
ಶ್ರೀನಗರ: ಏಪ್ರಿಲ್ 22ರಂದು 26 ಪ್ರವಾಸಿಗರ ಬಲಿ ಪಡೆದ ಭೀಕರ ಭಯೋತ್ಪಾದಕ ದಾಳಿಯ ನಂತರವೂ ಕಾಶ್ಮೀರದತ್ತ ಪ್ರವಾಸಿಗರ ದಂಡು ಸಾಲು ಸಾಲಾಗಿ ಬರುತ್ತಿದ್ದಾರೆ. ಇಲ್ಲಿನ ಸಹಜ ಪರಿಸರ ಸೌಂದರ್ಯದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಮತ್ತೆ ವೈರಲ್ ಆಗುತ್ತಿದ್ದು, ಇದು ಪ್ರವಾಸಿಗರನ್ನು ಮತ್ತೆ ಕಾಶ್ಮೀರದತ್ತ ಸೆಳೆಯುವಂತೆ ಮಾಡುತ್ತಿದೆ.
ದಾಳಿಯ ನಂತರ ಪ್ರಕ್ಷುಬ್ಧವಾಗಿದ್ದ ಇಲ್ಲಿನ ಪ್ರದೇಶಗಳಲ್ಲಿ ಪ್ರವಾಸಿಗರು ಕಡಿಮೆ ಇದ್ದರೂ ಕೂಡ ತೀರಾ ಯಾರೂ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿಲ್ಲ. ಇಲ್ಲಿ ಬರುತ್ತಿರುವ ಪ್ರವಾಸಿಗರಿಗೆ ಸ್ಥಳೀಯ ವ್ಯಾಪಾರಸ್ಥರು ರಿಯಾಯಿತಿ ದರದಲ್ಲಿ ವಸ್ತುಗಳನ್ನು ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ ಬೈಸರನ್ ಹುಲ್ಲುಗಾವಲು ಪ್ರದೇಶಕ್ಕೆ ಭೇಟಿ ನೀಡಲು ಮಾತ್ರ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದ್ದು, ಕಾಶ್ಮೀರದ ಇನ್ನುಳಿದ ಪ್ರದೇಶಗಳತ್ತ ಪ್ರವಾಸಿಗರು ಆಗಮಿಸುತ್ತಲೇ ಇದ್ದಾರೆ ಎಂದು ವರದಿಯಾಗಿದೆ. ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಕಣಿವೆಯು ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದರೂ, ಈ ಪ್ರದೇಶವು ಮತ್ತೊಮ್ಮೆ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಸ್ವಾಗತಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಪ್ರವಾಸಿಗರು ತುಸು ಆತಂಕದ ನಡುವೆಯ ತಮ್ಮ ಪಯಣ ಮುಂದುವರಿಸಿದ್ದಾರೆ. ಕೋಲ್ಕತ್ತಾ ಹಾಗೂ ಬೆಂಗಳೂರಿನಿಂದ ಹೋದ ಪ್ರವಾಸಿಗರು ಮಾಧ್ಯಮಗಳ ಜೊತೆ ಮಾತನಾಡಿದ್ದು, ಈ ಪ್ರದೇಶ ಸದ್ಯಕ್ಕೆ ಸುರಕ್ಷಿತವಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಶ್ಮೀರ ಈಗ ಸುರಕ್ಷಿತವಾಗಿದೆ, ಎಲ್ಲವೂ ಮುಕ್ತವಾಗಿದೆ, ಪ್ರವಾಸಿಗರು ಸುರಕ್ಷಿತರಾಗಿದ್ದಾರೆ, ಎಲ್ಲರೂ ಬರುತ್ತಿದ್ದಾರೆ, ಆದ್ದರಿಂದ ನಿಮಗೆ ಯೋಜನೆಗಳಿದ್ದರೆ ದಯವಿಟ್ಟು ಬನ್ನಿ ಎಂದು ಕೋಲ್ಕತ್ತಾದ ಪ್ರವಾಸಿಗರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಟು ಕಾಶ್ಮೀರ ವಿಮಾನ ದರ ₹40 ಸಾವಿರದಿಂದ ₹8 ಸಾವಿರಕ್ಕೆ ಕುಸಿತ!
ಹಾಗೆಯೇ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಗುಜರಾತ್‌ನ ಸೂರತ್‌ನ ಪ್ರವಾಸಿ ಮೊಹಮ್ಮದ್ ಅನಸ್ ಕೂಡ ಇದೇ ಭಾವನೆಯನ್ನು ಹಂಚಿಕೊಂಡರು. ಅವರು ಹೇಳುವಂತೆ ಪಹಲ್ಗಾಮ್‌ನಲ್ಲಿ ವ್ಯವಹಾರ ಎಂದಿನಂತೆ ಮುಂದುವರೆದಿದೆ. ಇಲ್ಲಿ ಚಿಂತಿಸಲು ಏನೂ ಇಲ್ಲ. ಸೈನ್ಯ, ಸರ್ಕಾರ ಮತ್ತು ಸ್ಥಳೀಯರು ನಮ್ಮೊಂದಿಗಿದ್ದಾರೆ ಮತ್ತು ನಮ್ಮ ಸುರಕ್ಷತೆಯನ್ನು ಖಚಿತಪಡಿಸುತ್ತಿದ್ದಾರೆ. ಘಟನೆಯ ನಂತರ ನಾವು ಭಯಭೀತರಾಗಿದ್ದೆವು, ನಾವು ತಕ್ಷಣ ಹೊರಡಲು ಬಯಸಿದ್ದೆವು, ಆದರೆ ಸ್ಥಳೀಯರು ಮತ್ತು ಸೈನ್ಯವು ನಮಗೆ ಪ್ರೇರಣೆ ನೀಡಿತು ಮತ್ತು ನಾವು ನಮ್ಮ ಪ್ರಯಾಣವನ್ನು ಮುಂದುವರಿಸಿದೆವು ಎಂದು ಅವರು ಹೇಳಿದ್ದಾರೆ.
ನಾವು 3-4 ದಿನಗಳಿಂದ ಇಲ್ಲಿದ್ದೇವೆ ಮತ್ತು ನಾವು ತುಂಬಾ ಸುರಕ್ಷಿತವಾಗಿದ್ದೇವೆ ಎಂದು ಭಾವಿಸುತ್ತೇವೆ. ನಿಮ್ಮ ದೇಶವು ತುಂಬಾ ಸುಂದರವಾಗಿದೆ, ಮತ್ತು ನಮಗೆ ಇಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಕಾಶ್ಮೀರ ಸುಂದರ ಮತ್ತು ಸುರಕ್ಷಿತವಾಗಿದೆ. ನಾವು ಕಾಶ್ಮೀರಕ್ಕೆ ಬರುವ ಒಂದು ದಿನ ಮೊದಲು ಈ ಘಟನೆಯ ಬಗ್ಗೆ ಕೇಳಿದ್ದೆವು ಆದರೂ ಹೇಗಾದರೂ ನಾವು ಇಲ್ಲಿಗೆ ಬಂದಿದ್ದೇವೆ ಮತ್ತು ನಾವು ಸುರಕ್ಷಿತವಾಗಿದ್ದೇವೆ ಎಂದು ಕ್ರೊಯೇಷಿಯಾದ ಮಹಿಳೆಯೊಬ್ಬರು ಹೇಳಿದ್ದಾರೆ.
ಕ್ರೊಯೇಷಿಯಾದ ಮತ್ತೊಬ್ಬ ಪ್ರವಾಸಿಗ ಮಾತನಾಡಿ, ಪಹಲ್ಗಾಮ್‌ನಂತಹ ಘಟನೆಗಳು ಎಲ್ಲಿ ಬೇಕಾದರೂ ಸಂಭವಿಸಬಹುದು. ನನಗೆ ಇಲ್ಲಿ ಅದ್ಭುತವೆನಿಸಿತು. ನನಗೆ ಇಲ್ಲಿ ತುಂಬಾ ಸ್ನೇಹಿತರು ಸಿಕ್ಕರು. ಜನರು ತುಂಬಾ ಚೆನ್ನಾಗಿ ಸ್ವಾಗತಿಸುತ್ತಾರೆ. ಅಂತಹದ್ದನ್ನು(ಪೆಹಲ್ಗಾಮ್ ಉಗ್ರರ ದಾಳಿ) ಕೇಳುವುದು ಸುಲಭವಲ್ಲ ನನಗೆ ಯಾವುದೇ ಭಯ ಅನಿಸಲಿಲ್ಲ. ನನಗೆ ಅನಾನುಕೂಲ ಅನಿಸಲಿಲ್ಲ, ಇದು ನಿಯಮಿತವಾಗಿ ನಡೆಯುವ ವಿಷಯವಲ್ಲ, ಅದು ಸಾಂದರ್ಭಿಕವಾಗಿ ನಡೆಯುತ್ತದೆ ಮತ್ತು ಅದು ಎಲ್ಲೆಡೆ ನಡೆಯುತ್ತದೆ. ಜಗತ್ತಿನಲ್ಲಿ ಎಲ್ಲಿಯೂ ಸುರಕ್ಷಿತ ಸ್ಥಳವಿಲ್ಲಎಂದು ಹೇಳಿದರು.
ಇದನ್ನೂ ಓದಿ: ಸಾಯ್ತೀನಿಯೇ ವಿನಃ, ಪಾಕಿಸ್ತಾನಕ್ಕೆ ಹೋಗಲ್ಲ: ಬಿಕ್ಕಿ ಬಿಕ್ಕಿ ಅತ್ತ ಸೀಮಾ ಹೈದರ್!
ಏಪ್ರಿಲ್ 22 ರಂದು ಭಯೋತ್ಪಾದಕರ ಗುಂಪು ಜನಪ್ರಿಯ ತಾಣವಾದ ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿ 26 ಜನರನ್ನು ಬಲಿ ಪಡೆದಿತ್ತು ಇದಾದ ನಂತರ ಕಾಶ್ಮೀರಕ್ಕೆ ತೆರಳಿದವರೆಲ್ಲರೂ ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟುಕುಗೊಳಿಸಿ ವಾಪಸ್ ಬಂದಿದ್ದರು. ಈ ದಾಳಿಯಿಂದ ರಾಜ್ಯದ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬೀಳುವ ಭೀತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರವಾಸಿಗರು ಕಾಶ್ಮೀರಕ್ಕೆ ಹೋಗುವುದನ್ನು ತಪ್ಪಿಸದಂತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಆಗ್ರಹಿಸಿದ್ದರು.
ಪ್ರವಾಸಿಗರಲ್ಲಿರುವ ಭಯವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ರಜೆಯ ಮೇಲೆ ಇಲ್ಲಿಗೆ ಬರುವವರು ಯಾವುದೇ ಭಯವನ್ನು ಅನುಭವಿಸಲು ಬಯಸುವುದಿಲ್ಲ, ಆದರೆ ಈ ಸಮಯದಲ್ಲಿ ಅವರು ಕಾಶ್ಮೀರವನ್ನು ತೊರೆದರೆ, ಅದು ನಮ್ಮ ಶತ್ರುಗಳನ್ನು ಗೆಲ್ಲುವಂತೆ ಮಾಡಬಹುದು ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಅವರು ಎಲ್ಲಾ ಪ್ರವಾಸಿಗರನ್ನು ಕಾಶ್ಮೀರದಿಂದ ಹೊರಗೆ ಕಳುಹಿಸಲು ಬಯಸಿದ್ದರಿಂದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡರು ಎಂದು ಅಬ್ದುಲ್ಲಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ