ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್

Published : Dec 07, 2025, 08:36 AM IST
karwara jail inmates assults on jailors

ಸಾರಾಂಶ

ಕಾರವಾರ ಜೈಲಿನಲ್ಲಿ ಡ್ರಗ್ಸ್ ಪೂರೈಕೆ ತಡೆದಿದ್ದಕ್ಕೆ ಕೈದಿಗಳು ಜೈಲರ್ ಮೇಲೆ ಹಲ್ಲೆ ನಡೆಸಿದ್ದಾರೆ. ಮತ್ತೊಂದೆಡೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸಿಗರೇಟು ಸಾಗಿಸಲು ಯತ್ನಿಸಿದ ವಾರ್ಡನ್‌ನನ್ನು ಬಂಧಿಸಲಾಗಿದೆ.

ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳ ಹಲ್ಲೆ: ಬೆಂಗ್ಳೂರಲ್ಲಿ ಜೈಲಿಗೆ ಸಿಗರೇಟು ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದ ವಾರ್ಡನ್‌

ಕಾರವಾರ/ಬೆಂಗಳೂರು: ರಾಜ್ಯದ ಒಂದು ಜೈಲಿನಲ್ಲಿ ಡ್ರಗ್ಸ್‌ಗಾಗಿ ಕೈದಿಗಳೇ ಜೈಲರ್ ಮೇಲೆ ಹಲ್ಲೆ ಮಾಡಿದ್ದರೆ, ಮತ್ತೊಂದೆಡೆ ಸ್ವತಃ ಜೈಲಿನ ವಾರ್ಡನ್ನೇ ಜೈಲೊಳಗೆ ಸಿಗರೇಟ್ ಸಾಗಣೆಗೆ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಕಾರವಾರ ಹಾಗೂ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲುಗಳಲ್ಲಿ ಈ ಘಟನ ನಡೆದಿದೆ.

ಕಾರವಾರ ಜೈಲಿನೊಳಗೆ ಹಲ್ಲೆಗೊಳಗಾದ ಸಿಬ್ಬಂದಿ

ಕಾರವಾರದ ಜಿಲ್ಲಾ ಕಾರಾಗೃಹದಲ್ಲಿ ಮಾದಕ ವಸ್ತುಗಳ ಪೂರೈಕೆಗೆ ಕಡಿವಾಣ ಹಾಕಿದ್ದಕ್ಕೆ ಆಕ್ರೋಶಗೊಂಡ ಮಂಗಳೂರು ಮೂಲದ ಇಬ್ಬರು ಕೈದಿಗಳು ಶನಿವಾರ ಕಾರಾಗೃಹದ ಜೈಲರ್‌ಸೇರಿ ಕರ್ತವ್ಯ ನಿರತ 3 ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಮಂಗಳೂರಿನ ಮೊಹಮ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ್ ನಿಹಾಲ್ ಹಲ್ಲೆ ನಡೆಸಿದವರು. ಡಕಾಯತಿ ಸೇರಿ 12ಕ್ಕೂ ಹೆಚ್ಚು ಕೇಸ್‌ಗಳಲ್ಲಿ ಇವರು ಆರೋಪಿಗಳಾಗಿದ್ದಾರೆ. ಮಂಗಳೂರು ಜೈಲಿನಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಇವರನ್ನು ಕಾರವಾರ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಇದನ್ನೂ ಓದಿ: ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ

ಕಾರವಾರ ಜೈಲಿನಲ್ಲಿ ಶಿಸ್ತು ಕ್ರಮ ಬಿಗಿಗೊಳಿಸಿ ಮಾದಕ ವಸ್ತುಗಳ ಬಳಕೆ ನಿರ್ಬಂಧಿಸಲಾಗಿದೆ. ಇದು ಆರೋಪಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಶನಿವಾರ ಜೈಲರ್ ಕಲ್ಲಪ್ಪ ಗಸ್ತಿಯವರು ತಪಾಸಣೆಗೆ ಆಗಮಿಸಿದ್ದ ವೇಳೆ ಈ ಕೈದಿಗಳು ಜೈಲರ್ ಜೊತೆ ಗಲಾಟೆ ಮಾಡಿದರು. ಮಾತಿನ ಚಕಮಕಿ ನಡೆದಿದ್ದು, ಕೈದಿಗಳು ಗಸ್ತಿಯವರ ಸಮವಸ್ತ್ರ ಹರಿಯಲು ಯತ್ನಿಸಿ, ಹಲ್ಲೆಗೆ ಮುಂದಾದರು. ಇತರ ಸಿಬ್ಬಂದಿ ಈ ಗಲಾಟೆ ನಿಯಂತ್ರಿಸಲು ಹರ ಸಾಹಸ ಪಟ್ಟರು. ಗಲಾಟೆಯಲ್ಲಿ ಬಸ್ತಿ ಸೇರಿ ಮೂವರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೊಬೈಲ್ ನಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

ಘಟನೆ ಬೆನ್ನಲ್ಲೇ ಜಿಲ್ಲಾ ಕಾರಾಗೃಹದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಮಾದಕ ವಸ್ತು ಪೂರೈಕೆಗೆ ಕಡಿವಾಣ ಹಾಕಿದ್ದಕ್ಕೆ ಸಿಟ್ಟಾಗಿ ಕೈದಿಗಳು ಈ ಹಲ್ಲೆ ಮಾಡಿದ್ದಾರೆ. ಶನಿವಾರವಾದ್ದರಿಂದ ಈ ಘಟನೆಯಿಂದಾಗಿ ಜೈಲಿನಲ್ಲಿದ್ದ ಇತರ ಕೈದಿಗಳ ಭೇಟಿಗೆ ವಿವಿಧೆಡೆಗಳಿಂದ ಬಂದಿದ್ದ ಕುಟುಂಬಸ್ಥರು ಆಗಮಿಸಿದ್ದು, ಭೇಟಿಗೆ ಅವಕಾಶ ಸಿಗದೇ ಪರದಾಡುವಂತಾಯಿತು.

ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಅಕ್ರಮವಾಗಿ ಸಿಗರೇಟು ಸಾಗಿಸಲೆತ್ನಿಸಿದ ಆರೋಪ ಮೇರೆಗೆ ಕಾರಾಗೃಹದ ವಾರ್ಡನ್‌ವೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ರಾಹುಲ್ ಪಾಟೀಲ್ ಬಂಧಿತರು. ಕಾರಾಗೃಹ ಕರ್ತವ್ಯಕ್ಕೆ ಬಂದಾಗ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. 6 ತಿಂಗಳ ಹಿಂದಷ್ಟೇ ಬೆಳಗಾವಿ ಕೇಂದ್ರ ಕಾರಾಗೃಹದಿಂದ ಪರಪ್ಪನ ಅಗ್ರಹಾರಕ್ಕೆ ರಾಹುಲ್ ವರ್ಗವಾಗಿದ್ದರು. ಶುಕ್ರವಾರ ಸಂಜೆ ಕಾರಾಗೃಹದಲ್ಲಿ ಕರ್ತವ್ಯಕ್ಕೆ ಹಾಜರಾಗಲು ರಾಹುಲ್ ಬಂದಿದ್ದರು. ಈ ವೇಳೆ ಜೈಲಿನ ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿ, ರಾಹುಲ್‌ರನ್ನು ಪರಿಶೀಲಿಸಿದಾಗ ಸಿಗರೇಟ್ ಪ್ಯಾಕ್‌ಗಳು ಪತ್ತೆಯಾಗಿವೆ. ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡದೆ ತಪ್ಪಿಸಿ ಕೊಳ್ಳಲೆತ್ನಿಸಿದ್ದಾರೆ. ಕೊನೆಗೆ ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕಾರಾಗೃಹ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಆರೋಪಿ ವಾರ್ಡನ್‌ನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು
ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು