Vaccine Certificate: ಮೋದಿ ಫೋಟೋ ತೆಗೆಯುವಂತೆ ಸಲ್ಲಿಸಿದ್ದ ಅರ್ಜಿ ವಜಾ, 1 ಲಕ್ಷ ರೂ. ದಂಡ!

By Suvarna NewsFirst Published Dec 21, 2021, 12:27 PM IST
Highlights

* ಕೊರೋನಾ ಲಸಿಕೆ ಪ್ರಮಾಣಪತ್ರದಲ್ಲಿ ಪಿಎಂ ಮೋದಿ ಪೋಟೋ

* ಸರ್ಟಿಫಿಕೇಟ್‌ನಲ್ಲಿರೊ ಫೋಟೋ ತೆಗೆಯುವಂತೆ ಅರ್ಜಿ ಸಲ್ಲಿಕೆ

* ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್‌

ತಿರುವನಂತಪುರಂ(ಡಿ.21): ಕೋವಿಡ್-19 ಲಸಿಕೆ ಪ್ರಮಾಣ ಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಕೇರಳ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದ್ದು, ಇದನ್ನು ‘ಕ್ಷುಲ್ಲಕ’ ಎಂದು ಕರೆದಿದೆ. ಇದು ‘ರಾಜಕೀಯ ಪ್ರೇರಿತ’ ಮತ್ತು ‘ಪ್ರಚಾರಕ್ಕಾಗಿ ಸಲ್ಲಿಸಿದ ಅರ್ಜಿ’ ಎಂದು ಬಣ್ಣಿಸಿ ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಅವರು ಆರು ವಾರಗಳಲ್ಲಿ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಎಲ್‌ಎಸ್‌ಎ) ದಂಡವನ್ನು ಠೇವಣಿ ಮಾಡುವಂತೆ ಅರ್ಜಿದಾರ ಪೀಟರ್ ಮಾಯಲಿಪರಂಪಿಲ್ ಅವರಿಗೆ ಸೂಚಿಸಿದ್ದಾರೆ. 

ನಿಗದಿತ ಅವಧಿಯೊಳಗೆ ದಂಡವನ್ನು ಪಾವತಿಸದಿದ್ದಲ್ಲಿ, KLSA ಅವರ ವಿರುದ್ಧ ಕಂದಾಯ ವಸೂಲಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಮೂಲಕ ಅರ್ಜಿದಾರರ ಆಸ್ತಿಯಿಂದ ಮೊತ್ತವನ್ನು ವಸೂಲಿ ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡುವ ಇಂತಹ ಕ್ಷುಲ್ಲಕ ವಾದಗಳನ್ನು ನ್ಯಾಯಾಲಯ ಪರಿಗಣಿಸುವುದಿಲ್ಲ ಎಂದು ಜನರಿಗೆ ಮತ್ತು ಸಮಾಜಕ್ಕೆ ತಿಳಿಸಲು ದಂಡ ವಿಧಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಧಾನಿಯವರ ಛಾಯಾಚಿತ್ರ ಮತ್ತು ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ಅವರ 'ಸ್ಥೈರ್ಯವನ್ನು ಹೆಚ್ಚಿಸುವ ಸಂದೇಶ'ದ ಮೇಲೆ ಅರ್ಜಿದಾರರು ಎತ್ತಿರುವ ಆಕ್ಷೇಪಣೆಯನ್ನು "ದೇಶದ ಯಾವುದೇ ನಾಗರಿಕರಿಂದ ನಿರೀಕ್ಷಿಸಲಾಗಿಲ್ಲ" ಎಂದು ನ್ಯಾಯಾಲಯ ಹೇಳಿದೆ. 

ಕಳೆದ ವಿಚಾರಣೆಯ ಸಂದರ್ಭದಲ್ಲಿ, ಜವಾಹರಲಾಲ್ ನೆಹರು ಇನ್‌ಸ್ಟಿಟ್ಯೂಟ್ ಆಫ್ ಲೀಡರ್‌ಶಿಪ್‌ನಲ್ಲಿ ಕೆಲಸ ಮಾಡುವ ಅರ್ಜಿದಾರರನ್ನು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಅವರು ಕೋವಿಡ್-19 ಲಸಿಕೆ ಪ್ರಮಾಣಪತ್ರಗಳಲ್ಲಿ ಪಿಎಂ ಮೋದಿ ಅವರ ಚಿತ್ರವನ್ನು ಮಾಜಿ ಪ್ರಧಾನಿ ನೆಹರೂ ಅವರ ಹೆಸರನ್ನು ಇಡುವುದಕ್ಕಿಂತ ಹೇಗೆ ಭಿನ್ನವಾಗಿದೆ ಎಂದು ಕೇಳಿದ್ದರು. 

click me!