ಫೀ ಕಡಿತ ಕೋರಿದ್ದ ಪಾಲಕರ ಮಕ್ಕಳ ಶಿಕ್ಷಣಕ್ಕೇ ಕತ್ತರಿ!

Published : Jun 14, 2021, 07:33 AM IST
ಫೀ ಕಡಿತ ಕೋರಿದ್ದ ಪಾಲಕರ ಮಕ್ಕಳ ಶಿಕ್ಷಣಕ್ಕೇ ಕತ್ತರಿ!

ಸಾರಾಂಶ

* ಮೂವರು ಪೋಷಕರ ಮಕ್ಕಳನ್ನು ಹೊರದಬ್ಬಿದ ಕೇರಳ ಶಾಲೆ * ಶಾಲೆ ಶುಲ್ಕ ಕಡಿತಕ್ಕೆ ಹೈಕೋರ್ಟ್‌ ಮೊರೆ ಹೋಗಿದ್ದ ಪೋಷಕರು * ಪೋಷಕರ ವಿರುದ್ಧವೇ ಪಿತೂರಿ ಆರೋಪ ಹೊರಿಸಿದ ಶಾಲೆ

ಆಳಪ್ಪುಳ (ಜೂ.14): ಶಾಲಾ ಶುಲ್ಕ ಕಡಿತಗೊಳಿಸುವಂತೆ ಪೋಷಕರು ಕಳೆದ ವರ್ಷ ಕೇರಳ ಹೈಕೋರ್ಟ್‌ ಮೊರೆ ಹೋಗಿ ಯಶ ಕಂಡಿದ್ದರಿಂದ ಕೋಪಗೊಂಡು, ಅಳಪ್ಪುಳ ಜಿಲ್ಲೆಯ ಶಾಲೆಯೊಂದು ಆ ಪೋಷಕರ ಮೂವರು ಮಕ್ಕಳನ್ನು ವಜಾಗೊಳಿಸಿರುವ ಘಟನೆ ಸಂಗತಿ ಬೆಳಕಿಗೆ ಬಂದಿದೆ.

ಈ ವರ್ಷ 9ನೇ ತರಗತಿಗೆ ಸೇರ್ಪಡೆ ಆಗಬೇಕಿದ್ದ ಇಬ್ಬರು ವಿದ್ಯಾರ್ಥಿಗಳು ಹಾಗೂ 8ನೇ ತರಗತಿಗೆ ಸೇರ್ಪಡೆ ಆಗಬೇಕಿದ್ದ ಇನ್ನೊಬ್ಬ ವಿದ್ಯಾರ್ಥಿಯನ್ನು ಶಾಲೆಯ ಆಡಳಿತ ಮಂಡಳಿ ಹೊರಹಾಕಿದೆ. ತಮಗೆ ಪೂರ್ವದಲ್ಲಿ ನೋಟಿಸ್‌ ಕೂಡ ನೀಡದೇ ತಮ್ಮ ಮಕ್ಕಳನ್ನು ಹೊರಹಾಕಲಾಗಿದೆ. ಕಳೆದ ವರ್ಷ ಶಾಲಾ ಶುಲ್ಕ ಕಡಿಮೆ ಮಾಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಕ್ಕೆ ದ್ವೇಷ ಸಾಧಿಸಲು ತಮ್ಮ ಮಕ್ಕಳ ವಿರುದ್ಧ ಶಾಲೆ ಈ ಕ್ರಮ ಕೈಗೊಂಡಿದೆ ಎಂದು ಪೋಷಕರು ಆರೋಪಿಸಿದ್ದಾರೆ.

‘ಈಗಾಗಲೇ ಜೂ.2ರಿಂದ ಆನ್‌ಲೈನ್‌ ತರಗತಿಗಳು ಆರಂಭವಾಗಿವೆ. ಆದರೆ, ತರಗತಿಗಳು ಆರಂಭವಾಗಿದ್ದರ ಬಗ್ಗೆ ಆಗಲಿ, ಪಠ್ಯ ಪುಸ್ತಕಗಳ ವಿತರಣೆಯ ಬಗ್ಗೆ ಆಗಲಿ ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರ ಬಳಿಕ ವಿಚಾರಿಸಿದಾಗ ನನ್ನ ಮಗನನ್ನು ಮತ್ತು ಇಬ್ಬರು ವಿದ್ಯಾರ್ಥಿಗಳನ್ನು ಶಾಲೆಯಿಂದ ವಜಾ ಮಾಡಿರುವ ಸಂಗತಿ ತಿಳಿದುಬಂದಿದೆ’ ಎಂದು ಜೆವೆಲ್‌ ಪ್ರತಾಪ್‌ ಎಂಬ ಬಾಲಕನ ತಂದೆ ಪ್ರತಾಪನ್‌ ಹೇಳಿದ್ದಾರೆ.

ಇದೇ ವೇಳೆ ಮೂವರು ವಿದ್ಯಾರ್ಥಿಗಳನ್ನು ಹೊರಹಾಕಿದ್ದರ ಬಗ್ಗೆ ವಿವರಣೆ ನೀಡಿ ಪತ್ರವನ್ನು ಹೊರಡಿಸಿರುವ ಶಾಲೆಯ ಮುಖ್ಯ ಶಿಕ್ಷಕರು, ‘ಈ ವಿದ್ಯಾರ್ಥಿಗಳ ಪೋಷಕರು ಶಾಲೆಯ ವಿರುದ್ಧ ಸುಳ್ಳು ಪ್ರಚಾರ ಮಾಡಿದ್ದರಿಂದ ಪರಿಣಾಮವಾಗಿ ಅನೇಕ ಮಂದಿ ಪೋಷಕರು ಶಾಲಾ ಶುಲ್ಕವನ್ನು ಪಾವತಿಸಿಲ್ಲ. ಇದರಿಂದ ಶಾಲೆಗೆ ಆರ್ಥಿಕವಾಗಿ ಹೊರೆ ಆಗಿದೆ. ಅಲ್ಲದೇ ಶಿಕ್ಷಕರೊಬ್ಬರ ವಿರುದ್ಧ ಪೋಷಕರೊಬ್ಬರು ನಿಂದನೆಗಳನ್ನು ಮಾಡಿದ್ದರು. ಶಾಲೆಯನ್ನು ಮುಚ್ಚಿಸಲು ಈ ಪೋಷಕರು ಹುನ್ನಾರ ನಡೆಸಿದ್ದರು. ಈ ಕಾರಣಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?:

ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್‌ 2021ರ ಫೆಬ್ರವರಿಯಲ್ಲಿ ಶಾಲೆಗಳ ಶುಲ್ಕವನ್ನು ಶೇ.15ರಿಂದ ಶೇ.40ರಷ್ಟುಕಡಿತ ಮಾಡುವಂತೆ ಸೂಚಿಸಿತ್ತು. ಅದೇ ರೀತಿ ತಮ್ಮ ಮಕ್ಕಳಿಗೂ ಶುಲ್ಕವನ್ನು ಕಡಿತಗೊಳಿಸಬೇಕು ಎಂದು ಕೋರಿ ಜನಶಕ್ತಿ ಪಬ್ಲಿಕ್‌ ಸ್ಕೂಲ್‌ ವಿರುದ್ಧ ಮೂವರು ಪೋಷಕರಾದ ವಿನೋದ್‌ ಕುಮಾರ್‌, ದಿಲೀಪ್‌ ಕುಮಾರ್‌ ಮತ್ತು ಪ್ರತಾಪನ್‌ ಎನ್ನುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಪೋಷಕರ ಒತ್ತಡಕ್ಕೆ ಮಣಿದ ಶಾಲೆ ಆಡಳಿತ ಮಂಡಳಿ 15 ಸಾವಿರ ರು. ಕಡಿತಕ್ಕೆ ಒಪ್ಪಿಕೊಂಡಿತ್ತು. ಈ ಕಾರಣಕ್ಕೇ ಶಾಲೆಯು ಈಗ ಸೇಡು ತೀರಿಸಿಕೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!
ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ