
ನವದೆಹಲಿ: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಅಂಕ ಉತ್ತಮಪಡಿಸಿಕೊಳ್ಳಲು ಕರ್ನಾಟಕದಲ್ಲಿ ಈಗಾಗಲೇ 3 ಪರೀಕ್ಷೆಗಳು ಉಂಟು. ಈಗ ಇದೇ ಮಾದರಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ (2026) 10ನೇ ತರಗತಿಯ ವಿದ್ಯಾರ್ಥಿಗಳಿಗೆ ವರ್ಷದಲ್ಲಿ 2 ಬಾರಿ ಅಂತಿಮ ಪರೀಕ್ಷೆ ನಡೆಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಿರ್ಧರಿಸಿದೆ.
ಅನುತ್ತೀರ್ಣರಾದವರು ತೇರ್ಗಡೆಯಾಗಲು ಹಾಗೂ ಕಮ್ಮಿ ಫಲಿತಾಂಶ ಪಡೆದವರು ಅಂಕ ಉತ್ತಮಪಡಿಸಿಕೊಳ್ಳಲು ಇವು ಸಹಕಾರಿಯಾಗಲಿವೆ.
ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ಮಾತನಾಡಿ, ‘ಇದರಡಿ ಮೊದಲ ಪರೀಕ್ಷೆ ಬರೆಯುವುದು ಕಡ್ಡಾಯವಾಗಿದ್ದು, 2ನೇ ಪರೀಕ್ಷೆ ಐಚ್ಛಿಕವಾಗಿದೆ. ಮೊದಲ ಹಂತದ ಪರೀಕ್ಷೆಯನ್ನು ಫೆಬ್ರವರಿಯಲ್ಲಿ ನಡೆಸಲಾಗುತ್ತದೆ. ಏಪ್ರಿಲ್‌ನಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ. 2ನೇ ಹಂತದ ಪರೀಕ್ಷೆ ಮೇ ತಿಂಗಳಲ್ಲಿ ಇರುತ್ತದೆ. ಫಲಿತಾಂಶ ಜೂನ್‌ನಲ್ಲಿ ಘೋಷಿಸಲಾಗುವುದು. ವಿದ್ಯಾರ್ಥಿಗಳು 2ನೇ ಹಂತದಲ್ಲಿ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಭಾಷೆ ವಿಷಯಗಳ ಪರೀಕ್ಷೆ ಬರೆದು ತಮ್ಮ ಅಂಕ ಉತ್ತಮಗೊಳಿಸಿಕೊಳ್ಳಬಹುದು’ ಎಂದು ಹೇಳಿದರು. ಆದರೆ, ಇಡೀ ಶೈಕ್ಷಣಿಕ ಅವಧಿಯಲ್ಲಿ ಒಮ್ಮೆ ಮಾತ್ರ ಆಂತರಿಕ ಮೌಲ್ಯಮಾಪನ ನಡೆಸಲಾಗುತ್ತದೆ. ಶೀತ ಪ್ರದೇಶಗಳಲ್ಲಿರುವ ಶಾಲೆಗಳ ಮಕ್ಕಳು ಹಾಗೂ ಕ್ರೀಡಾ ಕೆಟಗರಿಯಲ್ಲಿರುವ ಮಕ್ಕಳು ಯಾವ ಹಂತದ ಪರೀಕ್ಷೆಯನ್ನಾದರೂ ಬರೆಯಬಹುದಾಗಿದೆ.
ಆದರೆ ಒಂದು ವೇಳೆ ಮೊದಲ ಹಂತದಲ್ಲಿ 3 ಅಥವಾ 3ಕ್ಕಿಂತ ಹೆಚ್ಚು ಪರೀಕ್ಷೆಗೆ ಗೈರಾದರೆ ಅವರಿಗೆ 2ನೇ ಹಂತದ ಪರೀಕ್ಷೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿ ಸೂಚಿಸಲಾಗಿರುವಂತೆ, 2 ಪರೀಕ್ಷೆಗಳನ್ನು ನಡೆಸುವ ಸಂಬಂಧ ಸಿಬಿಎಸ್‌ಇ ನಿಯಮಾವಳಿಗಳನ್ನು ಸಿದ್ಧಪಡಿಸಿ ಅನುಮೋದಿಸಿದೆ. ಈ ಪರೀಕ್ಷಾ ವ್ಯವಸ್ಥೆಯ ಮಾನದಂಡಗಳ ಕರಡನ್ನು ಸಿಬಿಎಸ್‌ಇ ಫೆಬ್ರವರಿಯಲ್ಲಿ ಘೋಷಿಸಿದ್ದು, ಸಂಬಂಧಿಸಿದವರ ಪ್ರತಿಕ್ರಿಯೆಗಾಗಿ ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿತ್ತು.
- ಮುಂದಿನ ವರ್ಷದಿಂದ ನಡೆಯಲಿವೆ 2 ಬೋರ್ಡ್ ಪರೀಕ್ಷೆ- ಮೊದಲ ಪರೀಕ್ಷೆ ಕಡ್ಡಾಯ, 2ನೇಯದ್ದು ಐಚ್ಛಿಕ
- ಅನುತ್ತೀರ್ಣರಾದವರು ತೇರ್ಗಡೆಯಾಗಲು, ಪಾಸಾದವರು ಅಂಕ ವೃದ್ಧಿಸಿಕೊಳ್ಳಲೆಂದು 2 ಪರೀಕ್ಷೆ
- ಫೆಬ್ರವರಿಯಲ್ಲಿ ಮೊದಲ ಪರೀಕ್ಷೆ, ಏಪ್ರಿಲ್‌ನಲ್ಲಿ ಫಲಿತಾಂಶ. ಮೇಗೆ 2ನೇ ಪರೀಕ್ಷೆ, ಜೂನ್‌ಗೆ ರಿಸಲ್ಟ್
- ಮೊದಲ ಹಂತದ ಪರೀಕ್ಷೆ ಬರೆದವರಿಗೆ ಮಾತ್ರ ಎರಡನೇ ಹಂತದ ಪರೀಕ್ಷೆ ಬರೆಯಲು ಅವಕಾಶ
- ಮೊದಲ ಹಂತದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಪರೀಕ್ಷೆಗೆ ಗೈರಾದವರಿಗೆ ಎರಡನೇ ಪರೀಕ್ಷೆ ಇಲ್ಲ
- ಕರ್ನಾಟಕದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ 3 ಪರೀಕ್ಷೆ ನಡೆಯುತ್ತಿವೆ. ಇದು ಅದೇ ಮಾದರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ