ರಸ್ತೆ ಹೊಂಡದಲ್ಲಿ ಸ್ನಾನ ಮಾಡಿ ಬಟ್ಟೆ ಒಗೆದು ಪ್ರತಿಭಟನೆ: ವಿಡಿಯೋ ವೈರಲ್

Published : Aug 10, 2022, 10:38 AM ISTUpdated : Aug 10, 2022, 11:14 AM IST
ರಸ್ತೆ ಹೊಂಡದಲ್ಲಿ ಸ್ನಾನ ಮಾಡಿ ಬಟ್ಟೆ ಒಗೆದು ಪ್ರತಿಭಟನೆ: ವಿಡಿಯೋ ವೈರಲ್

ಸಾರಾಂಶ

ದೇವರನಾಡು ಕೇರಳದ ವ್ಯಕ್ತಿಯೊಬ್ಬ ವಿನೂತನವಾಗಿ ಪ್ರತಿಭಟನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ರಸ್ತೆಯ ಹೊಂಡದಲ್ಲಿ ತುಂಬಿದ ಕೆಸರು ನೀರಿನಲ್ಲಿ ಸ್ನಾನ ಮಾಡುವ ಮೂಲಕ ಅವರು ವಿಭಿನ್ನವಾಗಿ ಪ್ರತಿಭಟನೆ ನಡಸಿದ್ದು, ಪ್ರತಿಭಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕೇರಳ: ಇದುವರೆಗೆ ನೀವು ಈ ರೀತಿಯ ಕಳಪೆ ರಸ್ತೆಯ ವಿರುದ್ಧ ರಸ್ತೆಯ ಹೊಂಡದಲ್ಲಿ ಗಿಡಗಳನ್ನು ನೆಟ್ಟು ಪ್ರತಿಭಟನೆ ಮಾಡಿದ್ದನ್ನು, ಕಲಾಕೃತಿ ರಚಿಸಿ ಜನ ಜಾಗೃತಿ ಮೂಡಿಸಿದ್ದನ್ನು ನೀವು ನೋಡಿರಬಹುದು. ಆದರೆ ಈಗ ದೇವರನಾಡು ಕೇರಳದ ವ್ಯಕ್ತಿಯೊಬ್ಬ ವಿನೂತನವಾಗಿ ಪ್ರತಿಭಟನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ರಸ್ತೆಯ ಹೊಂಡದಲ್ಲಿ ತುಂಬಿದ ಕೆಸರು ನೀರಿನಲ್ಲಿ ಸ್ನಾನ ಮಾಡುವ ಮೂಲಕ ಅವರು ವಿಭಿನ್ನವಾಗಿ ಪ್ರತಿಭಟನೆ ನಡಸಿದ್ದು, ಪ್ರತಿಭಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕೇರಳದ ಮಲ್ಲಪ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಮ್ಜಾ ಪೊರಲಿ ಎಂಬಾತ ಭಾನುವಾರ ಬೆಳಗ್ಗೆ ಈ ರೀತಿ ವಿನೂತನವಾಗಿ ಪ್ರತಿಭಟನೆ ಮಾಡಿ ಸರ್ಕಾರದ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಹಮ್ಜಾ ಅವರು ಬಕೆಟ್‌, ಮಗ್‌(ಪಾಟೆ), ಸೋಪು, ಹಾಗೂ ಸ್ನಾನದ ಟವೆಲ್ ಅನ್ನು ತೆಗೆದುಕೊಂಡು ಬಂದು ಮಳೆ ನೀರಿನಿಂದ ತುಂಬಿದ ರಸ್ತೆಯ ಹೊಂಡದಲ್ಲಿರುವ ನೀರಿನಲ್ಲಿ ಸ್ನಾನ ಮಾಡುವುದನ್ನು ಕಾಣಬಹುದು. ಅಲ್ಲದೇ ಇದೇ ನೀರಿನಲ್ಲಿ ಅವರು ಬಟ್ಟೆಗಳನ್ನು ಒಗೆಯುವುದನ್ನು ನೋಡಬಹುದು. ಈ ವೇಳೆ ರಸ್ತೆಯಲ್ಲಿ ಸಾಗುವ ಜನ ಬಹಳ ಕುತೂಹಲದಿಂದ ಇವರನ್ನು ನೋಡಿಕೊಂಡು ಮುಂದೆ ಸಾಗುತ್ತಾರೆ.

ಇತ್ತ ಹಮ್ಜಾ ಅವರು ವಿನೂತನವಾಗಿ ಪ್ರತಿಭಟನೆ ಮಾಡುತ್ತಿರುವ ಸುದ್ದಿ ತಿಳಿದು ಸ್ಥಳೀಯ ಶಾಸಕ ಯುಎ ಲತೀಫ್‌ ಸ್ಥಳಕ್ಕೆ ಆಗಮಿಸಿದ್ದಾರೆ. ಶಾಸಕರ ಕಾರು ಸ್ಥಳಕ್ಕೆ ಬರುತ್ತಿದ್ದಂತೆ ಹಮ್ಜಾ ಅವರು ಈ ರಸ್ತೆ ಹೊಂಡದಲ್ಲಿ ಕುಳಿತು ಧ್ಯಾನ ಮಾಡುವ ಪೋಸ್‌ ನೀಡಿದ್ದಾರೆ. ಜೊತೆಗೆ ಹಲವು ಯೋಗ ಫೋಸ್‌ಗಳನ್ನು ಇವರು ಹೊಂಡದಲ್ಲಿ ನಿಂತು ಮಾಡಿದ್ದಾರೆ. ಇವರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಇದಕ್ಕೆ ಹಲವು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಕೇರಳದಲ್ಲಿ ರಸ್ತೆ ಹೊಂಡಕ್ಕೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದು ಒಂದು ದಿನದ ನಂತರ ಈ ವಿಡಿಯೋ ವೈರಲ್ ಆಗುತ್ತಿದೆ. 52 ವರ್ಷದ ಸ್ಕೂಟರ್‌  ಸವಾರರೊಬ್ಬರು ರಸ್ತೆಯ ಹೊಂಡದಿಂದಾಗಿ ಸ್ಕೂಟರ್ ಮಗುಚಿ ರಸ್ತೆಗೆ ಬಿದ್ದಿದ್ದರು. ಇದೇ ವೇಳೆ ಇವರ ಮೇಲೆ ಟ್ರಕೊಂದು ಹರಿದು ಸಾವನ್ನಪ್ಪಿದ್ದರು. ಎರ್ನಾಕುಲಂ ಜಿಲ್ಲೆಯ ನೆಡುಮಂಬಸ್ಸೆರಿಯಲ್ಲಿ ಈ ಘಟನೆ ನಡೆದಿತ್ತು. 

ತಮ್ಮ ಮಕ್ಕಳೊಂದಿಗೆ ರಸ್ತೆ ಗುಂಡಿ ಮುಚ್ಚಿದ ಶಿಕ್ಷಕ ದಂಪತಿ

ಸರ್ಕಾರ ಎಷ್ಟೇ ಅನುದಾನ ಬಿಡುಗಡೆ ಮಾಡಿದರೂ ನಮ್ಮ ಭಾರತದ ರಸ್ತೆಗಳು ಮಾತ್ರ ಸರಿಯಾಗುವುದೇ ಇಲ್ಲ. ಎಷ್ಟು ಸಲ ರಿಪೇರಿ ಮಾಡಿದರೂ ರಭಸವಾಗಿ ಸುರಿಯುವ ಒಂದೇ ಮಳೆಗೆ ನೀರಿನೊಂದಿಗೆ ರಸ್ತೆಯೂ ಕೊಚ್ಚಿ ಹೋಗುತ್ತಿದೆ. ಜೊತೆಗೆ ಅಲ್ಲಲ್ಲಿ ಹೊಂಡ ಗುಂಡಿಗಳಾಗುತ್ತವೆ. ಈ ಹೊಂಡ ಗುಂಡಿಗೆ ಸಿಲುಕಿ ಈಗಾಗಲೇ ಸಾಕಷ್ಟು ವಾಹನ ಸವಾರರು ಪ್ರಾಣ ಬಿಟ್ಟಿದ್ದಾರೆ. ಕೈ ಕಾಲು ಊನ ಮಾಡಿಕೊಂಡವರು ಸಾಕಷ್ಟು ಇದ್ದಾರೆ. ಲೋಕೋಪಯೋಗಿ ಇಲಾಖೆಯ ಭ್ರಷ್ಟಾಚಾರ, ಟೆಂಡರ್‌ ಪಡೆದವರಿಂದ ಕಳಪೆ ಕಾಮಗಾರಿಯೂ ಇದಕ್ಕೆ ಕಾರಣ. ಇದರ ವಿರುದ್ಧ ಎಷ್ಟೇ ಪ್ರತಿಭಟನೆ ನಡೆದರೂ ಪರಿಸ್ಥಿತಿ ಮಾತ್ರ ಬದಲಾಗುವುದೇ ಇಲ್ಲ. ಪ್ರತಿಭಟನಾಕಾರರು ಮನೆಗೆ ತೆರಳುತ್ತಿದ್ದಂತೆ ಎಲ್ಲವೂ ಶಾಂತವಾಗುತ್ತದೆ.

ಗುದ್ದಲಿ, ಹಾರೆ ಹಿಡಿದು ರಸ್ತೆ ಹೊಂಡ ಮುಚ್ಚಿದ್ದ ಪೊಲೀಸ್ ಸಿಬ್ಬಂದಿ..!

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೇರಳ ಹೈಕೋರ್ಟ್ ಈ ಬಗ್ಗೆ ಸ್ವಯಂ ಪ್ರಕರಣ ದಾಖಲಿಸಿಕೊಂಡು ಒಂದು ವಾರದೊಳಗೆ ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಆದೇಶ ನೀಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್