ಅತಿ ಹೆಚ್ಚು ಹುಲಿಗಳ ಸಾವು: ಕರ್ನಾಟಕ ದೇಶಕ್ಕೇ ನಂ.2

By Kannadaprabha NewsFirst Published Jul 25, 2022, 1:00 AM IST
Highlights

ಭಾರತದ ‘ಹುಲಿಗಳ ರಾಜ್ಯ’ ಎಂದೇ ಖ್ಯಾತಿ ಪಡೆದಿರುವ ಮಧ್ಯಪ್ರದೇಶದಲ್ಲಿ ಕರ್ನಾಟಕಕ್ಕಿಂತ ಅತಿ ಹೆಚ್ಚು ಹುಲಿಗಳು ಸಾವನ್ನಪ್ಪಿವೆ.

ಭೋಪಾಲ್‌(ಜು.25):  ಕರ್ನಾಟಕದಲ್ಲಿ ಈ ವರ್ಷ 11 ಹುಲಿಗಳು ಸಾವನ್ನಪ್ಪಿದ್ದು, ಅತಿ ಹೆಚ್ಚು ಹುಲಿಗಳ ಸಾವಿನ ಪ್ರಕರಣ ವರದಿಯಾದ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಇನ್ನು ಭಾರತದ ‘ಹುಲಿಗಳ ರಾಜ್ಯ’ ಎಂದೇ ಖ್ಯಾತಿ ಪಡೆದಿರುವ ಮಧ್ಯಪ್ರದೇಶದಲ್ಲಿ ಕರ್ನಾಟಕಕ್ಕಿಂತ ಅತಿ ಹೆಚ್ಚು ಹುಲಿಗಳು ಸಾವನ್ನಪ್ಪಿವೆ.

ಜುಲೈ 15ರವರೆಗೆ ದೇಶದಲ್ಲಿ ಒಟ್ಟು 74 ಹುಲಿಗಳು ಮೃತಪಟ್ಟಿದ್ದು, ಮಧ್ಯಪ್ರದೇಶವೊಂದರಲ್ಲೇ 27 ಹುಲಿಗಳು ಸಾವನ್ನಪ್ಪಿವೆ. ಇದು ದೇಶದಲ್ಲೇ ಗರಿಷ್ಠವಾಗಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಜಾಲತಾಣ ಪ್ರಕಟಿಸಿದೆ.

25ನೇ ವರ್ಷದಲ್ಲಿ ಅಸುನೀಗಿದ ವಿಶ್ವದ ಅತ್ಯಂತ ಹಿರಿಯ ಹುಲಿ!

ಮಹಾರಾಷ್ಟ್ರದಲ್ಲಿ 15, ಕರ್ನಾಟಕದಲ್ಲಿ 11, ಅಸ್ಸಾಂನಲ್ಲಿ 5 ಹುಲಿಗಳು ಮೃತಪಟ್ಟಿವೆ. ಅದೇ ಕೇರಳ ಹಾಗೂ ರಾಜಸ್ಥಾನದಲ್ಲಿ ತಲಾ 4, ಉತ್ತರ ಪ್ರದೇಶದಲ್ಲಿ 3, ಆಂಧ್ರಪ್ರದೇಶದಲ್ಲಿ 2, ಬಿಹಾರ, ಒಡಿಶಾ, ಛತ್ತೀಸಗಢದಲ್ಲಿ ತಲಾ ಒಂದು ಹುಲಿ ಮೃತಪಟ್ಟಿವೆ ಎಂದು ಎನ್‌ಟಿಸಿಎ ತಿಳಿಸಿದೆ.

ಮಧ್ಯಪ್ರದೇಶದಲ್ಲಿ ಈ ವರ್ಷ 9 ಗಂಡು ಹಾಗೂ 8 ಹೆಣ್ಣು ಹುಲಿಗಳು, ಹುಲಿಮರಿಗಳು ಸೇರಿ ಒಟ್ಟು 27 ಹುಲಿಗಳು ಮೃತಪಟ್ಟಿವೆ. ಪ್ರಾದೇಶಿಕ ಕಾದಾಟ, ವೃದ್ಧಾಪ್ಯ, ಕಾಯಿಲೆ, ಕಳ್ಳ ಬೇಟೆ ಹಾಗೂ ವಿದ್ಯುತ್‌ ಆಘಾತಗಳು ಹುಲಿಗಳ ಸಾವಿಗೆ ಪ್ರಮುಖ ಕಾರಣಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2018ರ ಹುಲಿ ಗಣತಿ ಪ್ರಕಾರ ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದರೆ, ಕರ್ನಾಟಕದಲ್ಲಿ 524 ಹುಲಿಗಳು ಪತ್ತೆಯಾಗಿದ್ದವು.
 

click me!