ಹಿಂದೆ ತೆಲಂಗಾಣದ ಮಾಜಿ ಮುಖ್ಯಮಂತ್ರಿ, ಬಿಆರ್‌ಎಸ್ ನಾಯಕ ಕೆ. ಚಂದ್ರಶೇಖರ್ ರಾವ್ ಸಹಚರರು ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರು.
ಕರೀಂನಗರ (ಮಾ.26): ‘ಹಿಂದೆ ತೆಲಂಗಾಣದ ಮಾಜಿ ಮುಖ್ಯಮಂತ್ರಿ, ಬಿಆರ್‌ಎಸ್ ನಾಯಕ ಕೆ. ಚಂದ್ರಶೇಖರ್ ರಾವ್ ಸಹಚರರು ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರು. ಈ ವಂಚನೆಯಿಂದ ಅವರ ಕುಟುಂಬ ಸಾವಿರಾರು ಕೋಟಿ ರು.ಆದಾಯ ಗಳಿಸಿದೆ’ ಎಂದು ಕೇಂದ್ರ ಗೃಹ ರಾಜ್ಯ ಖಾತೆ ಸಚಿವ ಹಾಗೂ ತೆಲಂಗಾಣ ಬಿಜೆಪಿ ಮುಖಂಡ ಬಂಡಿ ಸಂಜಯ್ ಕುಮಾರ್ ಆರೋಪಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ‘ಹಿಂದೆ ರಾವ್ (ಕೆಸಿಆರ್) ಸಿಎಂ ಆಗಿದ್ದಾಗ ಅವರ ಸಹಚರರು ಬೀದರ್‌ನ ಮುದ್ರಣಾಲಯದಲ್ಲಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರು.
ಈ ನಕಲಿ ನೋಟಿನ ಮುದ್ರಣ ವ್ಯವಹಾರವನ್ನು ಬಿಆರ್‌ಎಸ್‌ನ ದೊಡ್ಡ ವ್ಯಕ್ತಿಯೊಬ್ಬರು ನಿಭಾಯಿಸುತ್ತಿದ್ದರು. ಪಾಸ್‌ಪೋರ್ಟ್ ಹಗರಣ, ನಕಲಿ ನೋಟು ಸಾಗಾಟದಿಂದ ಅವರ ಕುಟುಂಬ ಸಾವಿರಾರು ಕೋಟಿ ಗಳಿಸಿತು. ಆದರೆ ತೆಲಂಗಾಣವನ್ನು ಸಾಲದ ಸುಳಿಗೆ ಸಿಲುಕಿಸಿದರು. ತೆಲಂಗಾಣ ಪೊಲೀಸರು ಈ ದಂಧೆ ತಡೆಗೆ ಪ್ರಯತ್ನಿಸಿದಾಗ ಹಾಗೆ ಮಾಡದಂತೆ ಅವರ ಮೇಲೆ ಒತ್ತಡ ಹೇರುತ್ತಿದ್ದರು. ಕೆಸಿಆರ್ ಚುನಾವಣೆ ಗಳಲ್ಲಿ ವಿತರಿಸಿದ ಎಲ್ಲ ಹಣವೂ ನಕಲಿಯಾಗಿತ್ತು’ ಎಂದು ಹರಿಹಾಯ್ದರು.
ಬಂಡಿ ವಿರುದ್ಧ ದೂರು: ಬಂಡಿ ಸಂಜಯ್ ಕುಮಾರ್ ಅವರ ನಕಲಿ ನೋಟಿನ ಹೇಳಿಕೆ ವಿರುದ್ಧ ಕೆಸಿಆರ್ ಅವರ ಬಿಆರ್‌ಎಸ್ ಪಕ್ಷ ದೂರು ನೀಡಿದೆ. ಕೆಸಿಆರ್ ಪುತ್ರ ಬಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರು ಬಂಡಿ ಸಂಜಯ್ ಕುಮಾರ್ ಅವರ ಕ್ಷಮೆಗೆ ಆಗ್ರಹಿಸಿದ್ದಾರೆ.
ಹೈಕಮಾಂಡ್ ಒತ್ತಡಕ್ಕೆ ಮಣಿದರಾ ರಾಜಣ್ಣ?: ಕುತೂಹಲ ಹುಟ್ಟಿಸಿದ ಸಚಿವರ ನಡೆ
ಸಚಿವರ ಆರೋಪವೇನು?
-ತೆಲಂಗಾಣ ಮಾಜಿ ಸಿಎಂ ಚಂದ್ರಶೇಖರ್ ರಾವ್ ಆಪ್ತರು ಬೀದರ್ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಖೋಟಾ ನೋಟು ಮುದ್ರಿಸುತ್ತಿದ್ದರು
-ಕೆಸಿಆರ್ ಅವರ ಬಿಆರ್‌ಎಸ್ ಪಕ್ಷದ ಹಿರಿಯ ನಾಯಕರೊಬ್ಬರು ಈ ಖೋಟಾ ನೋಟು ಮುದ್ರಣದ ಮಾಡುವ ಹೊಣೆ ಹೊತ್ತುಕೊಂಡಿದ್ದರು
-ನೋಟು ಮುದ್ರಣದ ಮೂಲಕ ಕೆಸಿಆರ್ ಕುಟುಂಬ ಸಾವಿರಾರು ಕೋಟಿ ಲಾಭ ಮಾಡಿಕೊಂಡಿದೆ. ಚುನಾವಣೆಗೂ ಇದೇ ಹಣ ಬಳಸಿದೆ
-ಪೊಲೀಸರು ಪಾಸ್ಪೋರ್ಟ್, ಖೋಟಾ ನೋಟು ಮುದ್ರಣ ತಡೆಯಲು ಯತ್ನಿಸಿದಾಗ ಕೆಸಿಆರ್ ಪೊಲೀಸರ ಮೇಲೆ ಒತ್ತಡ ಹಾಕಿದ್ದರು