ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆ.ಚಂದ್ರಶೇಖರ್ ಸ್ಥಾಪನೆ ಮಾಡಿರುವ ಭಾರತ್ ರಾಷ್ಟ್ರ ಸಮಿತಿಯ ಪೋಸ್ಟರ್ ಈಗ ವಿವಾದಕ್ಕೆ ಕಾರಣವಾಗಿದೆ. ಕೆಸಿಆರ್ ಚಿತ್ರವಿರುವ ಪೋಸ್ಟರ್‌ನಲ್ಲಿ ಹಾಕಲಾಗಿರುವ ಭಾರತದ ನಕ್ಷೆಯಲ್ಲಿ ಸಂಪೂರ್ಣ ಕಾಶ್ಮೀರದ ಚಿತ್ರವಿಲ್ಲ. ಭಾರತದ ಭಾಗವಾಗಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ನಕ್ಷೆಯಿಂದ ತೆಗೆದುಹಾಕಲಾಗಿದೆ.
ಹೈದರಾಬಾದ್ (ಅ. 10): ವಿವಾದದ ಮೂಲಕವೇ ಕೆ.ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷ ಸುದ್ದಿ ಮಾಡಿದೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ಅವರ ಹೊಸ ರಾಷ್ಟ್ರೀಯ ಪಕ್ಷವಾದ 'ಭಾರತ್ ರಾಷ್ಟ್ರ ಸಮಿತಿ' (ಬಿಆರ್‌ಎಸ್) ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಿದೆ ಎಂದು ತೆಲಂಗಾಣದ ನಿಜಾಮಾಬಾದ್‌ನ ಬಿಜೆಪಿ ಸಂಸದ ಅರವಿಂದ್ ಧರ್ಮಪುರಿ ಹೇಳಿದ್ದಾರೆ. ಧರ್ಮಪುರಿ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದು, ಇದು ನಮ್ಮ ಭಾರತದ ಸಂವಿಧಾನ ಮತ್ತು ಅಖಂಡತೆಗೆ ಮಾಡಿದ ಅವಮಾನ ಎಂದಿದ್ದಾರೆ. ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದ ಶಶಿ ತರೂರ್ ಕೂಡ ಇಂಥದ್ದೇ ಪ್ರಮಾದವನ್ನು ಮಾಡಿಕೊಂಡು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದುರ. ಅವರು ಭಾರತದ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಕೆಲವು ಭಾಗಗಳನ್ನು ತೋರಿಸಲಿಲ್ಲ. ಆದರೆ, ನಂತರ ಈ ತಪ್ಪನ್ನು ಸರಿಪಡಿಸಿದ ತರೂರ್, ಯಾರೂ ಉದ್ದೇಶಪೂರ್ವಕವಾಗಿ ಇಂತಹ ತಪ್ಪು ಮಾಡುವುದಿಲ್ಲ ಎಂದು ಕ್ಷಮೆಯಾಚಿಸಿದ್ದರು.
ಪಾಕಿಸ್ತಾನ (Pakistan) ಬಳಸುವ ನಕ್ಷೆಯನ್ನು ಕೆಸಿಆರ್ ಬಳಸಿದ್ದಾರೆ: ಭಾರತೀಯ ಸಂವಿಧಾನದ 1 ನೇ ವಿಧಿಯ ಪ್ರಕಾರ, ನಮ್ಮ ದೇಶದ ಪ್ರದೇಶವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಇಡೀ ಜಮ್ಮು ಮತ್ತು ಕಾಶ್ಮೀರವು ಭಾರತದ ಒಂದು ಭಾಗವಾಗಿದೆ ಎಂದು ಅವರು ಬರೆದಿದ್ದಾರೆ. ಆದರೆ ಈ ನಕ್ಷೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತದ ಭೂಪಟದಿಂದ (POK) ತೆಗೆದುಹಾಕುವ ಮೂಲಕ ಪಾಕಿಸ್ತಾನವನ್ನು ಕೆಸಿಆರ್ ಬೆಂಬಲಿಸಿದ್ದಾರೆ. ಈ ನಕ್ಷೆಯನ್ನು (India Map) ಪ್ರಚಾರ ಮಾಡಿದ್ದು ಪಾಕಿಸ್ತಾನ. ಈ ನಕ್ಷೆಯ ಹಿಂದಿರುವುದು ಪಾಕಿಸ್ತಾನ ಎಂದಿದ್ದಾರೆ. ಹಿಂದಿನ ಹೈದರಾಬಾದ್ (Hyderabad) ರಾಜ್ಯವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸಲು ಬಯಸಿದ್ದ ನಿಜಾಮರ ಪರಂಪರೆಯನ್ನು ಕೆಸಿಆರ್ ಅನುಸರಿಸುತ್ತಿದ್ದಾರಾ? ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುವ ಹಿಂದಿನ ಉದ್ದೇಶ ಇದೇನಾ? ಎಂದು ಧರ್ಮಪುರಿ ಪ್ರಶ್ನೆ ಮಾಡಿದ್ದಾರೆ.
ನಾಳೆ ಕೆಸಿಆರ್ ಹೊಸ ರಾಷ್ಟ್ರೀಯ ಪಕ್ಷ ಅನಾವರಣ, ಸ್ಥಳೀಯರಿಗೆ ಮದ್ಯದ ಬಾಟಲಿ, ಕೋಳಿ ನೀಡಿದ ಟಿಆರ್‌ಎಸ್ ನಾಯಕ!
ಗುಜರಾತ್ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಕೆಸಿಆರ್ ಪಕ್ಷ: ಕೆಸಿಆರ್ (KCR) ಅವರ ಹೊಸ ಪಕ್ಷದ ಅಡಿಯಲ್ಲಿ ಸ್ಪರ್ಧಿಸಲಿರುವ ಮೊದಲ ಚುನಾವಣೆ ಬಹುಶಃ ಮುನುಗೋಡು ಉಪಚುನಾವಣೆಯಾಗಿದೆ. ನವೆಂಬರ್ 4 ರಂದು ಇಲ್ಲಿ ಚುನಾವಣೆ ನಡೆಯಲಿದೆ. ಪಕ್ಷವು ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಆದರೆ, ಕೆಸಿಆರ್ ಅವರ ಹೊಸ ಪಕ್ಷ ಆರಂಭದಿಂದಲೂ ವಿವಾದಗಳಲ್ಲಿ ಸಿಲುಕಿಕೊಂಡಿದೆ. ಕೆಸಿಆರ್ ಅವರ ಈ ನಡೆಗೆ ತೆಲಂಗಾಣ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಮಧು ಗೌರ್ ಅವರು ರಾಷ್ಟ್ರೀಯ ಪಕ್ಷ ಸ್ಥಾಪಿಸುವ ಕೆಸಿಆರ್ ನಿರ್ಧಾರ ಅಸಂಬದ್ಧ ಎಂದು ಹೇಳಿಕೆ ನೀಡಿದ್ದರು. ಕೆಸಿಆರ್ ತೆಲಂಗಾಣ ಜನರನ್ನು ಮೂರ್ಖರನ್ನಾಗಿಸಿದ್ದಾರೆ
ಎಂದು ಗೌರ್ ಹೇಳಿದ್ದರು. ಈಗ ಅವರು ದೇಶದ ಜನರನ್ನು ಮರುಳು ಮಾಡಲು ಬಯಸುತ್ತಿದ್ದಾರೆ. ಇದು ಕೇವಲ ತಮ್ಮ ವೈಫಲ್ಯಗಳನ್ನು ಮರೆಮಾಚಲು ಮತ್ತು ಕುಟುಂಬ ಸದಸ್ಯರನ್ನು ದೆಹಲಿ ಮದ್ಯದ ಹಗರಣದಿಂದ ರಕ್ಷಿಸುವ ತಂತ್ರವಾಗಿದೆ ಎಂದಿದ್ದಾರೆ.
ವಿಭಜನೆಯಾಗಲಿದೆಯೇ ಕೆಸಿಆರ್ ಅವರ ತೆಲಂಗಾಣ ರಾಷ್ಟ್ರ ಸಮಿತಿ?
ಬಿಆರ್‌ಎಸ್ ಕುರಿತಾಗಿ ಟಿಆರ್‌ಎಸ್‌ನಲ್ಲೇ ಆಕ್ಷೇಪ: ಇನ್ನು ಭಾರತ್ ರಾಷ್ಟ್ರ ಸಮಿತಿ ಪಕ್ಷವನ್ನು ಆರಂಭಿಸಿದ್ದು, ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಸದಸ್ಯರಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ. ಟಿಆರ್‌ಎಸ್ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿ ಪರಿವರ್ತನೆ ಮಾಡಿ ಬಿಆರ್‌ಎಸ್ ಎಂದು ವಿಜಯದಶಮಿಯ ದಿನದಂದು ಘೋಷಣೆ ಮಾಡಲಾಗಿತ್ತು. ಆದರೆ, ಸ್ವತಃ ಕೆಸಿಆರ್ ಅವರ ಪುತ್ರಿ ಈ ಕಾರ್ಯಕ್ರಮದಲ್ಲಿ ಹಾಜರಿದ್ದಿರಲಿಲ್ಲ. ಇದೇ ವೇಳೆ ಅವರ ಪಕ್ಷ ವಿಭಜನೆಯಾಗಬಹುದು ಎನ್ನುವ ಸುದ್ದಿಯೂ ಬಿತ್ತರವಾಗಿತ್ತು.