
ಕೇರಳದಾದ್ಯಂತ ಮುಂದುವರಿದಿರುವ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಪರಿಸ್ಥಿತಿಯ ಪರಾಮರ್ಶೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಏಳು ಜನರು ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದಿದ್ದಾರೆ. ನಿರಂತರ ಮಳೆಯ ನಡುವೆಯೂ ರಾಜ್ಯದಾದ್ಯಂತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಚುರುಕುಗೊಳಿಸಲಾಗಿದ್ದು, ಸದ್ಯ ಒಟ್ಟಾರೆ ಪರಿಸ್ಥಿತಿ ಹದಗೆಡದಂತೆ ನಿಯಂತ್ರಣದಲ್ಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯಾದ್ಯಂತ ಸಂಭವಿಸಿದ ಜೀವಹಾನಿಯ ವಿವರಗಳನ್ನು ನೀಡಿದ ಮುಖ್ಯಮಂತ್ರಿಗಳು, ಕೊಟ್ಟಾಯಂ ಜಿಲ್ಲೆಯ ಪೂಂಜಾರ್ ವಿಧಾನಸಭಾ ಕ್ಷೇತ್ರದ ಎರಟ್ಟುಪೆಟ್ಟ ಪ್ರದೇಶದಲ್ಲಿ ಇಬ್ಬರು ಮತ್ತು ಪುತ್ತುಪ್ಪಳ್ಳಿಯಲ್ಲಿ ಆಕಸ್ಮಿಕವಾಗಿ ನೀರಿನ ಟ್ಯಾಂಕ್‌ಗೆ ಬಿದ್ದು ಒಂದು ಮಗು ಸೇರಿದಂತೆ ಒಟ್ಟು ಮೂರು ಸಾವುಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ. ಉಳಿದಂತೆ ಮಲಪ್ಪುರಂನಲ್ಲಿ ನಾಲ್ಕು, ಎರ್ನಾಕುಲಂ ಮತ್ತು ಕೊಲ್ಲಂನಲ್ಲಿ ತಲಾ ಇಬ್ಬರು ಹಾಗೂ ಇಡುಕ್ಕಿ, ಮುವಾಟ್ಟುಪುಳ, ಕಣ್ಣೂರು ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇನ್ನು ನಾಪತ್ತೆಯಾಗಿರುವ ಏಳು ಜನರ ಪೈಕಿ ಕೊಲ್ಲಂ ಮತ್ತು ಕಣ್ಣೂರಿನಲ್ಲಿ ತಲಾ ಇಬ್ಬರು ಕಾಣೆಯಾಗಿದ್ದರೆ, ಮಲಪ್ಪುರಂ, ಇಡುಕ್ಕಿ ಮತ್ತು ಮುವಾಟ್ಟುಪುಳದಲ್ಲಿ ತಲಾ ಒಬ್ಬರು ಪತ್ತೆಯಾಗಿಲ್ಲ. ವಿಳಿಂಜಂ ಮತ್ತು ಮುಥಲಪೋಳಿಯಲ್ಲೂ ತಲಾ ಒಂದು ಸಾವು ಹಾಗೂ ತಲಾ ಒಬ್ಬರು ನಾಪತ್ತೆಯಾದ ವರದಿಗಳು ಬಂದಿವೆ.
ಪ್ರವಾಹಪೀಡಿತ ಪ್ರದೇಶಗಳಲ್ಲಿ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮತ್ತು ರಕ್ಷಿಸಲು ಸೇನಾ ಪಡೆಗಳು ಹಾಗೂ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಸುಲೂರಿನಿಂದ ಬಂದ ಎರಡು ಹೆಲಿಕಾಪ್ಟರ್‌ಗಳು ಈಗಾಗಲೇ ತಿರುವನಂತಪುರಂ ತಲುಪಿದ್ದು, ಪತ್ತನಂತಿಟ್ಟಕ್ಕೆ ಒಂದು ಮತ್ತು ಕೊಟ್ಟಾಯಂಗೆ ಎರಡು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಅರಕ್ಕೋಣಂನಿಂದ ಹೆಚ್ಚುವರಿಯಾಗಿ ಎರಡು ಎನ್‌ಡಿಆರ್‌ಎಫ್ ತಂಡಗಳನ್ನು ಕೋರಲಾಗಿದ್ದು, ಅವು ಶೀಘ್ರದಲ್ಲೇ ರಾಜ್ಯಕ್ಕೆ ಆಗಮಿಸಲಿವೆ. ಮುನ್ನೆಚ್ಚರಿಕೆಯ ಭಾಗವಾಗಿ ಕೊಲ್ಲಂನಿಂದ 14 ಮೀನುಗಾರಿಕಾ ದೋಣಿಗಳನ್ನು ಚೆಂಗನ್ನೂರಿಗೆ ರಕ್ಷಣಾ ಕಾರ್ಯಾಚರಣೆಗಾಗಿ ಕಳುಹಿಸಲಾಗಿದೆ. ತುರ್ತು ಸಂದರ್ಭ ಎದುರಾದರೆ ಆಲಪ್ಪುಳದಲ್ಲಿ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿಯನ್ನು ಹಾಗೂ ಕಣ್ಣೂರು ಮತ್ತು ವಯನಾಡಿನಲ್ಲಿ ರಕ್ಷಣಾ ಭಭದ್ರತಾ ದಳವನ್ನು ಬಳಸಿಕೊಳ್ಳಲು ನಿರ್ದೇಶನ ನೀಡಲಾಗಿದೆ. ಹೆಲಿಕಾಪ್ಟರ್‌ಗಳು ಮತ್ತು ಭೂ ತಂಡಗಳ ಮೂಲಕ ಸಂತ್ರಸ್ತರಿಗೆ ವಿತರಿಸಲು ಆಹಾರದ ಪ್ಯಾಕೆಟ್‌ಗಳನ್ನು ಸಿದ್ಧಪಡಿಸಿಡಲಾಗಿದೆ.
ಸದ್ಯ ರಾಜ್ಯದಾದ್ಯಂತ 316 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, ಪ್ರವಾಹ ಮತ್ತು ಭೂಕುಸಿತದಿಂದ ಸ್ಥಳಾಂತರಗೊಂಡ 11,018 ಜನರಿಗೆ ಆಶ್ರಯ ನೀಡಲಾಗಿದೆ. ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ನಿರಂತರವಾಗಿ ಏರುತ್ತಿರುವುದರಿಂದ ತಗ್ಗು ಪ್ರದೇಶ ಮತ್ತು ನದಿ ತೀರದ ನಿವಾಸಿಗಳು ತೀವ್ರ ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ವಿಶೇಷವಾಗಿ ಹಠಾತ್ ಪ್ರವಾಹದ ಬಳಿಕ ಪಂಬಾ ನದಿಯಲ್ಲಿ ನೀರಿನ ಮಟ್ಟ ಏರುತ್ತಿರುವುದು ಕಳವಳಕ್ಕೆ ಕಾರಣವಾಗಿದ್ದು, ನೀರಿನ ಹರಿವು ಹೆಚ್ಚಾದರೆ ಮೂಜಿಯಾರ್ ಅಣೆಕಟ್ಟನ್ನು ತೆರೆಯುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಜನರಿಗೆ ಸ್ಥಳಾಂತರಗೊಳ್ಳಲು ಸಿದ್ಧರಿರುವಂತೆ ಎಚ್ಚರಿಕೆ ನೀಡಲಾಗಿದೆ. ಭೂಕುಸಿತದ ಭೀತಿ ಇರುವ ಗುಡ್ಡಗಾಡು ಪ್ರದೇಶಗಳ ನಿವಾಸಿಗಳಿಗೂ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವೃತ್ತಿಪರ ಕಾಲೇಜುಗಳು ಸೇರಿದಂತೆ ರಾಜ್ಯದ 12 ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದು, ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪ ಕರಾವಳಿಗಳಲ್ಲಿ ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ದುರಂತದಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸರ್ಕಾರವು ಭರಪೂರ ಆರ್ಥಿಕ ನೆರವನ್ನು ಪ್ರಕಟಿಸಿದೆ. ಮೃತರ ಕುಟುಂಬಗಳಿಗೆ ಅಂತ್ಯಕ್ರಿಯೆಯ ವೆಚ್ಚಕ್ಕಾಗಿ ತಕ್ಷಣವೇ 10,000 ರೂಪಾಯಿಗಳನ್ನು ಮಂಜೂರು ಮಾಡಲಾಗಿದ್ದು, ಒಟ್ಟಾರೆಯಾಗಿ ಸಂತ್ರಸ್ತ ಕುಟುಂಬಗಳಿಗೆ 8 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಪ್ರವಾಹದ ನೀರು ನುಗ್ಗಿ ಪರಿಹಾರ ಶಿಬಿರಗಳನ್ನು ಆಶ್ರಯಿಸಿ, ಈಗ ಮನೆಗಳಿಗೆ ಹಿಂತಿರುಗುತ್ತಿರುವ ಕುಟುಂಬಗಳಿಗೆ ತಕ್ಷಣದ ಸಹಾಯವಾಗಿ ತಲಾ 10,000 ರೂಪಾಯಿಗಳನ್ನು ವಿತರಿಸಲಾಗುವುದು. ಜೊತೆಗೆ, ಈ ವಿಪತ್ತಿನಿಂದ ಜೀವನೋಪಾಯ ಕಳೆದುಕೊಂಡು ಸಂಕಷ್ಟದಲ್ಲಿರುವ ಜನರಿಗೆ ಜನಜೀವನ ಸಹಜ ಸ್ಥಿತಿಗೆ ಬರುವವರೆಗೆ, ಪ್ರತಿ ಪಡಿತರ ಚೀಟಿಗೆ ಇಬ್ಬರು ವ್ಯಕ್ತಿಗಳಿಗೆ ಸೀಮಿತವಾಗುವಂತೆ ಪ್ರತಿ ವ್ಯಕ್ತಿಗೆ ದಿನಕ್ಕೆ 300 ರೂಪಾಯಿಗಳ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ. ತೀವ್ರ ಭೂಕುಸಿತದಿಂದಾಗಿ ಮನೆಗಳನ್ನು ಸಂಪೂರ್ಣವಾಗಿ ಕಳೆದುಕೊಂಡ ಕುಟುಂಬಗಳಿಗೆ ನೀಡಲಾಗುತ್ತಿದ್ದ ಆರ್ಥಿಕ ಸಹಾಯವನ್ನು 10 ಲಕ್ಷ ರೂಪಾಯಿಗಳಿಂದ 12 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಪ್ರಾಥಮಿಕ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಒಟ್ಟು 164.98 ಹೆಕ್ಟೇರ್ ಕೃಷಿ ಭೂಮಿ ಹಾನಿಗೊಳಗಾಗಿದ್ದು, 3,596 ರೈತರು ನಷ್ಟ ಅನುಭವಿಸಿದ್ದಾರೆ. ಅಂತಿಮ ಮೌಲ್ಯಮಾಪನದ ಬಳಿಕ ಈ ನಷ್ಟದ ಅಂಕಿ-ಅಂಶಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಬೆಳೆ ಹಾನಿ ಪರಿಹಾರದ ದರಗಳು ಅತ್ಯಂತ ಕಡಿಮೆ ಇರುವುದರಿಂದ (ಉದಾಹರಣೆಗೆ ಎರಡೂವರೆ ಎಕರೆ ಭತ್ತದ ಗದ್ದೆ ಹಾನಿಗೆ ಕೇವಲ 13,500 ರೂಪಾಯಿ ಮಾತ್ರ ಸಿಗುತ್ತಿತ್ತು), ರೈತರಿಗೆ ಅನುಕೂಲ ಮಾಡಿಕೊಡಲು ಕೃಷಿ ಇಲಾಖೆಗೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಮುಂಬರುವ ಸಚಿವ ಸಂಪುಟ ಸಭೆಯ ನಂತರ ಪರಿಷ್ಕೃತ ಮತ್ತು ಹೆಚ್ಚಳ ಮಾಡಲಾದ ಬೆಳೆ ಪರಿಹಾರ ದರಗಳನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ರಾಜ್ಯದ ಒಟ್ಟು 14 ಜಿಲ್ಲೆಗಳಿಗೆ ಮಳೆ ಎಚ್ಚರಿಕೆ ನೀಡಿದೆ. ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್, ವಯನಾಡ್, ಮಲಪ್ಪುರಂ, ಎರ್ನಾಕುಲಂ, ಇಡುಕ್ಕಿ, ಕೊಟ್ಟಾಯಂ, ಆಲಪ್ಪುಳ ಮತ್ತು ಪತ್ತನಂತಿಟ್ಟ ಸೇರಿದಂತೆ 10 ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್' ಘೋಷಿಸಲಾಗಿದ್ದರೆ, ಪಾಲಕ್ಕಾಡ್, ತ್ರಿಶೂರ್, ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ 'ಹಳದಿ ಅಲರ್ಟ್' ಘೋಷಿಸಲಾಗಿದೆ. ಕರಾವಳಿ ಹಾಗೂ ಒಳನಾಡಿನಲ್ಲಿ ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಕೆಲವು ಪ್ರದೇಶಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಸದ್ಯಕ್ಕೆ ಸುರಕ್ಷಿತವಾಗಿದ್ದು, ಇಡುಕ್ಕಿ ಜಲಾಶಯವು ಶೇಕಡಾ 38.91, ಎಡಮಲಯಾರ್ ಶೇಕಡಾ 46.64, ಬಾಣಾಸುರ ಸಾಗರ ಶೇಕಡಾ 52.9, ಕಕ್ಕಿ ಶೇಕಡಾ 44.82, ಕಲ್ಲಡ ಶೇಕಡಾ 45, ಹಾಗೂ ಮಲಂಪುಳ ಮತ್ತು ಪೆÇೀಚಿ ಜಲಾಶಯಗಳು ಶೇಕಡಾ 35 ರಷ್ಟು ನೀರಿನ ಸಾಮರ್ಥ್ಯವನ್ನು ಹೊಂದಿವೆ.
ಅಣೆಕಟ್ಟುಗಳಿಂದ ಅಪಾರ ಪ್ರಮಾಣದ ನೀರನ್ನು ಬಿಡಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳನ್ನು ಮುಖ್ಯಮಂತ್ರಿಗಳು ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ವರದಿಗಳು ಸಂಪೂರ್ಣ ಸುಳ್ಳಾಗಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಭೀತಿಗೊಳಗಾಗಬಾರದು ಎಂದು ವಿನಂತಿಸಿದ್ದಾರೆ. ಸದ್ಯಕ್ಕೆ ಯಾವುದೇ ಪ್ರಮುಖ ಜಲಾಶಯದಲ್ಲಿ ಅಪಾಯದ ಮಟ್ಟ ಕಂಡುಬಂದಿಲ್ಲ ಮತ್ತು 2022 ರ ಕಾರ್ಯಾಚರಣೆಯ ಮಾರ್ಗಸೂಚಿಗಳ ಪ್ರಕಾರವೇ ಎಲ್ಲಾ ಮುನ್ನೆಚ್ಚರಿಕೆ ತಪಾಸಣೆಗಳನ್ನು ನಡೆಸಲಾಗುತ್ತಿದೆ. ವದಂತಿ ಹರಡುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ರಾತ್ರಿ ವೇಳೆ ಹಠತ್ತಾಗಿ ಸಂಭವಿಸಿದ ಮೇಘಸ್ಫೋಟದಂತಹ ಅತಿವೃಷ್ಟಿ ಘಟನೆಗಳಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ತಡರಾತ್ರಿಯವರೆಗೂ ಹವಾಮಾನ ಇಲಾಖೆಯಿಂದ ಇಷ್ಟು ತೀವ್ರ ಗಾತ್ರದ ಮಳೆಯ ಮುನ್ಸೂಚನೆ ಇರಲಿಲ್ಲ. ಮುನ್ಸೂಚನಾ ವ್ಯವಸ್ಥೆಗಳಿಗೂ ಸ್ಥಳೀಯ ಮೇಘಸ್ಫೋಟಗಳನ್ನು ಮುಂಚಿತವಾಗಿ ಊಹಿಸುವಲ್ಲಿ ಮಿತಿಗಳಿರುತ್ತವೆ. ಸಾಮಾನ್ಯವಾಗಿ 200 ಮಿಲಿಮೀಟರ್‌ಗಿಂತ ಹೆಚ್ಚಿನ ಮಳೆಯನ್ನು ಅತ್ಯಂತ ಭಾರೀ ಮಳೆ ಎನ್ನಲಾಗುತ್ತದೆ, ಆದರೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಪ್ರಮಾಣ 300 ಮಿಲಿಮೀಟರ್ ದಾಟಿದ್ದು, ವಡಸ್ಸೇರಿಕ್ಕರದಲ್ಲಿ ದಾಖಲೆಯ 350 ಮಿಲಿಮೀಟರ್ ಮಳೆಯಾಗಿದೆ. ರಾತ್ರೋರಾತ್ರಿ ಸುರಿದ ಇಂತಹ ಅನಿವಾರ್ಯ ತೀವ್ರತೆಯ ಮಳೆಯಿಂದಾಗಿ ಜನರನ್ನು ಸ್ಥಳಾಂತರಿಸಲು ಪ್ರಾಯೋಗಿಕವಾಗಿ ಸಮಯ ಸಿಗಲಿಲ್ಲ ಎಂದು ಮುಖ್ಯಮಂತ್ರಿ ವಿವರಿಸಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಮತ್ತು ಜಿಲ್ಲಾಡಳಿತಗಳು ಸರ್ವಸನ್ನದ್ಧವಾಗಿದ್ದು, ಸಾರ್ವಜನಿಕರು ಅಧಿಕೃತ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ