ಕಳೆದ ಒಂದು ವಾರಗಳ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ, ಕೊರೋನಾ ಸೋಂಕಿತರು ಪತ್ತೆಯಲ್ಲಿ ನಂ.1 ಸ್ಥಾನದಲ್ಲಿದ್ದ ಮಹಾರಾಷ್ಟ್ರವನ್ನು ಹಿಂದಿಕ್ಕಿ ಕೇರಳ ಮೊದಲ ಸ್ಥಾನಕ್ಕೆ ಏರಿ ನಿಂತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಅ.31): ದೇಶದಲ್ಲೇ ಮೊದಲ ಕೊರೋನಾ ಕೇಸು ಪತ್ತೆಯಾದರೂ, ನಂತರ ಅತ್ಯುತ್ತಮ ನಿರ್ವಹಣೆ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದ ಕೇರಳ, ಇದೀಗ ದೇಶದಲ್ಲೇ ಅತಿ ಹೆಚ್ಚು ಕೊರೋನಾ ಸೋಂಕಿತರು ಪತ್ತೆಯಾಗುತ್ತಿರುವ ರಾಜ್ಯವಾಗಿ ಹೊರಹೊಮ್ಮಿದೆ. ಕಳೆದ 2 ದಿನಗಳಿಂದ ರಾಜ್ಯದಲ್ಲಿ ಸತತವಾಗಿ ತಲಾ 7,000ಕ್ಕಿಂತ ಹೆಚ್ಚು ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಗುರುವಾರ ದಾಖಲೆಯ 8790 ಕೇಸು ಪತ್ತೆಯಾಗಿದ್ದರೆ, ಶುಕ್ರವಾರ 7020 ಕೇಸು ಪತ್ತೆಯಾಗಿದೆ.
ಈ ಏರಿಕೆ ಕೇವಲ ಕಳೆದ 2 ದಿನದ್ದಲ್ಲ. ಕಳೆದ ಒಂದು ವಾರಗಳ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ, ಕೊರೋನಾ ಸೋಂಕಿತರು ಪತ್ತೆಯಲ್ಲಿ ನಂ.1 ಸ್ಥಾನದಲ್ಲಿದ್ದ ಮಹಾರಾಷ್ಟ್ರವನ್ನು ಹಿಂದಿಕ್ಕಿ ಕೇರಳ ಮೊದಲ ಸ್ಥಾನಕ್ಕೆ ಏರಿ ನಿಂತಿದೆ. ಅ.24ರಿಂದಲೂ ಸತತವಾಗಿ ಮಹಾರಾಷ್ಟ್ರಕ್ಕಿಂತ ಹೆಚ್ಚು ಕೇಸುಗಳು ಕೇರಳದಲ್ಲಿ ಪತ್ತೆಯಾಗಿವೆ. 12 ಕೋಟಿ ಜನಸಂಖ್ಯೆ ಹೊಂದಿರುವ ಮಹಾರಾಷ್ಟ್ರದಲ್ಲಿ ಈವರೆಗೆ 16.72 ಲಕ್ಷ ಸೋಂಕಿತರು ಪತ್ತೆಯಾಗಿದ್ದರೆ, 3.50 ಕೋಟಿ ಜನಸಂಖ್ಯೆಯ ಕೇರಳದಲ್ಲಿ 4.20 ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ.
undefined
ಡಿಸೆಂಬರ್‌ಗೆ ಭಾರತದಲ್ಲಿ ಕೊರೋನಾ 'ಕೋವಿಶೀಲ್ಡ್' ಲಸಿಕೆ ತುರ್ತು ಬಳಕೆ..!
ಆಗಸ್ಟ್ ಅಂತ್ಯದಿಂದ ಸೆಪ್ಟೆಂಬರ್ ಆರಂಭದವರೆಗೆ ಕೇರಳದಲ್ಲಿ ಎಲ್ಲೆಡೆ ಆಚರಿಸುವ ಓಣಂ ಹಬ್ಬದ ಸಂಭ್ರಮದಲ್ಲಿ ಜನರು ಕೊರೋನಾ ನಿಯಮಗಳನ್ನು ಮೈಮರೆತಿದ್ದೇ ಈ ದಿಢೀರ್ ಏರಿಕೆಗೆ ಕಾರಣವೆನ್ನಲಾಗಿದೆ. ಕೇಂದ್ರದ ಆರೋಗ್ಯ ಸಚಿವ ಹರ್ಷವರ್ಧನ್ ಕೂಡಾ ಕೇರಳದಲ್ಲಿ ಸೋಂಕು ಏರಿಕೆಗೆ ಓಣಂ ಸಂಭ್ರಮಾಚರಣೆಯೇ ಕಾರಣ ಎಂದು ದೂರಿದ್ದರು. ಓಣಂಗೂ ಮುನ್ನ ರಾಜ್ಯದಲ್ಲಿ ಕೇವಲ 50,000 ಕೇಸು ದಾಖಲಾಗಿದ್ದರೆ, ನಂತರ ಆ ಪ್ರಮಾಣ 4 ಲಕ್ಷಕ್ಕೆ ತಲುಪಿದೆ.