
ತಿರುವನಂತಪುರ (ಮೇ.1): ಮುಸ್ಲಿಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಭಾನುವಾರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕೇರಳದ ಹಿರಿಯ ರಾಜಕಾರಣಿ ಪಿ ಸಿ ಜಾರ್ಜ್‌ಗೆ (P C George ) ತಿರುವನಂತಪುರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ (Magisterial court in Thiruvananthapuram) ಜಾಮೀನು ನೀಡಿದೆ.
ಹಿರಿಯ ರಾಜಕಾರಣಿಯನ್ನು ಅವರ ನಿವಾಸದಲ್ಲಿಯೇ ಬಂಧಿಸಿ, ಪೊಲೀಸ್ ಜೀಪ್ ನಲ್ಲಿ ತಿರುವನಂತಪುರಕ್ಕೆ ಕರೆತಂದು ಔಪಚಾರಿಕವಾಗಿ ಬಂಧಿಸಲಾಗಿತ್ತು. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ, ಜಾಮೀನು ಪಡೆದುಕೊಂಡಿದ್ದಾರೆ. ಜಾಮೀನು (Bail) ಮಂಜೂರು ಮಾಡಿದ ನಂತರ, ಜಾರ್ಜ್ ಅವರು ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತನಿಖೆಯಲ್ಲಿ ಮಧ್ಯಪ್ರವೇಶಿಸದಂತೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಅಥವಾ ಯಾವುದೇ ದ್ವೇಷದ ಭಾಷಣಗಳನ್ನು ಮಾಡದಂತೆ ಅಥವಾ ಯಾವುದೇ ವಿವಾದಗಳಲ್ಲಿ ಭಾಗಿಯಾಗದಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ ಎಂದು ಹೇಳಿದರು.
ತಿರುವನಂತಪುರಂನಲ್ಲಿ ನಡೆಯುತ್ತಿರುವ ಅನಂತಪುರಿ ಹಿಂದೂ ಮಹಾ ಸಮ್ಮೇಳನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಮುಸ್ಲಿಮರು ನಡೆಸುತ್ತಿರುವ ರೆಸ್ಟೋರೆಂಟ್‌ಗಳಲ್ಲಿ ಪುರುಷತ್ವವನ್ನು ಕಡಿಮೆ ಮಾಅಡುವ ಹನಿಗಳನ್ನು ಬೆರೆಸಿದ ಚಹಾವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. 33 ವರ್ಷಗಳ ಕಾಲ ರಾಜ್ಯ ವಿಧಾನಸಭೆಯಲ್ಲಿ ಪೂಂಜಾರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜಾರ್ಜ್ ಅವರು ಮುಸ್ಲಿಮರು ನಡೆಸುತ್ತಿರುವ ವ್ಯವಹಾರಗಳನ್ನು ಬಹಿಷ್ಕರಿಸುವಂತೆ ಮುಸ್ಲಿಮೇತರರನ್ನು ಒತ್ತಾಯಿಸಿದ್ದರು.
ದೇಶವನ್ನು ಪ್ರೀತಿಸದ ಯಾವುದೇ ಧರ್ಮದ ಆಮೂಲಾಗ್ರ ಗುಂಪುಗಳ ಬೆಂಬಲ ಅಥವಾ ಮತವನ್ನು ನಾನು ಬಯಸುವುದಿಲ್ಲ ಎಂದೂ ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು. ನಾನು ಹೇಳಿರುವ ಈ ಮಾತುಗಳು ಯಾವುದೇ ಧರ್ಮದ ವಿರುದ್ಧವಾಗಿದೆ ಎಂದು ಆರೋಪಿಸಲಾಗಿರುವುದು ಅಚ್ಚರಿ ತಂದಿದೆ ಎಂದಿದ್ದಾರೆ. ಮೂಲಭೂತವಾದಿ ಮುಸ್ಲಿಂ ಗುಂಪುಗಳಿಗೆ ನನ್ನ ಬಂಧವನ್ನು ರಂಜಾನ್ ಉಡುಗೊರೆಯಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿದ್ದಾರೆ ಎಂದೂ ಪಿಸಿ ಜಾರ್ಜ್ ಆರೋಪಿಸಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ಎರಟ್ಟುಪೆಟ್ಟಾದಲ್ಲಿರುವ ಅವರ ನಿವಾಸದಿಂದ ಮುಂಜಾನೆ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಯಿತು ಮತ್ತು ಅವರ ವೈಯಕ್ತಿಕ ವಾಹನದಲ್ಲಿ ತಿರುವನಂತಪುರಂ ಎಆರ್ ಕ್ಯಾಂಪ್‌ಗೆ ರಸ್ತೆ ಮಾರ್ಗದ ಮೂಲಕ ಕರೆದೊಯ್ಯಲಾಯಿತು, ಅಲ್ಲಿ ಐಪಿಸಿಯ 153ಎ ಸೆಕ್ಷನ್ ಅಡಿಯಲ್ಲಿ ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಅಪರಾಧಕ್ಕಾಗಿ ಅವರ ಬಂಧನವನ್ನು ಔಪಚಾರಿಕವಾಗಿ ದಾಖಲಿಸಲಾಯಿತು. ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಅವರ ನಿರ್ದೇಶನದ ಮೇರೆಗೆ ತಿರುವನಂತಪುರಂ ಫೋರ್ಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಜಾರ್ಜ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಶನಿವಾರ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಏಪ್ರಿಲ್ ನಲ್ಲಿ ಸಾರ್ವಕಾಲಿಕ ದಾಖಲೆಯ 1.68 ಲಕ್ಷ ಕೋಟಿ GST ಸಂಗ್ರಹ!
ಪಿಸಿ ಜಾರ್ಜ್ ಅವರನ್ನು ಕಸ್ಟಡಿಗೆ ತೆಗೆದುಕೊಂಡಾಗಿನಿಂದ ಅವರ ಬಂಧನ ದಾಖಲಾಗುವವರೆಗಿನ ಸಂಪೂರ್ಣ ಸಮಯದಲ್ಲಿ, ತಿರುವನಂತಪುರದ ವಿವಿಧ ಸ್ಥಳಗಳಲ್ಲಿ ಬಿಜೆಪಿ ಕಾರ್ಯಕರ್ತರು ಪಿಸಿ ಜಾರ್ಜ್ ಪರ ಘೋಷಣೆಗಳನ್ನು ಕೂಗಿ ಬೆಂಬಲ ಸೂಚಿಸಿದರೆ, ಡಿವೈಎಫ್ಎ ಕಾರ್ಯಕರ್ತರು ಕಪ್ಪು ಬಾವುಟವನ್ನು ಬೀಸಿದರು. ವಿದೇಶಾಂಗ ವ್ಯವಹಾರಗಳ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರಿಗೆ ಎಆರ್ ಕ್ಯಾಂಪ್ ಪ್ರವೇಶಿಸಲು ಅನುಮತಿಯನ್ನೂ ನಿರಾಕರಿಸಲಾಗಿತ್ತು.
ಖಲಿಸ್ತಾನಕ್ಕೆ ಅರವಿಂದ್ ಕೇಜ್ರಿವಾಲ್ ಬೆಂಬಲ ಮತ್ತೊಮ್ಮೆ ಸಾಬೀತು!
ಪಿಸಿ ಜಾರ್ಜ್ ಅವರನ್ನು ಕರೆದೊಯ್ದ ವಾಹನದ ಮೇಲೆ ಡಿವೈಎಫ್ಐ ಕಾರ್ಯಕರ್ತರು ಹಸಿ ಮೊಟ್ಟೆಯನ್ನು ಎಸೆದ ಪ್ರಕರಣಗಳೂ ನಡೆದಿವೆ. ಕೇರಳದಲ್ಲಿರುವ ಮುಸ್ಲಿಂ ಹೊರತಾದ ವ್ಯಕ್ತಿಗಳು, ಮುಸ್ಲಿಮರ ರೆಸ್ಟೋರೆಂಟ್ ಗಳಲ್ಲಿ ಖಾದ್ಯ ಸೇವಿಸಬಾರದು, ಏನನ್ನು ಅರ್ಡರ್ ಮಾಡಬಾರದು ಎಂದು ಮಾಜಿ ಕಾಂಗ್ರೆಸ್ ನಾಯಕ ಜಾರ್ಜ್ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ