
ಕೊಚ್ಚಿ[ಮಾ.15]: ಚೀನಾದ ವುಹಾನ್ ನಿಂದ ಹಬ್ಬಿರುವ ಕೊರೋನಾ ವೈರಸ್ ಜಗತ್ತಿನಾದ್ಯಂತ ಹಬ್ಬಿದೆ. ಭಾರತಕ್ಕೂ ಕಾಲಿಟ್ಟಿರುವ ಈ ಡೆಡ್ಲಿ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಿರುವಾಗ ಸ್ಯಾನಿಟೈಸರ್ ಹಾಗೂ ಮಾಸ್ಕ್ ಗೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆಯಲ್ಲಿ ಕೊರತೆ ಕಾಣಲಾರಂಭಿಸಿದೆ. ಇತ್ತ ಔಷಧ ಮಳಿಗೆ ಸಿಬ್ಬಂದಿ ಕೂಡಾ ದುಪ್ಪಟ್ಟು ಬೆಲೆಗೆ ಮಾಸ್ಕ್ ಮಾರಾಟ ಮಾಡಲಾರಂಭಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನ ಸಾಮಾನ್ಯರಿಗೆ ಮಾಸ್ಕ್ ಪೂರೈಸಲು ಹೆಣಗಾಡುತ್ತಿರುವಾಗ ಒಂದು ರಾಜ್ಯ ಮಾತ್ರ ಈ ಸಮಸ್ಯೆ ಪರಿಹರಿಸಲು ವಿಭಿನ್ನವಾದ ಮಾರ್ಗವನ್ನು ಕಂಡುಕೊಂಡಿದೆ. ಹೀಗಾಗಿ ಇಲ್ಲಿ ಮಾಸ್ಕ್ ಕೊರತೆಯೇ ಕಂಡು ಬಂದಿಲ್ಲ.
ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 90ಕ್ಕೇರಿದೆ. ಈ ನಡುವೆ ಕೇರಳ ಸಿಎಂ ಪಿಣರಾಯಿ ವಿಜಯನ್ ಶನಿವಾರ ರಾತ್ರಿ ಟ್ವೀಟ್ ಒಂದನ್ನು ಮಾಡುತ್ತಾ ತಮ್ಮ ಸರ್ಕಾರ ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮದ ಕುರಿತು ಬರೆದಿದ್ದಾರೆ. ಮಾಸ್ಕ್ ಕೊರತೆಯನ್ನು ನೀಗಿಸಲು ತಾವೇನು ಮಾಡಿದ್ದೇವೆ ಎಂದು ಕೇರಳ ಸಿಎಂ ಇಲ್ಲಿ ಹೇಳಿಕೊಂಡಿದ್ದಾರೆ. ಶಿಕ್ಷೆಗೀಡಾಗಿ ಜೈಲಿನಲ್ಲಿರುವ ಕೈದಿಗಳೇ ಈಗ ಮಾಸ್ಕ್ ತಯಾರಿಸುತ್ತಿದ್ದಾರೆ. ಹೀಗಾಗಿ ಕೇರಳದಲ್ಲಿ ಮಾಸ್ಕ್ ಪೂರೈಕೆಯಲ್ಲಿ ಕೊರತೆ ಕಂಡು ಬಂದಿಲ್ಲ.
ಈ ಕುರಿತು ಟ್ವೀಟ್ ಮಾಡಿರುವ ಪಿಣರಾಯಿ ವಿಜಯನ್ 'ಮಾಸ್ಕ್ ಕೊರತೆ ಎದುರಾದಾಗ ಜೈಲಿನಲ್ಲಿರುವ ಕೈದಿಗಳಿಗೆ ಇದನ್ನು ತಯಾರಿಸಲು ಸೂಚನೆ ನೀಡಲಾಗಿತ್ತು. ಯುದ್ಧಕ್ಕೆ ತಯಾರಾಗುವಂತೆ ಈ ಕಾರ್ಯ ಆರಂಭವಾಯ್ತು. ಇಂದು ಮೊದಲ ಬ್ಯಾಚ್ ನಲ್ಲಿ ತಿರುವನಂತಪುರಂ ಜೈಲಿನ ಕೈದಿಗಳು ತಯಾರಿಸಿದ ಮಾಸ್ಕ್ ಗಳನ್ನು ಇಲ್ಲಿನ ಜೈಲು ಸಿಬ್ಬಂದಿ ಹಸ್ತಾಂತರಿಸಿದ್ದಾರೆ' ಎಂದು ಬರೆದಿದ್ದಾರೆ.
ಕೇರಳ ಸರ್ಕಾರ ಜೈಲಿನಲ್ಲಿ ಟೈಲರಿಂಗ್ ವಿಭಾಗವನ್ನು ಆರಂಭಿಸಿದ್ದು, ಇಲ್ಲಿ ಮಾಸ್ಕ್ ಗಳು ತಯಾರಾಗುತ್ತಿವೆ. ಇದರೊಂದಿಗೆ ಇಲ್ಲಿನ ಸರ್ಕಾರ ಸ್ಯಾನಿಟೈಸರ್ ಉತ್ಪಾದನೆಯನ್ನೂ ಅಧಿಕಗೊಳಿಸಿದೆ. ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತಿ ಅಗತ್ಯವಾಗಿದ್ದು, ಕೇರಳ ಸದ್ಯ ಈ ನಿಟ್ಟಿರುವ ಹೆಜ್ಜೆ ಶ್ಲಾಘನೀಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ