
ಬೆಂಗಳೂರು (ಜೂ.30): ಕೆಲವೊಂದು ಖಾತೆಗಳನ್ನು ಬ್ಲಾಕ್ ಮಾಡುವಂತೆ ಕೇಂದ್ರ ಸರ್ಕಾರ ನೀಡಿದ ಸೂಚನೆಯನ್ನು ಪಾಲಿಸದೆ ಇದರ ವಿರುದ್ಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ ಟ್ವಿಟರ್ ಇಂಡಿಯಾಗೆ ಹಿನ್ನಡೆಯಾಗಿದೆ. ರಾಜ್ಯ ಹೈಕೋರ್ಟ್ ಟ್ವಿಟರ್ ಇಂಡಿಯಾಗೆ ಛೀಮಾರಿ ಹಾಕಿ ಅರ್ಜಿಯನ್ನು ವಜಾ ಮಾಡಿದ್ದು ಮಾತ್ರವಲ್ಲದೆ, 50 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ಕೇಂದ್ರ ಸರ್ಕಾರ ಕೆಲವೊಂದು ಟ್ವೀಟ್‌ಗಳು ಹಾಗೂ ಯುಆರ್‌ಎಲ್‌ಗಳನ್ನು ಪೋಸ್ಟ್ ಮಾಡುವ ಟ್ವೀಟ್ ಅಕೌಂಟ್‌ಗಳನ್ನು ಬ್ಲಾಕ್ ಮಾಡುವಂತೆ ಟ್ವಿಟರ್ ಇಂಡಿಯಾಕ್ಕೆ ತಿಳಿಸಿತ್ತು. ಆದರೆ, ಕೇಂದ್ರದ ಆದೇಶದ ಕುರಿತಾಗಿ ಟ್ವಿಟರ್ ಇಂಡಿಯಾ ಕೋರ್ಟ್ ಮೆಟ್ಟಿಲೇರಿತ್ತು. ಟ್ವಿಟರ್ ಇಂಡಿಯಾ ಅರ್ಜಿ ವಿಚಾರಣೆ ವೇಳೆ ಅಭಿಪ್ರಾಯ ತಿಳಿಸಿದ ಕೋರ್ಟ್, ನೀವು ಈ ದೇಶದ ರೈತರಲ್ಲ. ನೀವೊಂದು ಬಿಲಿಯನ್ ಡಾಲರ್ ಮೌಲ್ಯದ ಕಂಪನಿ. ಒಂದು ದೇಶದಲ್ಲಿ ಕಾರ್ಯನಿರ್ವಹಣೆ ಮಾಡಬೇಕಾದಲ್ಲಿ ಇಲ್ಲಿನ ನಿಯಮಗಳ ಬಗ್ಗೆ ನಿಮಗೆ ತಿಳಿದಿರಬೇಕು ಎಂದು ಹೇಳಿದೆ.
ಮಾಧ್ಯಮ ವರದಿಗಳ ಪ್ರಕಾರ, ಫೆಬ್ರವರಿ 2021 ಮತ್ತು 2022 ರ ನಡುವೆ, ರೈತರ ಪ್ರತಿಭಟನೆ ಮತ್ತು ಕರೋನಾ ವೈರಸ್‌ಗೆ ಸಂಬಂಧಿಸಿದ ಕೆಲವು ಖಾತೆಗಳು, ಟ್ವೀಟ್‌ಗಳು ಮತ್ತು ಯುಆರ್‌ಎಲ್ ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಟ್ವಿಟರ್‌ಗೆ ಆದೇಶ ನೀಡಿತ್ತು. ಕೇಂದ್ರ ಸರ್ಕಾರದ ಆದೇಶವನ್ನು ಪಾಲಿಸದ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಕಳೆದ ವರ್ಷ ಜೂನ್ ನಲ್ಲಿ ಟ್ವಿಟರ್ ಗೆ ನೋಟಿಸ್ ಕಳುಹಿಸಿತ್ತು. ಇದರ ವಿರುದ್ಧ ಟ್ವಿಟರ್ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. 2022ರ ಜುಲೈ 26 ರಂದು, ನ್ಯಾಯಮೂರ್ತಿ ಕೃಷ್ಣ ಸಿನ್ಹಾ ಅವರ ಏಕಸದಸ್ಯ ಪೀಠವು ಮೊದಲ ಬಾರಿಗೆ ವಿಚಾರಣೆ ನಡೆಸಿತು. ಇದಾದ ನಂತರ ಕೇಂದ್ರ ಸರ್ಕಾರ ಮತ್ತು ಟ್ವಿಟರ್, ನ್ಯಾಯಾಲಯದ ಮುಂದೆ ತಮ್ಮ ನಿಲುವನ್ನು ಮಂಡಿಸಿದವು. ವಿಚಾರಣೆ ಪೂರ್ಣ ಮಾಡಿದ್ದ ಕೋರ್ಟ್ ಏಪ್ರಿಲ್ 21 ರಂದು ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇದರ ತೀರ್ಪನ್ನು ಶುಕ್ರವಾರ ಪ್ರಕಟಿಸಿದೆ. ಟ್ವಿಟರ್‌ಗೆ ಛೀಮಾರಿ ಹಾಕಿದ ಕೋರ್ಟ್, 45 ದಿನಗಳಲ್ಲಿ ದಂಡವನ್ನು ಪಾವತಿಸುವಂತೆ ಸೂಚಿಸಿದೆ.
ಕಾರಣ ಕೇಳಿದ್ದ ಟ್ವಿಟರ್: ಖಾತೆಗಳನ್ನು ನಿರ್ಬಂಧಿಸಲು ಸಾಮಾನ್ಯ ಆದೇಶಗಳನ್ನು ಹೊರಡಿಸುವ ಹಕ್ಕು ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಟ್ವಿಟರ್ ನ್ಯಾಯಾಲಯದಲ್ಲಿ ಹೇಳಿದೆ. ಇದಕ್ಕಾಗಿ, ಸರ್ಕಾರವು ಖಾತೆಯನ್ನು ನಿರ್ಬಂಧಿಸಲು ಕಾರಣವನ್ನು ತಿಳಿಸಬೇಕಿತ್ತು. ಇದರಿಂದಾಗಿ ತನ್ನ ಖಾತೆಯನ್ನು ಏಕೆ ನಿರ್ಬಂಧಿಸಲಾಗಿದೆ ಎಂಬುದನ್ನು ಕಂಪನಿಯು ಬಳಕೆದಾರರಿಗೆ ತಿಳಿಸುತ್ತದೆ. ಅದೇ ವೇಳೆ ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಟ್ವಿಟರ್ ನಿರ್ಬಂಧಿಸಲು ಆದೇಶ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ಇದರಿಂದ ಆಗಬಹುದಾದ ಹಿಂಸಾಚಾರಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದಿತ್ತು.
ಅಮೆರಿಕಾದಲ್ಲಿ ಗಂಡ.. ಇಂಡಿಯಾದಲ್ಲಿ ಹೆಂಡ್ತಿ.. ಡಿವೋರ್ಸ್‌ಗೆ ಅರ್ಜಿ: ಪತ್ನಿಗೆ ರಿಲೀಫ್- ಪತಿಗೆ ಶಾಕ್ ಕೊಟ್ಟ ಹೈಕೋರ್ಟ್
ಶಿಕ್ಷೆಯ ಬಗ್ಗೆ ತಿಳಿಸಿದ್ದರೂ ಆದೇಶ ಪಾಲಿಸಿಲ್ಲ: ಟ್ವಿಟರ್‌ಗೆ ನೋಟಿಸ್‌ಗಳನ್ನು ನೀಡಿದ್ದಲ್ಲದೆ, ಅದನ್ನು ಪಾಲಿಸದೇ ಇದ್ದರೆ ಆಗುವ ಅನಾಹುತಗಳ ಬಗ್ಗೆಯೂ ತಿಳಿಸಲಾಗಿತ್ತು. ಆದೇಶವನ್ನು ಪಾಲಿಸಲು ವಿಫಲವಾದರೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದು. ಇದು ಗೊತ್ತಿದ್ದರೂ ಆದೇಶ ಪಾಲಿಸಿಲ್ಲ. ಆದೇಶ ಪಾಲನೆ ವಿಳಂಬದ ಹಿಂದಿನ ಕಾರಣವನ್ನೂ ತಿಳಿಸಿಲ್ಲ. ಇದಾದ ಬಳಿಕ ಟ್ವಿಟರ್ ಇದ್ದಕ್ಕಿದ್ದಂತೆ ಕೋರ್ಟ್ ಮೆಟ್ಟಿಲೇರಿತ್ತು ಎಂದು ನ್ಯಾಯಾಲಯ ಹೇಳಿದೆ.
ಶವಗಳ ಅತ್ಯಾಚಾರ ಮಾಡುವ ಕಾಮುಕರಿಗೆ ಶಿಕ್ಷೆಯ ಚೌಕಟ್ಟು ರೂಪಿಸಿ: ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್ ಶಿಫಾರಸು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ