
ಕೋಳಿಕ್ಕೋಡ್: ಕೇರಳದ ಸೆಷನ್ಸ್ ನ್ಯಾಯಾಲಯವೊಂದರಲ್ಲಿ ವಿಲಕ್ಷಣ ತೀರ್ಪು ಹೊರಬಿದ್ದಿದೆ. ಸಂತ್ರಸ್ಥೆಯ ಫೋಟೊಗಳನ್ನು ನೋಡಿದ ನ್ಯಾಯಾಲಯ ಆಕೆ ಕಾಮೋತ್ತೇಜಕ ಬಟ್ಟೆಗಳನ್ನು ಧರಿಸುತ್ತಾಳೆ. ಈ ಹಿನ್ನೆಲೆಯಲ್ಲಿ ಆಕೆಯ ಮೇಲೆ ಲೈಂಗಿಕ ಕಿರುಕುಳವಾಗಿದೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ. ಈ ತೀರ್ಪಿನ ಪರ ವಿರೋಧದ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ. ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಸಂತ್ರಸ್ಥೆಯ ಚಾರಿತ್ರ್ಯದ ಬಗ್ಗೆ ನ್ಯಾಯಾಲಯ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿರುವುದಲ್ಲದೇ, ಮಹಿಳೆಯ ಖಾಸಗಿ ವಿಚಾರದಲ್ಲಿ ಮೂಗು ತೂರಿಸಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಇಷ್ಟಕ್ಕೂ ಈ ರೀತಿಯ ವಿಚಿತ್ರ ತೀರ್ಪು ಹೊರಬಂದಿರುವುದು ಕೇರಳದ ಕೋಳಿಕೋಡ್‌ನ ಸೆಷನ್ಸ್ ನ್ಯಾಯಾಲಯದಲ್ಲಿ.
"ಯುವತಿ ಕಾಮೋದ್ರೇಕಗೊಳಿಸುವ ಬಟ್ಟೆ ಧರಿಸಿದ್ದರೆ ಆಕೆಯ ಮೇಲೆ ಆಗಿರುವ ಲೈಂಗಿಕ ಕಿರುಕುಳವನ್ನು ಪರಿಗಣಿಸಲು ಸಾಧ್ಯವಿಲ್ಲ. ಆಕೆಯ ಬಟ್ಟೆಯೇ ಉದ್ರೇಕ ಗೊಳಿಸುವಂತಿದೆ," ಎಂದು ಹೇಳುವ ಮೂಲಕ ಸೆಷನ್ಸ್ ನ್ಯಾಯಾಲಯ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಲೈವ್ ಲಾ ವರದಿಯ ಪ್ರಕಾರ ಆಗಸ್ಟ್ 12ರಂದು ಕೇರಳದ ಕೋಳಿಕೋಡ್ ಸೆಷನ್ಸ್ ನ್ಯಾಯಾಲಯ ಸಿವಿಕ್ ಚಂದ್ರನ್ ಎಂಬ 74 ವರ್ಷದ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತ್ತು. ಚಂದ್ರನ್ ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ. ಆತನ ವಿರುದ್ಧ ಕಿರಿಯ ಬರಹಗಾರ್ತಿಯೊಬ್ಬರು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಚಂದ್ರ ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಆರೋಪಿ ಚಂದ್ರನ್ ಪರ ವಕೀಲರು ದೂರುದಾರೆಯ ಹಲವು ಫೋಟೊಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. "ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರುದಾರೆಯ ಫೋಟೊಗಳನ್ನು ನೋಡಿದರೆ ಆಕೆ ಕಾಮೋದ್ರೇಕ ಗೊಳಿಸುವ ಬಟ್ಟೆಗಳನ್ನು ತೊಡುತ್ತಾಳೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ದೂರುದಾರೆ ಧರಿಸಿರುವ ಹಲವು ಬಟ್ಟೆಗಳು ಅಶ್ಲೀಲವಾಗಿದ್ದು ಲೈಂಗಿಕತೆಯನ್ನು ಕೆರಳಿಸುವಂತಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354A ಅಡಿಯಲ್ಲಿ ಪ್ರಕರಣವನ್ನು ಪರಿಗಣಿಸಲು ಸಾಧ್ಯವಿಲ್ಲ," ಎಂದು ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ:
ಮುಂದುವರೆದ ನ್ಯಾಯಾಲಯ, ಆರೋಪಿಯ ವಯಸ್ಸನ್ನು ಗಮನಿಸಿದರೆ ದೈಹಿಕವಾಗಿ ದೃಢವಾಗಿಲ್ಲ ಮತ್ತು ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಸಾಧ್ಯತೆಯಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಸೆಕ್ಷನ್ 354A ಅಡಿಯಲ್ಲಿ ಪ್ರಕರಣ ದಾಖಲಾಗಬೇಕಾದರೆ ಯುವತಿಯ ಮೇಲೆ ದೈಹಿಕವಾಗಿ ಲೈಂಗಿಕ ಕಿರುಕುಳ ನೀಡಿರಬೇಕು ಅಥವಾ ಮಹಿಳೆಯ ಘನತೆಗೆ ಧಕ್ಕೆ ಮಾಡಿಬೇಕು ಎಂದು ನ್ಯಾಯಾಲಯ ಹೇಳಿದೆ. "ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಬೇಕೆಂದರೆ ದೂರುದಾರೆಯ ಮೇಲೆ ದೈಹಿಕವಾಗಿ ಕಿರುಕುಳ ಆಗಿರಬೇಕು. ಅಥವಾ ಆಕೆಯನ್ನು ಲೈಂಗಿಕ ಕ್ರಿಯೆಗಾಗಿ ಬೇಡಿಕೆ ಒಡ್ಡಿರಬೇಕು ಅಥವಾ ಮನವಿ ಮಾಡಿರಬೇಕು. ಅಥವಾ ಲೈಂಗಿಕ ಕಿರುಕುಳ ಎನಿಸುವ ಮಾತುಗಳನ್ನು ಆಡಿರಬೇಕು," ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ:
ಈ ಪ್ರಕರಣ 2020ರ ಫೆಬ್ರವರಿಯಲ್ಲಿ ನಡೆದಿದ್ದು ಯುವತಿ ಚಂದ್ರನ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ಆದರೆ ಈ ಆರೋಪವನ್ನು ತಳ್ಳಿಹಾಕಿದ್ದ ಚಂದ್ರನ್ ತಮ್ಮ ವಿರುದ್ಧ ಪಿತೂರಿ ಮಾಡಲಾಗಿದೆ. ತಮ್ಮ ವಿರೋಧಿಗಳು ಬೇಕೆಂದೇ ಪ್ರಕರಣವನ್ನು ದಾಖಲು ಮಾಡಿಸಿದ್ದಾರೆ. ಇದೊಂದು ಸುಳ್ಳು ಪ್ರಕರಣ ಎಂದು ಪ್ರತಿಕ್ರಿಯಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ