ಈ ರಾಜ್ಯದಲ್ಲಿ ಟ್ರಾಫಿಕ್‌ ನಿರ್ವಹಣೆ ಇನ್ನು ಖಾಸಗಿಗೆ!

By Kannadaprabha NewsFirst Published Feb 20, 2020, 7:32 AM IST
Highlights

ಕೇರಳದಲ್ಲಿ ಟ್ರಾಫಿಕ್‌ ನಿರ್ವಹಣೆ ಖಾಸಗಿಗೆ| ನಿಯಮ ಪಾಲನೆ, ದಂಡ ವಿಧಿಸುವ ಅಧಿಕಾರ| ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಜಾರಿ

ತಿರುವನಂತಪುರಂ[ಫೆ.20]: ಸಂಚಾರಿ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಳ್ಳುವುದು ಮತ್ತು ಅದನ್ನು ಉಲ್ಲಂಘಿಸಿದವರ ವಿರುದ್ಧ ದಂಡ ವಿಧಿಸುವ ಅಧಿಕಾರ ದೇಶಾದ್ಯಂತ ಇರುವುದು ಸಂಚಾರಿ ಪೊಲೀಸರ ಬಳಿಯಲ್ಲಿ. ಆದರೆ ಅಚ್ಚರಿಯೆಂಬಂತೆ ಕೇರಳ ಸರ್ಕಾರ, ಈ ಎರಡೂ ಹೊಣೆಯನ್ನು ಮೆಡಿಟ್ರಾನಿಕ್ಸ್‌ ಎಂಬ ಕಂಪನಿಗೆ ವಹಿಸಿದೆ.

ಸರ್ಕಾರ ಮಾಡಿಕೊಂಡಿರುವ ಒಪ್ಪಂದದ ಅನ್ವಯ ಮೆಡಿಟ್ರಾನಿಕ್ಸ್‌ ಕಂಪನಿ ಆಯಕಟ್ಟಿನ ಸ್ಥಳಗಳಲ್ಲಿ 480 ಸಿಸಿಟೀವಿಗಳನ್ನು ಅಳವಡಿಸಲಿದೆ. ಬಳಿಕ ಅವುಗಳ ಮೂಲಕ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮೇಲೆ ನಿಗಾ ವಹಿಸಲಿದೆ. ಜೊತೆಗೆ ಹೀಗೆ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಮತ್ತು ಅದನ್ನು ವಸೂಲಿ ಮಾಡುವ ಕೆಲಸವನ್ನೂ ಮಾಡಲಿದೆ. ಇದಕ್ಕೆ ಸಂಚಾರಿ ಪೊಲೀಸರು ನೆರವು ನೀಡಲಿದ್ದಾರೆ. ಖಾಸಗಿ ಕಂಪನಿಯೊಂದಕ್ಕೆ ಹೀಗೆ ಸಂಚಾರದ ಮೇಲೆ ನಿಗಾವಹಿಸುವ ಮತ್ತು ದಂಡ ವಿಧಿಸುವ ಅಧಿಕಾರವನ್ನು ನೀಡಿದ್ದು ದೇಶದಲ್ಲೇ ಮೊದಲ ಪ್ರಕರಣವಾಗಿದೆ.

ವಿವಾದ: ಆದರೆ ಸರ್ಕಾರದ ಈ ನಿರ್ಧಾರದಲ್ಲಿ ಗೋಲ್‌ಮಾಲ್‌ ನಡೆದಿರುವುದು ಇತ್ತೀಚೆಗೆ ವಿಧಾನಸಭೆಯಲ್ಲಿ ಮಂಡನೆಯಾದ ಸಿಎಜಿ ವರದಿ ಮೂಲಕ ಬಹಿರಂಗವಾಗಿದೆ. ಹೀಗೆ ಸಿಸಿಟೀವಿ ಅಳವಡಿಸಿ ಕಣ್ಗಾವಲು ಇಡುವ ಮತ್ತು ದಂಡ ವಿಧಿಸುವ ಕೆಲಸಕ್ಕೆ ಸರ್ಕಾರಿ ಸ್ವಾಮ್ಯದ ಎರಡು ಕಂಪನಿಗಳು ಟೆಂಡರ್‌ ಸಲ್ಲಿಕೆ ಮಾಡಿದ್ದವು. ಅವು ವಸೂಲಿ ಮಾಡಿದ ದಂಡದಲ್ಲಿ ಶೇ.60ರಷ್ಟನ್ನು ತಾನು ಇಟ್ಟುಕೊಂಡು ಶೇ.40ರಷ್ಟನ್ನು ಸರ್ಕಾರಕ್ಕೆ ನೀಡುವ ಆಫರ್‌ ನೀಡಿದ್ದವು. ಆದರೆ ರಾಜ್ಯ ಸರ್ಕಾರ, ಶೇ.90ರಷ್ಟುಹಣವನ್ನು ತಾನು ಇಟ್ಟುಕೊಂಡು ಶೇ.10ರಷ್ಟನ್ನು ಸರ್ಕಾರಕ್ಕೆ ನೀಡುವ ಆಫರ್‌ ನೀಡಿದ ಮೆಡಿಟ್ರಾನಿಕ್ಸ್‌ ಸಂಸ್ಥೆಗೆ ಗುತ್ತಿಗೆ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿರುವ ವಿಪಕ್ಷ ನಾಯಕ ರಮೇಶ್‌ ಚೆನ್ನಿತಲ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.

click me!