಸಿದ್ದರು. ಮಗಳನ್ನು ಅತೀವವಾಗಿ ಪ್ರೀತಿಸುತ್ತಿದ್ದ ಈ ಹೆಮ್ಮೆ ತಂದೆಯನ್ನು ಮಲಯಾಳಿಗಳು ಬಹಳ ಹೆಮ್ಮೆಯಿಂದ ಚರ್ಚಿಸಿದ್ದರು. ಆದರೆ ಈಗ 75 ನೇ ವಯಸ್ಸಿನಲ್ಲಿ ಮಗಳ ನೆನಪುಗಳೊಂದಿಗೆ ಅವರೂ ವಿಧಿವಶರಾಗಿದ್ದಾರೆ.
ಅದು ಬರೋಬ್ಬರಿ 24 ವರ್ಷಗಳ ಹಿಂದಿನ ಘಟನೆ. ಸೌಜನ್ಯ ಪ್ರಕರಣವನ್ನೇ ಹೋಲುವ ಘಟನೆ ಅದು. 2001 ಫೆಬ್ರವರಿ 9.ಕೇರಳದ ಮಂಚೇರಿ ಎಳಂಗೂರಿನಲ್ಲಿ ಏಳನೇ ತರಗತಿ ಓದುತ್ತಿದ್ದ ಕೃಷ್ಣಪ್ರಿಯ ಶಾಲೆ ಬಿಟ್ಟು ಬರುತ್ತಿದ್ದವಳು ಕಾಮುಕನ ಅಟ್ಟಹಾಸಕ್ಕೆ ಬಲಿಯಾಗಿದ್ದಳು. ಆಕೆಗೆ ಆಗ ಕೇವಲ 13 ವರ್ಷ ವಯಸ್ಸು. ನೆರೆಮನೆಯವನೇ ಆದ ಮುಹಮ್ಮದ್ ಕೋಯಾ (24)ಎಂಬಾತ ಕೃಷ್ಣಪ್ರಿಯಳನ್ನು ಅತ್ಯಾ*ಚಾರ ಮಾಡಿ ಕ್ರೂರವಾಗಿ ಕೊಲೆ ಮಾಡಿದನು. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು.
ಆ ಸಮಯದಲ್ಲಿ ಕೃಷ್ಣಪ್ರಿಯ ಕೊಲೆ ಕೇರಳವನ್ನೇ ಬೆಚ್ಚಿ ಬೀಳಿಸಿತ್ತು. ಮಾಧ್ಯಮಗಳು ಕೃಷ್ಣಪ್ರಿಯ ಕೊಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದವು. ಪೊಲೀಸರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದರು. ಶೀಘ್ರದಲ್ಲೇ ಆರೋಪಿ ಸಿಕ್ಕಿಬಿದ್ದಿದ್ದ. ಸಾಕ್ಷ್ಯಾಧಾರಗಳನ್ನು ಒದಗಿಸಿ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತು. ಆದರೆ ಬಹಳಷ್ಟು ನಾವು ಕೇಳಿದ ಇತರ ಅತ್ಯಾಚಾರದ ಪ್ರಕರಣಗಳಂತೆ ಇತಿಹಾಸದ ಪುಟ ಸೇರುತ್ತಿದ್ದ ಈ ಪ್ರಕರಣಕ್ಕೆ ಕೃಷ್ಣಪ್ರಿಯಳ ತಂದೆಯ ಕಣ್ಣೀರಿನ ಸೇಡು ಹೊಸ ತಿರುವು ನೀಡಿತ್ತು.
ಕೃಷ್ಣಪ್ರಿಯಳನ್ನು ಕೊಂದಿದ್ದ ಮುಹಮ್ಮದ್ ಕೋಯಾ 2002 ಜುಲೈ 27 ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಗೆ ಬರುತ್ತಿದ್ದಂತೆ ಗುಂಡೇಟಿಗೆ ಬಲಿಯಾದ. ಈ ಪ್ರಕರಣದಲ್ಲಿ ಕೃಷ್ಣಪ್ರಿಯಳ ತಂದೆ ಶಂಕರನಾರಾಯಣನನ್ನು ಪೊಲೀಸರು ಬಂಧಿಸಿದರು. ಮಗಳ ಸಾವಿನ ನಂತರ ಕಣ್ಣೀರಿನ ಕಹಿಯೊಂದಿಗೆ ರಾತ್ರಿಗಳನ್ನು ಕಳೆದ ತಂದೆ ಶಂಕರನಾರಾಯಣನ್ ಮಗಳ ಹತ್ಯೆಗೈದ ಪಾಪಿಯನ್ನು ಕೊಂದು ಹೀರೋ ಆದರು. ಮಗಳು ಕೃಷ್ಣಪ್ರಿಯಳ ಸಾವಿನ ನಂತರ ಶಂಕರನಾರಾಯಣನ್ ತುಂಬಾ ದುಃಖಿತರಾಗಿದ್ದರು. ಆದರೆ ಮನಸ್ಸಿನಲ್ಲಿದ್ದ ಸೇಡು ಮಾತ್ರ ಆರಿರಲಿಲ್ಲ.
ಘಟನೆ ನಂತರ ಕೇರಳದ ಮಂಚೇರಿ ಸೆಷನ್ಸ್ ನ್ಯಾಯಾಲಯವು ಶಂಕರನಾರಾಯಣನ್ ಮತ್ತು ಇತರ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಆದರೆ ಶಂಕರನಾರಾಯಣನ್ ಅವರನ್ನು 2006 ರ ಮೇ ತಿಂಗಳಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಹೈಕೋರ್ಟ್ ಖುಲಾಸೆಗೊಳಿಸಿತು. ಮೃತದೇಹವನ್ನು ಮರಳಿ ಪಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳ ಆರೋಪಿ ಮುಹಮ್ಮದ್ ಕೋಯಾಗೆ ಇತರ ಶತ್ರುಗಳಿರಬಹುದು ಎಂದು ನ್ಯಾಯಾಲಯವು ಅಂದು ಶಂಕರನಾರಾಯಣನ್ ಅವರನನ್ನು ಬಿಡುಗಡೆ ಮಾಡಿತು. ಕೃಷ್ಣಪ್ರಿಯ ತೀರಿಕೊಂಡ ನಂತರ ಶಂಕರನಾರಾಯಣ ಅವರ ಒಂದು ದಿನವೂ ಕಣ್ಣೀರಿಲ್ಲದೆ ಕಳೆದಿಲ್ಲ. ಸಾಯುವವರೆಗೂ ತನ್ನ ಮುದ್ದಿನ ಮಗಳು ಕೃಷ್ಣಪ್ರಿಯಳ ಬಗ್ಗೆಯೇ ಮಾತನಾಡುತ್ತಿದ್ದರು ಎಂದು ನೆರೆಹೊರೆಯವರು ಹೇಳುತ್ತಾರೆ. ಬರೋಬರಿ ಎರಡೂವರೆ ದಶಕಗಳೇ ಕಳೆದರೂ ಈ ಘಟನೆಯನ್ನು ಕೇರಳದ ಜನ ಇನ್ನೂ ಮರೆತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ