ಲಕ್ಷಾಂತರ ಜನರನ್ನು ಬಲಿ ಪಡೆಯುತ್ತಿರುವ ಕ್ಯಾನ್ಸರ್‌ಗೆ ಕೇರಳ ಮೂಲದ ಸಂಸ್ಥೆಯೊಂದು ಅರಿಶಿಣದಿಂದ ಔಷಧ ಪತ್ತೆ ಹಚ್ಚಿದೆ. ಈ ಸಂಸ್ಥೆಗೆ ಅಮೆರಿಕದ ಪೇಟೆಂಟ್ ಕೂಡ ಲಭಿಸಿದೆ.
ತಿರುವನಂತಪುರ [ಜ.15]: ಪ್ರತಿ ವರ್ಷ ವಿಶ್ವಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆಯುತ್ತಿರುವ ಕ್ಯಾನ್ಸರ್‌ಗೆ ಕೇರಳ ಮೂಲದ ಸಂಸ್ಥೆಯೊಂದು ಅರಿಶಿಣದಿಂದ ಔಷಧ ಪತ್ತೆ ಹಚ್ಚಿದೆ. ಈ ಸಂಸ್ಥೆಗೆ ಅಮೆರಿಕದ ಪೇಟೆಂಟ್ ಕೂಡ ಲಭಿಸಿದೆ. ಈ ಚಿಕಿತ್ಸೆ ಮಾನವರಲ್ಲಿ ಏನಾದರೂ ಸಫಲವಾದರೆ, ಇನ್ನು ಮುಂದೆ ಯಾತನಾಮಯ ಕೀಮೋಥೆರಪಿಯ ಅಗತ್ಯವೇ ಕ್ಯಾನ್ಸರ್‌ಪೀಡಿತರಿಗೆ ಇರುವುದಿಲ್ಲ.
ಕೇರಳದ ಶ್ರೀ ಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆ ಅರಿಶಿಣದಿಂದ ಕಣಗಳನ್ನು ಬೇರ್ಪಡಿಸಿ, ‘ಸಕ್ರ್ಯುಮಿನ್ ಫೈಬ್ರಿನ್ ವೇಫರ್’ ಅನ್ನು ಹೆಕ್ಕಿದೆ. ಇದನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಲಾಗಿದ್ದು, ಪರಿಣಾಮಕಾರಿ ಹಾಗೂ ಸುರಕ್ಷಿತ ಎನಿಸಿದೆ. ಕ್ಯಾನ್ಸರ್‌ಪೀಡಿತ ಮಾನವರ ಮೇಲೆ ಇನ್ನಷ್ಟೇ ಪ್ರಯೋಗ ನಡೆಯಬೇಕಾಗಿದೆ.
ಚಳಿಗಾಲದಲ್ಲಿ ತ್ವಚೆ ಸೌಂದರ್ಯ ಕಾಪಾಡಿಕೊಳ್ಳೋದು ಹೇಗೆ?...
ಸಾಮಾನ್ಯವಾಗಿ ಕ್ಯಾನ್ಸರ್ ಚಿಕಿತ್ಸೆ ವೇಳೆ ಕ್ಯಾನ್ಸರ್ ಕೋಶಗಳನ್ನು ಶಸ್ತ್ರಚಿಕಿತ್ಸೆ ನಡೆಸಿ ತೆಗೆಯಲಾಗುತ್ತದೆ. ಆನಂತರ ಅಳಿದುಳಿದ ಕ್ಯಾನ್ಸರ್‌ಕೋಶಗಳನ್ನು ಕೊಲ್ಲಲು ಬಾಯಿ ಅಥವಾ ರಕ್ತನಾಳಗಳ ಮೂಲಕ ಕೀಮೋಥೆರಪಿ ಔಷಧ ನೀಡಲಾಗುತ್ತದೆ. ಆದರೆ ಈ ಚಿಕಿತ್ಸೆಯಿಂದ ಕ್ಯಾನ್ಸರ್‌ಕೋಶಗಳ ಪಕ್ಕದಲ್ಲಿರುವ ಆರೋಗ್ಯವಂತ ಜೀವಕೋಶಗಳು ಕೂಡ ಕೊಲ್ಲಲ್ಪಡುತ್ತವೆ. ಇದರಿಂದ ರೋಗಿಯ ಮೇಲೆ ಅನೇಕ ಅಡ್ಡ ಪರಿಣಾಮಗಳು ಉಂಟಾಗುತ್ತವೆ.
ಆದರೆ ಕೇರಳ ಸಂಸ್ಥೆ ಕಂಡುಕೊಂಡಿರುವ ವಿಧಾನದಡಿ, ಕ್ಯಾನ್ಸರ್‌ಕೋಶಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾದ ಜಾಗದಲ್ಲಿ ಸಕ್ರ್ಯುಮಿನ್ ವೇಫರ್‌ಗಳನ್ನು ಹಚ್ಚಬೇಕಾಗುತ್ತದೆ. ಅದು ಅಳಿದುಳಿದ ಕ್ಯಾನ್ಸರ್‌ಕೋಶಗಳನ್ನು ಕೊಂದು, ಕ್ಯಾನ್ಸರ್ ಮತ್ತಷ್ಟುವ್ಯಾಪಿಸದಂತೆ ತಡೆಯುತ್ತದೆ. ಆರೋಗ್ಯವಂತ ಜೀವಕೋಶಗಳಿಗೆ ಸಮಸ್ಯೆ ಮಾಡುವುದಿಲ್ಲ. ಜತೆಗೆ ಸರ್ಜರಿಯಾದ ಜಾಗದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಉತ್ತೇಜನ ನೀಡುತ್ತದೆ.
ಕ್ಯಾನ್ಸರ್ ಪೀಡಿತರಿಗೆ ಸಿಹಿ ಸುದ್ದಿ: ಈ 9 ಔಷಧಿಗಳ ದರ ಶೇ. 87ರಷ್ಟು ಇಳಿಕೆ!.
ಅರಿಶಿಣದಿಂದ ಸಕ್ರ್ಯುಮಿನ್ ಎಂಬ ಕಣಗಳನ್ನು ಬೇರ್ಪಡಿಸಿ ಅದನ್ನು ಸುಲಭವಾಗಿ ಬಳಸಬಹುದಾದ ವೇಫರ್ ಆಗಿ ಪರಿವರ್ತಿಸಲಾಗಿದೆ. ದೆಹಲಿಯ ಭಾರತೀಯ ವೈದ್ಯ ಸಂಶೋಧನಾ ಮಂಡಳಿ (ಐಸಿಎಂಆರ್) ಜತೆಗೂಡಿ ಇದನ್ನು ಕೇರಳ ಸಂಸ್ಥೆ ಕಂಡುಹಿಡಿದಿದೆ. ಆದ ಕಾರಣ ಜಂಟಿಯಾಗಿ ಅಮೆರಿಕ ಪೇಟೆಂಟ್ ನೀಡಿದೆ.