ಕಾಶ್ಮೀರದಲ್ಲಿ ಮತ್ತೆ ಮಾರಣಹೋಮದ ಮುನ್ಸೂಚನೆ, 56 ಪಂಡಿತರ ಲಿಸ್ಟ್‌ ಬಿಡುಗಡೆ ಮಾಡಿದ ಉಗ್ರವಾದಿಗಳು!

By Santosh NaikFirst Published Dec 5, 2022, 11:32 AM IST
Highlights

ಕಾಶ್ಮೀರದಲ್ಲಿ ಮತ್ತೆ ಪಂಡಿತರ ಮಾರಣಹೋಮದ ಸೂಚನೆ ಸಿಕ್ಕಿದೆ.  ಉಗ್ರಗಾಮಿಗಳ ಬೆದರಿಕೆ ಮತ್ತು ಎಚ್ಚರಿಕೆಯ ನಂತರ ಪಂಡಿತ್ ಉದ್ಯೋಗಿಗಳಲ್ಲಿ ಭಯ ಆವರಿಸಿದೆ ಎಂದು ಕಾಶ್ಮೀರ ಭಾಗಕ್ಕೆ ವಲಸೆ ಅಥವಾ ಸ್ಥಳಾಂತರಗೊಂಡ ನೌಕರರ ಸಂಘದ (AMDEAK) ಅಧ್ಯಕ್ಷ ರೂಬನ್ ಸಪ್ರೂ ಪ್ರತಿಕ್ರಿಯೆ ನೀಡಿದ್ದಾರೆ.
 

ಶ್ರಿನಗರ (ಡಿ. 5): ಕಾಶ್ಮೀರದಲ್ಲಿ ಪಂಡಿತರನ್ನು ಮರು ನೆಲವೂರುವಂತೆ ಮಾಡುವ ನಿಟ್ಟಿನಲ್ಲಿ ಪಂಡಿತ ಉದ್ಯೋಗಿಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಪೋಸ್ಟಿಂಗ್‌ ಮಾಡಲಾಗಿತ್ತು. ಆದರೆ, ಇದು ಕಾಶ್ಮೀರದಲ್ಲಿ ಮತ್ತೊಂದು ಸುತ್ತಿನ ಮಾರಣಹೋಮಕ್ಕೆ ಕಾರಣವಾಗಬಹುದು ಎನ್ನುವ ಮುನ್ಸೂಚನೆ ನೀಡಿದೆ. ಸ್ಥಳೀಯ ಉಗ್ರವಾದಿಗಳು ಹಾಗೂ ಭಯೋತ್ಪಾದಕರು ಆನ್‌ಲೈನ್‌ನಲ್ಲಿ ಪಂಡಿತ್‌ ಉದ್ಯೋಗಿಗಳಿಗೆ ಬೆದರಿಕೆ ಒಡ್ಡಿದ್ದು, ಕಾಶ್ಮಿರ ಬಿಟ್ಟು ಹೋಗುವಂತೆ ಹೇಳಿದ್ದಾರೆ. ಕನಿಷ್ಠ 56 ಕಾಶ್ಮೀರಿ ಪಂಡಿತ ಉದ್ಯೋಗಿಗಳ ಹೆಸರು ಹಾಗೂ ಅವರನ್ನು ಪೋಸ್ಟಿಂಗ್ ಮಾಡಿರುವ ಸ್ಥಳದ ಹೆಸರನ್ನು ಇವರು ಈ ಪಟ್ಟಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಕಾಶ್ಮೀರದಲ್ಲಿ ನೆಲೆಸಿರುವ ಪಂಡಿತ್‌ ಉದ್ಯೋಗಿಗಳು ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಕಾಶ್ಮೀರ ಭಾಗಕ್ಕೆ ವಲಸೆ ಅಥವಾ ಸ್ಥಳಾಂತರಗೊಂಡ ನೌಕರರ ಸಂಘದ ಸಂಧ್ಯಕ್ಷ ರೂಬನ್ ಸಪ್ರೂ ಕೂಡ ಈ ಲಿಸ್ಟ್‌ ಪ್ರಕಟವಾಗಿರುವುದನ್ನು ಖಚಿತಪಡಿಸಿದ್ದು, ಉಗ್ರವಾದಿಗಳು ನಮಗೆ ನೇರವಾಗಿ ಬೆದರಿಕೆ ಹಾಗೂ ಎಚ್ಚರಿಕೆ ನೀಡಿದ್ದಾರೆ. ಪ್ರಧಾನಮಂತ್ರಿ ಪ್ಯಾಕೇಜ್‌ ಅಡಿಯಲ್ಲಿ ಕಾಶ್ಮೀರದಲ್ಲಿ ನೇಮಕಗೊಂಡಿರುವ ಪಂಡಿತ್‌ ಉದ್ಯೋಗಿಗಳ ಹೆಸರನ್ನು ಈಗಾಗಲೇ ಬ್ಲಾಕ್‌ಲಿಸ್ಟ್‌ ಮಾಡಲಾಗಿರುವ ಕಾಶ್ಮೀರ್‌ ಫೈಟ್‌ ಡಾಟ್‌ಕಾಮ್‌ ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ.

ಪೊಲೀಸರ ಪ್ರಕಾರ ಬ್ಲಾಗ್ ಅನ್ನು (kashmirfight.com) ಲಷ್ಕರ್-ಎ-ತೊಯ್ಬಾ ಉಗ್ರರು ನಡೆಸುತ್ತಿದ್ದಾರೆ. ಆನ್‌ಲೈನ್ ಲಿಸ್ಟ್‌ನಲ್ಲಿ 56 ಕಾಶ್ಮೀರಿ ಪಂಡಿತರ ಉದ್ಯೋಗಿಗಳ ಪಟ್ಟಿಯನ್ನು ಅವರ ಪೋಸ್ಟಿಂಗ್ ಸ್ಥಳಗಳೊಂದಿಗೆ ಉಗ್ರರು ಬಿಡುಗಡೆ ಮಾಡಿದ್ದಾರೆ. "ಇದು ಪ್ರಧಾನ ಮಂತ್ರಿ ಯೋಜನೆಯಡಿಯಲ್ಲಿ ಉದ್ಯೋಗವನ್ನು ಒದಗಿಸಿದ ವಲಸಿಗ ಕಾಶ್ಮೀರಿ ಪಂಡಿತರ ಒಂದು ಸಣ್ಣ ಪಟ್ಟಿಯಾಗಿದೆ" ಎಂದು ಉಗ್ರಗಾಮಿಗಳು ಬರೆದುಕೊಂಡಿದ್ದು, ದಾಳಿಯ ಎಚ್ಚರಿಕೆ ನೀಡಿದ್ದಾರೆ.

 

ಕ್ಷಮೆಯಾಚಿಸುತ್ತೇನೆ, ಆದರೆ..; ಕಾಶ್ಮೀರ್ ಫೈಲ್ಸ್ ಅಶ್ಲೀಲ ಸಿನಿಮಾವೆಂದ ಇಸ್ರೇಲಿ ನಿರ್ದೇಶಕ ನದಾವ್

ಉಗ್ರಗಾಮಿಗಳು 56 ಪಂಡಿತ್ ನೌಕರರ ಹೆಸರನ್ನು ಬಿಡುಗಡೆ ಮಾಡಿರುವುದು ಗಂಭೀರ ಹಾಗೂ ಆತಂಕದ ವಿಷಯವಾಗಿದೆ ಮತ್ತು ಕಣಿವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪಂಡಿತ್ ನೌಕರರ ವಿವರಗಳನ್ನು ಉಗ್ರಗಾಮಿಗಳು ಹೇಗೆ ಪಡೆದುಕೊಂಡರು ಎಂಬುದನ್ನು ಕೂಡ ಸರ್ಕಾರ ತನಿಖೆ ಮಾಡಬೇಕು ಎಂದು ಸಪ್ರೂ ಹೇಳಿದರು. "ಪಟ್ಟಿಯಲ್ಲಿ ಹೆಸರಿಸಲಾದ ಉದ್ಯೋಗಿಗಳು ತುಂಬಾ ಭಯಭೀತರಾಗಿದ್ದಾರೆ. ಎಲ್ಲರೂ ಭಯದಲ್ಲಿದ್ದಾರೆ," ಅವರು ಹೇಳಿದರು. ಅದರಲ್ಲಿಯೂ ಬ್ಲಾಗ್‌ನಲ್ಲಿ ತಮ್ಮ ಹೆಸರು ಕಾಣಿಸಿಕೊಂಡ ಬಳಿಕ ನಮ್ಮ ಭಯ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಸುಳ್ಳು ಎಂದು ಸಾಬೀತಾದ್ರೆ ಸಿನಿಮಾ ಮಾಡೋದನ್ನೇ ಬಿಡ್ತೀನಿ; 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿ ಸವಾಲ್

2010 ರಿಂದ ಪ್ರಧಾನ ಮಂತ್ರಿಯವರ ಜಾಬ್‌ ಪ್ಯಾಕೇಜ್ ಅಡಿಯಲ್ಲಿ ನೇಮಕಗೊಂಡ ಸುಮಾರು 5,000 ಪಂಡಿತ್ ಉದ್ಯೋಗಿಗಳು ಪ್ರಸ್ತುತ ಮುಷ್ಕರದಲ್ಲಿದ್ದಾರೆ. ಮೇ 12 ರಂದು ಪಂಡಿತ್‌ ಉದ್ಯೋಗಿ ರಾಹುಲ್‌ ಭಟ್‌ ಅವರನ್ನು ಕೇಂದ್ರ ಕಾಶ್ಮೀರದ ಬುದ್ಗಾಂ ಜಿಲ್ಲೆಯ ಚಾದೂರಾದ ತೆಹಸೀಲ್‌ ಕಚೇರಿಯಲ್ಲಿ ಉಗ್ರಗಾಮಿಗಳು ಗುಂಡಿಟ್ಟು ಕೊಂಡಿದ್ದರು, ಆ ಬಳಿಕ ಪಂಡಿತ್‌ ಉದ್ಯೋಗಿಗಳು ಅಧಿಕೃತ ಕರ್ತವ್ಯಗಳಿಗೆ ಹಾಜರಾಗುತ್ತಿಲ್ಲ. ಇದಾದ ಬಳಿಕ ಇನ್ನೂ ಇಬ್ಬರು ಪಂಡಿತ್‌ ಉದ್ಯೋಗಿಗಳನ್ನು ಉಗ್ರಗಾಮಿಗಳು ಸಾಯಿಸಿ ತಮ್ಮ ಕ್ರೌರ್ಯ ಮೆರೆದಿದ್ದಾರೆ.

click me!