
ತಿರುವನಂತಪುರಂ(ಮೇ.16): ದೇಶದ ಆರ್ಥಿಕತೆ, ರೈತಾಪಿ ವರ್ಗದ ಜೀವನಾಡಿಯಾಗಿರುವ ಮುಂಗಾರು ಮಾರುತಗಳ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದ್ದು, ಕೇರಳದ ಹಲವು ಭಾಗಗಳಲ್ಲಿ ಭಾನುವಾರ ಮುಂಗಾರುಪೂರ್ವ ಮಳೆ ಭರ್ಜರಿಯಾಗಿ ಸುರಿದಿದೆ. ಜೊತೆಗೆ ಕೇರಳ, ಕರ್ನಾಟಕ ಸೇರಿದಂತೆ ದಕ್ಷಿಣದ ಹಲವು ರಾಜ್ಯಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ದೇಶಕ್ಕೆ ಮುಂಗಾರು ಪ್ರವೇಶದ ಮುನ್ಸೂಚನೆ ನೀಡುವ ಮಾರುತಗಳು ಭಾನುವಾರ ಅಂಡಮಾನ್-ನಿಕೋಬಾರ್ ದ್ವೀಪವನ್ನು ಪ್ರವೇಶಿಸಲಿವೆ. ಇದಕ್ಕೆ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಇದರ ಪರಿಣಾಮ ಕೇರಳದ ಎರ್ನಾಕುಲಂ, ಇಡುಕ್ಕಿ, ತ್ರಿಶ್ಯೂರು, ಮಲಪ್ಪುರಂ ಮತ್ತು ಕಲ್ಲಿಕೋಟೆಯಲ್ಲಿ ಭಾನುವಾರ ಮತ್ತು ಸೋಮವಾರ ಭಾರೀ ಮಳೆ ಸುರಿಯಲಿದ್ದು, ರೆಡ್ ಅಲರ್ಟ್ ಹೊರಡಿಸಲಾಗಿದೆ. ಇದಲ್ಲದೆ ಇತರೆ 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ಮುನ್ಸೂಚನೆಯಂತೆ ರೆಡ್ ಅಲರ್ಟ್ ನೀಡಲಾದ ಜಿಲ್ಲೆಗಳಲ್ಲಿ ಭಾನುವಾರ ಭಾರೀ ಪ್ರಮಾಣದಲ್ಲಿ ವರ್ಷಧಾರೆ ಸುರಿದಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವ ಕಾರಣ, ಹಲವು ನಗರಗಳಲ್ಲಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗಿದೆ. ಜೊತೆಗೆ ಮುಂದಿನ ಕೆಲ ದಿನಗಳ ಕಾಲ ಗುಡ್ಡಗಾಡು ಪ್ರದೇಶಗಳಿಗೆ ತೆರಳದಂತೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ನೀಡಿದೆ.
ಸಾಮಾನ್ಯವಾಗಿ ಕೇರಳಕ್ಕೆ ಜೂನ್ 1ರಂದು ಮುಂಗಾರು ಮಾರುತಗಳು ಪ್ರವೇಶ ಮಾಡುತ್ತವೆ. ಆದರೆ ಈ ಬಾರಿ 4 ದಿನ ಮೊದಲೇ ಅಂದರೆ ಮೇ 27ರಂದೇ ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಯಲ್ಲೋ ಅಲರ್ಟ್; ಕರಾವಳಿಯಲ್ಲಿ ಭಾರಿ ಮಳೆ ಮುನ್ಸೂಚನೆ
ಭಾರತೀಯ ಹವಾಮಾನ ಇಲಾಖೆ ಮೇ 16ರಿಂದ 19ರ ವರೆಗೆ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಭಾರಿ ಮಳೆಯ ಮುನ್ಸೂಚನೆ ನೀಡಿದೆ.
ಕರಾವಳಿಯಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯ ಸಾಧ್ಯತೆಯನ್ನು ಹೇಳಲಾಗಿದೆ. ದ.ಕ.ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಭಾನುವಾರ ಇಡೀ ದಿನ ಮೋಡ, ತುಸು ಬಿಸಿಲು ಕಂಡುಬಂದಿದೆ. ಅಲ್ಲಲ್ಲಿ ಸಣ್ಣ ಮಳೆ ಹನಿದಿದೆ. ಮಂಗಳೂರಿನಲ್ಲಿ ಕೂಡ ಮೋಡ, ಬಿಸಿಲು ಕಂಡುಬಂದಿದ್ದು, ಇಡೀ ದಿನ ತಂಪಾದ ವಾತಾವರಣ ಇತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ