
ತ್ರಿಶೂರ್ (ಏ.21): ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ ಭೀಕರ ಪಟಾಕಿ ಕಾರ್ಖಾನೆ ಸ್ಫೋಟ ಸಂಭವಿಸಿದ್ದು, ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ. ಸ್ಫೋಟದ ತೀವ್ರತೆಗೆ ಹತ್ತು ಮಂದಿಯ ಶವಗಳು ಪತ್ತೆಯಾಗಿದ್ದರೆ, ಉಳಿದ ಮೂವರ ದೇಹದ ಭಾಗಗಳು ಘಟನಾ ಸ್ಥಳದ ಸುತ್ತಮುತ್ತ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮಂಗಳವಾರ ಮಧ್ಯಾಹ್ನ 3:30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಮೈದಾನವೊಂದರ ಮಧ್ಯದಲ್ಲಿದ್ದ ತಾತ್ಕಾಲಿಕ ಶೆಡ್‌ನಲ್ಲಿ ಪಟಾಕಿ ತಯಾರಿಸಲಾಗುತ್ತಿತ್ತು. ಘಟನೆಯ ವೇಳೆ ಸುಮಾರು 40 ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
5 ಮಂದಿಯ ಸ್ಥಿತಿ ಗಂಭೀರವಾಗಿದ್ದು, 17 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರೂ, ಮಧ್ಯಂತರವಾಗಿ ಸಂಭವಿಸುತ್ತಿದ್ದ ಸಣ್ಣ ಸಣ್ಣ ಸ್ಫೋಟಗಳು ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟುಮಾಡಿದವು.
ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ 50,000 ರೂಪಾಯಿ ಎಕ್ಸ್-ಗ್ರೇಷಿಯಾ ಘೋಷಿಸಿದ್ದಾರೆ. ಕೇರಳ ರಾಜ್ಯ ಸರ್ಕಾರವು ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ ಜಿಲ್ಲಾಡಳಿತಕ್ಕೆ 50 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ.
ಘಟನೆಯಲ್ಲಿ ಗಾಯಗೊಂಡ ವಿಲ್ಸನ್ ಎಂಬ ಕಾರ್ಮಿಕ ಮಾತನಾಡಿ, "ಹಠಾತ್ತನೆ ದೊಡ್ಡ ಬೆಳಕು ಕಾಣಿಸಿಕೊಂಡಿತು, ಮರುಕ್ಷಣವೇ ಬೆಂಕಿ ಆವರಿಸಿತು. ಆಮೇಲೆ ಏನಾಯಿತು ಎಂಬುದು ನನಗೆ ನೆನಪಿಲ್ಲ" ಎಂದು ಅಳಲು ತೋಡಿಕೊಂಡಿದ್ದಾರೆ. ಸ್ಥಳೀಯರ ಪ್ರಕಾರ, ಸ್ಫೋಟದ ಸದ್ದು ಎಷ್ಟು ಜೋರಾಗಿತ್ತೆಂದರೆ ಕಿಲೋಮೀಟರ್‌ಗಳ ದೂರದವರೆಗೂ ಕೇಳಿಸಿತ್ತು.
ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ತ್ರಿಶೂರ್ ವೈದ್ಯಕೀಯ ಕಾಲೇಜು ಮತ್ತು ಸುತ್ತಮುತ್ತಲ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವಿಶೇಷ ವ್ಯವಸ್ಥೆ ಮಾಡಿದ್ದಾರೆ. 'ಮಾಸ್ ಕ್ಯಾಶುಯಾಲಿಟಿ ಪ್ರೊಟೊಕಾಲ್' ಜಾರಿಗೊಳಿಸಲಾಗಿದ್ದು, ಸುಟ್ಟ ಗಾಯಗಳ ಚಿಕಿತ್ಸಾ ಘಟಕವನ್ನು (Burn Unit) ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ತಿರುವನಂತಪುರಂ, ಎರ್ನಾಕುಲಂ, ಕೊಟ್ಟಾಯಂ ಮತ್ತು ಕೋಝಿಕೋಡ್ ಜಿಲ್ಲೆಗಳಿಂದ ಹೆಚ್ಚುವರಿ ವೈದ್ಯರ ತಂಡಗಳನ್ನು ಕರೆಯಿಸಿಕೊಳ್ಳಲಾಗಿದೆ. ಕಳೆದ ಭಾನುವಾರವಷ್ಟೇ ತಮಿಳುನಾಡಿನ ವಿರುತ್ತನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿ 25 ಮಂದಿ ಬಲಿಯಾಗಿದ್ದರು. ಆ ಘಟನೆ ಮಾಸುವ ಮುನ್ನವೇ ಕೇರಳದಲ್ಲಿ ಮತ್ತೊಂದು ಭೀಕರ ದುರಂತ ಸಂಭವಿಸಿರುವುದು ಆತಂಕ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ