
ಶೇಷಮೂರ್ತಿ ಅವಧಾನಿ
ಕಲಬುರಗಿ(ಜೂ.17): ಕೋವಿಡ್ ಲಸಿಕೆ ಅಭಿಯಾನಕ್ಕೆ ವೇಗ ನೀಡಲು ರಾಜ್ಯದ ಮೊದಲ ಸಂಚಾರಿ ಲಸಿಕಾ ವಾಹನ ಇದೀಗ ಕಲಬುರಗಿಯಲ್ಲಿ ಸಿದ್ಧವಾಗಿ ನಿಂತಿದೆ. ಈಶಾನ್ಯ ಸಾರಿಗೆ ಸಂಸ್ಥೆ ಜನರ ಮನೆ ಬಾಗಿಲಿಗೇ ತೆರಳಿ ಲಸಿಕೆ ಹಾಕುವ ಸೌಲಭ್ಯವುಳ್ಳ 2 ವ್ಯಾಕ್ಸಿನ್ ಬಸ್‌ಗಳನ್ನು ವಿನ್ಯಾಸಗೊಳಿಸಿ ಕಲಬುರಗಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದೆ. ಇದರಿಂದಾಗಿ ಲಸಿಕೆ ಪಡೆಯಲು ಹಿಂದೇಟು ಹಾಕುವ ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೇ ತೆರಳಿ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಿಬ್ಬಂದಿಗೆ ಈ ಬಸ್‌ಗಳು ಹೆಚ್ಚಿನ ಬಲ ತುಂಬಲಿವೆ ಎಂದು ನಿರೀಕ್ಷಿಸಲಾಗಿದೆ.
ಸಂಚಾರಿ ಲಸಿಕಾ ವಾಹನ ಒಟ್ಟು ಮೂರು ಭಾಗಗಳಲ್ಲಿ (ಕಂಪಾರ್ಟ್‌ಮೆಂಟ್) ಲಸಿಕಾ ಆಂದೋಲನ ನಡೆಸಲಿದೆ. ಮೊದಲನೇ ಭಾಗದಲ್ಲಿ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಎರಡನೇ ಭಾಗದಲ್ಲಿ ಲಸಿಕೆ ನೀಡಲಾಗುವುದು ಹಾಗೂ ಕೊನೆಯ ಭಾಗದಲ್ಲಿ ಲಸಿಕೆ ಪಡೆದ ನಂತರ ವಿಶ್ರಾಂತಿಗೆ ವ್ಯವಸ್ಥೆ ಇದೆ. ಅಗತ್ಯ ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರನ್ನು ಹೊಂದಿರುವ ಈ ಬಸ್‌ಗಳು ದೂರದ ಕುಗ್ರಾಮಗಳಿಗೆ ಪ್ರಯಾಣಿಸಿ ಬುಡಕಟ್ಟು ಜನ, ಹಳ್ಳಿ ಮಂದಿ, ತಾಂಡಾ ಜನತೆ, ಗ್ರಾಮಸ್ಥರು, ಅಲೆಮಾರಿ ಮತ್ತು ಇತರ ದುರ್ಬಲ ವರ್ಗಗಳಿಗೆ ಲಸಿಕೆ ನೀಡಲಿವೆ.
2 ವಿಶೇಷ ಬಸ್‌ಗಳ ವಿನ್ಯಾಸ
ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಕೋರಿಕೆಯಂತೆ 2 ವಿಶೇಷ ಬಸ್‌ಗಳನ್ನು ವಿನ್ಯಾಸಗೊಳಿಸಿ ಕೋವಿಡ್ ವಿರುದ್ಧದ ಸಮರದಲ್ಲಿ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿದ್ದೇವೆ. ಅಗತ್ಯ ಬಿದ್ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರಿ ಲಸಿಕಾ ವಾಹನಗಳನ್ನು ತಯಾರಿಸಲಾಗುವುದು.
-ರಾಜಕುಮಾರ್ ಪಾಟೀಲ್ ತೇಲ್ಕೂರ್, ಈಶಾನ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ