
ಕೊಚ್ಚಿ (ಡಿ.22): ಕೆಲ ದಿನಗಳ ಹಿಂದೆ ಛತ್ತೀಸ್‌ಗಢ ಖಾರ್ಹಿ ಗ್ರಾಮದಿಂದ ರಾಮ್ ನಾರಾಯಣ್ ಬಘೇಲ್, ತನ್ನ ಪಕ್ಕದ ಮನೆಯ ವ್ಯಕ್ತಿಯ ಜೊತೆ ಕೆಲಸ ಹುಡುಕುವ ಸಲುವಾಗಿ ಕೇರಳಕ್ಕೆ ಬಂದಿದ್ದರು. ಆದರೆ, ಅವರಿಗೆ ಸೂಕ್ತವಾದ ಕೆಲಸ ಸಿಕ್ಕಿರಲಿಲ್ಲ. ಇದರಿಂದಾಗಿ ಬೇಸರಗೊಂಡಿದ್ದ ಆತ ಮನೆಗೆ ಫೋನ್ ಮಾಡಿ, ಶೀಘ್ರದಲ್ಲೇ ಊರಿಗೆ ವಾಪಾಸ್ ಆಗುವುದಾಗಿ ತಿಳಿಸಿದ್ದ. ಆದರೆ, ಆತನ ಬದಲು ಡಿಸೆಂಬರ್ 18 ರಂದು ಛತ್ತೀಸ್‌ಗಢದಲ್ಲಿದ್ದ ಅವರ ಕುಟುಂಬಕ್ಕೆ ಕೇರಳ ಪೊಲೀಸರಿಂದ ಕರೆ ಹೋಗಿತ್ತು. ಆದಷ್ಟು ಶೀಘ್ರವಾಗಿ ಪಾಲಕ್ಕಾಡ್‌ಗೆ ಬನ್ನಿ ಎಂದು ಸೂಚನೆ ನೀಡಲಾಗಿತ್ತು. ರಾಮ್ ನಾರಾಯಣ್ ಪೊಲೀಸ್ ಸ್ಟೇಷನ್‌ನಲ್ಲಿ ಇದ್ದಾರೆ ಅನ್ನೋ ಮಾಹಿತಿಯನ್ನು ಮಾತ್ರವೇ ನೀಡಲಾಗಿತ್ತು. ಆತ ಸತ್ತಿರುವ ಸುದ್ದಿಯನ್ನು ಕುಟುಂಬಕ್ಕೆ ತಿಳಿಸಿರಲಿಲ್ಲ.
ಡಿಸೆಂಬರ್ 17 ರಂದು, ಅಟ್ಟಪ್ಪಲ್ಲಂ ಪ್ರದೇಶದ ಸ್ಥಳೀಯ ನಿವಾಸಿಗಳ ಗುಂಪೊಂದು ರಾಮ್ ನಾರಾಯಣ್ ಅವರನ್ನು ಬಂಧಿಸಿ ಹಲ್ಲೆ ನಡೆಸಿತ್ತು, ಅವರ ಮೇಲೆ ಕಳ್ಳತನದ ಆರೋಪ ಹೊರಿಸಲಾಗಿತ್ತು. ಆದರೆ, ಆತ ಕುಡಿದಿದ್ದ ಹಾಗೂ ಕಳ್ಳತನ ಮಾಡಿದ್ದ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ದಿನದ ನಂತರ, ಶವಪರೀಕ್ಷೆಯ ವರದಿಯು ಆತ ಎದುರಿಸಿದ ಹಿಂಸಾಚಾರದ ವ್ಯಾಪ್ತಿಯನ್ನು ಬಹಿರಂಗಪಡಿಸಿತು. 31 ವರ್ಷದ ರಾಮ್ ನಾರಾಯಣ್ ಅವರನ್ನು ವಲಯಾರ್‌ನಲ್ಲಿ ನಡೆದ ಗುಂಪು ದಾಳಿಯಲ್ಲಿ ಕ್ರೂರವಾಗಿ ಥಳಿಸಲಾಗಿದೆ ಅನ್ನೋದನ್ನು ಮರಣೋತ್ತರ ಪರೀಕ್ಷೆಯು ದೃಢಪಡಿಸಿತು. ಅವರ ತಲೆಯ ಮೇಲೆ ತೀವ್ರವಾದ ಗಾಯಗಳು ಸೇರಿದಂತೆ ಅವರ ದೇಹದಾದ್ಯಂತ 80 ಕ್ಕೂ ಹೆಚ್ಚು ಗಾಯಗಳಾಗಿದ್ದವು. ವೈದ್ಯರು ಭಾರೀ ಪ್ರಮಾಣದ ಆಂತರಿಕ ರಕ್ತಸ್ರಾವವನ್ನು ಗಮನಿಸಿದರು ಮತ್ತು ಅವರು ಹಲ್ಲೆ ಮತ್ತು ತಲೆಗೆ ಆದ ಗಾಯಗಳಿಂದ ರಕ್ತದ ನಷ್ಟದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತೀರ್ಮಾನಿಸಿದರು.
ಗಾಯಗಳನ್ನು ವಿವರಿಸಿರುವ, ಮರಣೋತ್ತರ ಪರೀಕ್ಷೆ ನಡೆಸಿದ ಡಾ. ಹಿತೇಶ್ ಶಂಕರ್, ಅವರ ದೇಹದಲ್ಲಿ ಗಾಯಗಳು ಇಲ್ಲದೇ ಇರುವ ಯಾವುದೇ ಪಾರ್ಟ್‌ಗಳೂ ಇದ್ದಿರಲಿಲ್ಲ. ಹಲ್ಲೆ ಅತ್ಯಂತ ಕ್ರೂರವಾಗಿ ಮಾಡಲಾಗಿದೆ. ವಿವಿಧ ಕಡೆಯಿಂದ ಅವರಿಗೆ ಥಳಿಸಲಾಗಿದೆ. ಇದು ಸ್ಪಷ್ಟವಾಗಿ "ಗುಂಪು ದಾಳಿ" ಮತ್ತು ಸಂತ್ರಸ್ಥನನ್ನು "ಪ್ರಾಣಿಯಂತೆ ಹೊಡೆಯಲಾಗಿದೆ" ಎಂದು ಹೇಳಿದರು.
ಸಾವಿಗೆ ಕಾರಣ ಈಗ ದೃಢಪಟ್ಟಿದ್ದು, ಆರೋಪಿಗಳ ವಿರುದ್ಧ ಕೊಲೆ ಆರೋಪಗಳನ್ನು ಸೇರಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 18, ಗುರುವಾರ ಐದು ಜನರನ್ನು ಬಂಧಿಸಲಾಯಿತು.
ರಾಜ್ಯ ಮಾನವ ಹಕ್ಕುಗಳ ಆಯೋಗವು ಘಟನೆಯನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿ ತನಿಖೆಗೆ ಆದೇಶಿಸಿದೆ. ಮೂರು ವಾರಗಳಲ್ಲಿ ವಿವರವಾದ ವರದಿಯನ್ನು ಸಲ್ಲಿಸುವಂತೆ ಪಾಲಕ್ಕಾಡ್ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ.
ರಾಮ್ ನಾರಾಯಣ್ ಅವರ ಸೋದರಸಂಬಂಧಿ ಸಶಿಕಾಂತ್ ಬಾಗೆಲ್, ರಾಮ್ ನಾರಾಯಣ್ ಸಾವಿನ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿರಲಿಲ್ಲ ಎಂದು ತಿಳಿಸಿದರು. ಅವರು ನಾಲ್ಕು ದಿನಗಳ ಹಿಂದೆ ಕೆಲಸ ಹುಡುಕಿಕೊಂಡು ಕೇರಳಕ್ಕೆ ಬಂದಿದ್ದರು ಎಂದು ಹೇಳಿದ್ದಾರೆ. ಅವರಿಗೆ ಇಲ್ಲಿ ಯಾವುದೇ ಕೆಲಸ ಸಿಗಲಿಲ್ಲ ಮತ್ತು ಮನೆಗೆ ಮರಳಲು ಯೋಜಿಸುತ್ತಿದ್ದರು ಎಂದಿದ್ದಾರೆ. ರಾಮ್ ನಾರಾಯಣ್ ತಮ್ಮ ಗ್ರಾಮದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ಶಶಿಕಾಂತ್ ಹೇಳಿದರು.
ರಾಮ್‌ನಾರಾಯಣ್ ಠಾಣೆಯಲ್ಲಿದ್ದು, ತಕ್ಷಣವೇ ಬರಬೇಕೆಂದು ನಮಗೆ ಪೊಲೀಸರು ತಿಳಿಸಿದ್ದರು. ನಾವು ತಕ್ಷಣವೇ ಹೊರಟು ಬಂದಿದ್ದೆವು. ಇಲ್ಲಿಗೆ ಬರುವವರೆಗೂ ರಾಮ್ ನಾರಾಯಣ್ ಸತ್ತಿರುವುದು ನಮಗೆ ಗೊತ್ತಿರಲಿಲ್ಲ. ರಾಮ್ ನಾರಾಯಣರ್ ಅವರ ಪತ್ನಿ ಲಲಿತಾ ಹಾಗೂ ಇತರ ಸಂಬಂಧಿಕರು ಕೇರಳಕ್ಕೆ ಬಂದಿದ್ದಾರೆ. ಅವರಿಗೆ 8 ಹಾಗೂ 10 ವರ್ಷದ ಇಬ್ಬರು ಗಂಡುಮಕ್ಕಳಿದ್ದು, ಇಬ್ಬರೂ ಶಾಲೆಗೆ ಹೋಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಕರಣದಲ್ಲಿ ಜೊತೆಯಾಗಿರುವ ಸಾಮಾಜಿಕ ಕಾರ್ಯಕರ್ತ ಜಬ್ಬಾರ್, ಪೊಲೀಸರು ಸರಿಯಾದ ತನಿಖೆ ನಡೆಸದೇ ಶವವನ್ನು ಛತ್ತೀಸ್‌ಗಢಕ್ಕೆ ಕಳಿಸಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ. 'ಈ ಕುಟುಂಬಕ್ಕೆ ಸರಿಯಾದ ಪರಿಹಾರ ನೀಡುವ ಅಗತ್ಯವಿದೆ. ಈಗಾಗಲೇ ಕೆಲ ಬಂಧನಗಳನ್ನು ಮಾಡಲಾಗಿದೆ. ಆದರೆ, ಪ್ರಕರಣದ ವಿವರ ನೀಡಿಲ್ಲ. ನಾವು ಈ ಪ್ರಕರಣದಲ್ಲಿ ಮುತುವರ್ಜಿ ವಹಿಸುತ್ತಿರುವುದು ಏಕೆ ಎಂದು ಪೊಲೀಸರು ನಮ್ಮನ್ನು ಪ್ರಶ್ನೆ ಮಾಡಿದ್ದಾರೆ' ಎಂದು ತಿಳಿಸಿದರು.
ರಾಮ್ ನಾರಾಯಣ್ ಅವರನ್ನು ಕೋಮು ಮತ್ತು ಅನ್ಯದ್ವೇಷದ ನಿಂದನೆಗಳಿಗೆ ಗುರಿಯಾಗಿಸಲಾಗಿದೆ ಎಂದು ಅವರು ಹೇಳಿದರು. "ಬಾಂಗ್ಲಾದೇಶದ ನುಸುಳುಕೋರ ಎಂದು ಆರೋಪಿಸಿದ ನಂತರ ಅವರನ್ನು ಥಲಿಸಲಾಗಿದೆ ಎಂದು ಆರೋಪಿಸಿದ್ದಾರೆ.ಇದು ದ್ವೇಷ ಅಪರಾಧ ಮತ್ತು ಕ್ರೂರ ಹಿಂಸಾಚಾರದ ಅಂಶಗಳೊಂದಿಗೆ ಗುಂಪು ಹತ್ಯೆಯಾಗಿದೆ. ಈಗ ಪೊಲೀಸರು ಹೇಳುವಂತೆ ಕಳ್ಳತನ ಎನ್ನುವುದು ನಿಜವಾದ ಕಾರಣವಲ್ಲ' ಎಂದಿದ್ದಾರೆ.
ವಲಯಾರ್ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103(1) ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಐವರು ಆರೋಪಿಗಳನ್ನು ಮುರಳಿ, ಪ್ರಸಾದ್, ಅನು, ಬಿಪಿನ್ ಮತ್ತು ಆನಂದನ್ ಎಂದು ಗುರುತಿಸಲಾಗಿದ್ದು, ಎಲ್ಲರೂ ಅಟ್ಟಪ್ಪಳ್ಳಂ ಗ್ರಾಮದ ನಿವಾಸಿಗಳು. ರಾಮ್ ಯಾವುದೇ ಕ್ರಿಮಿನಲ್ ದಾಖಲೆಯನ್ನು ಹೊಂದಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ