ಕೊರೋನಾ ದೇಶದ ‘ಸೂಚಿತ ವಿಪತ್ತು’!| ಸೋಂಕಿತರಿಗೆ ಆರ್ಥಿಕ, ವೈದ್ಯಕೀಯ ನೆರವಿಗಾಗಿ ಈ ಕ್ರಮ| | ವ್ಯಾಧಿಗೆ ಸಾವನ್ನಪ್ಪಿದ ಕುಟುಂಬಕ್ಕೆ 4 ಲಕ್ಷ ರು. ಪರಿಹಾರ| ಹೆಚ್ಚುವರಿ ಕೊರೋನಾ ಕೇಂದ್ರಗಳ ಪರೀಕ್ಷಾ ಕೇಂದ್ರಕ್ಕೂ ನಿಧಿ| ಪೊಲೀಸರು, ವೈದ್ಯರು, ಸಿಬ್ಬಂದಿ ಸುರಕ್ಷತೆಗಾಗಿ ಹಣ ಮೀಸಲು
ನವದೆಹಲಿ[ಮಾ.15]: ದೇಶಾದ್ಯಂತ 80ಕ್ಕೂ ಹೆಚ್ಚು ಮಂದಿಗೆ ಹರಡಿ, ಇಬ್ಬರನ್ನು ಬಲಿಪಡೆದ ಮಾರಕ ಕೊರೋನಾ ವೈರಸ್ ಅನ್ನು ‘ಸೂಚಿತ ವಿಪತ್ತು’ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ತನ್ಮೂಲಕ ಕೊರೋನಾ ಪೀಡಿತರು ಹಾಗೂ ಅವರ ಕುಟುಂಬಕ್ಕೆ ಆರ್ಥಿಕ ನೆರವು ಸೇರಿದಂತೆ ಇನ್ನಿತರ ನೆರವುಗಳನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೆ, ಕೊರೋನಾ ಪೀಡಿತರ ರಕ್ಷಣೆಗೆ ಅಗತ್ಯವಿರುವ ಹಣಕಾಸು ಸೇರಿದಂತೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಆಯಾ ರಾಜ್ಯಗಳ ವಿಪತ್ತು ನಿರ್ವಹಣಾ ತಂಡಗಳು ನಿರ್ವಹಿಸಲಿವೆ.
ಇದರನ್ವಯ ಕೊರೋನಾ ವ್ಯಾಧಿಯಿಂದ ಸಾವನ್ನಪ್ಪಿದ ಕುಟುಂಬಗಳಿಗೆ 4 ಲಕ್ಷ ರು. ಪರಿಹಾರ ನೀಡಲಾಗುತ್ತದೆ. ಅಲ್ಲದೆ, ಕೊರೋನಾಕ್ಕೆ ತುತ್ತಾಗಿ ಪ್ರತ್ಯೇಕ ಶಿಬಿರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ವೈದ್ಯಕೀಯ ನೆರವು, ಆಹಾರ ಪೂರೈಕೆ, ನೀರು, ಬಟ್ಟೆ-ಬರೆಗಳಿಗೆ ಅಗತ್ಯವಿರುವ ಹಣವನ್ನು ಆಯಾ ರಾಜ್ಯ ಸರ್ಕಾರಗಳು ಒದಗಿಸಲಿವೆ.
ಅಲ್ಲದೆ, ದೇಶಾದ್ಯಂತ ಅಗತ್ಯವಿರುವ ಹೆಚ್ಚುವರಿ ಕೊರೋನಾ ಪರೀಕ್ಷಾ ಕೇಂದ್ರಗಳ ಸ್ಥಾಪನೆ, ಪೊಲೀಸರು, ಆರೋಗ್ಯಾಧಿಕಾರಿಗಳು ಹಾಗೂ ಇತರ ಸಿಬ್ಬಂದಿ ವರ್ಗಕ್ಕೆ ಅಗತ್ಯವಿರುವ ಸುರಕ್ಷತಾ ಪರಿಕರಗಳು, ಥರ್ಮಲ್ ಸ್ಕ್ಯಾನರ್‌ಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಇತರೆ ಪರಿಕರಗಳ ಖರೀದಿಗೆ ಎಸ್‌ಡಿಆರ್‌ಎಫ್ ನಿಧಿಯನ್ನೇ ಸದ್ಬಳಕೆ ಮಾಡಿಕೊಳ್ಳಲಾಗುತ್ತದೆ. ಆದರೆ, ಇದಕ್ಕೆ ಕೇಂದ್ರ ವಿಪತ್ತು ನಿರ್ವಹಣಾ ನಿಧಿಯಿಂದ ಯಾವುದೇ ಹಣ ನೀಡಲಾಗುವುದಿಲ್ಲ. ಜೊತೆಗೆ, ಹೀಗೆ ಬಳಕೆಯಾಗುವ ನಿಧಿಯು ವಾರ್ಷಿಕ ಹಂಚಿಕೆಯ ಶೇ.10ರ ಮಿತಿ ಮೀರಬಾರದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.